ಬೆಂಗಳೂರು: 5.05 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

ಮದುವೆ ಕಾರ್ಡ್ ನಲ್ಲಿ ಬಚ್ಚಿಟ್ಟಿದ 5.05ಕೋಟಿ ರೂ ಮೌಲ್ಯದ 5.49ಕೆಜಿ ಮಾದಕ ವಸ್ತುವನ್ನು ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮದುವೆ ಕಾರ್ಡ್ ನಲ್ಲಿ ಬಚ್ಚಿಟ್ಟಿದ 5.05ಕೋಟಿ ರೂ ಮೌಲ್ಯದ 5.49ಕೆಜಿ ಮಾದಕ ವಸ್ತುವನ್ನು ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಏರ್​ ಕಾರ್ಗೋ ಕಾಂಪ್ಲೆಕ್ಸ್​ನ ಕೊರಿಯರ್ ಟರ್ಮಿನಲ್​ನಲ್ಲಿ ಅಧಿಕಾರಿಗಳು ಶುಕ್ರವಾರ ಎಕ್ಸ್​ಪೋರ್ಟ್ ಕನ್​​ಸೈನ್​ಮೆಂಟ್ ತಪಾಸಣೆ ವೇಳೆ ಮದುವೆ ಕಾರ್ಡನಲ್ಲಿ ಪೌಡರ್ ಇರುವುದು ಪತ್ತೆಯಾಗಿತ್ತು. ಪೊಟ್ಟಣ ಪರಿಶೀಲಿಸಿದಾಗ 43 ಮದುವೆ ಆಮಂತ್ರಣ ಪತ್ರಿಕೆಗಳು ಮತ್ತು ಕೆಲವು ಉಡುಪುಗಳು ಅದರಲ್ಲಿತ್ತು. ಆಮಂತ್ರಣ ಪತ್ರಗಳನ್ನು ಕಾರ್ಡ್​ಬೋರ್ಡ್​ ಶೀಟ್​ನಿಂದ ತಯಾರಿಸಲಾಗಿದ್ದು, ಇದನ್ನು ಸುಲವಾಗಿ ಮಡಚಿ ಇಡಬಹುದಾಗಿತ್ತು.
ಹೆಚ್ಚಿನ ತಪಾಸಣೆ ಕೈಗೊಂಡಾಗ ಆ ಆಮಂತ್ರಣ ಪತ್ರದೊಳಗೆ ಪಾಲಿಥಿನ್ ಪೌಚ್​ಗಳಲ್ಲಿ ತುಂಬಿಸಿಟ್ಟ ಕ್ರಿಸ್ಟಲಿನ್ ಪೌಡರ್ ಪತ್ತೆಯಾಗಿದೆ. 43 ಆಮಂತ್ರಣ ಪತ್ರದೊಳಗೆ ಒಟ್ಟು 86 ಪೌಚ್​ಗಳು ಪತ್ತೆಯಾಗಿದ್ದು,  ಈ ಪೌಡರನ್ನು ಎಫಿಡ್ರೈನ್ ಎನ್ನಲಾಗುತ್ತಿದೆ.

ಸರಕು ಪೂರ್ತಿಯಾಗಿ ಮಧುರೈನ ಎಕ್ಸ್​ಪೋರ್ಟರ್​ ಒಬ್ಬರಿಗೆ ಸೇರಿದ್ದಾಗಿದ್ದು, ಅವರು ಆಸ್ಟ್ರೇಲಿಯಾಕ್ಕೆ ಇದನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದರು ಎಂಬ ಅಂಶ ಮೇಲ್ನೋಟಕ್ಕೆ ತಿಳಿದು ಬಂದಿದೆ.

ಪತ್ತೆಯಾದ ಒಟ್ಟು ಪೌಡರ್​ನ ತೂಕ 5.49 ಕೆಜಿ ಆಗಿದ್ದು, ಇದರ ಮೌಲ್ಯ 5.05 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್ ಡಿಪಿಸಿ ಕಾಯ್ದೆಯಡಿ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಮೂರು ದಿನಗಳ ಅವಧಿಯಲ್ಲಿ ಇದು ಎಫಿಡ್ರೈನ್ ಕಳ್ಳಸಾಗಣೆಯ ಎರಡನೇ ಪ್ರಯತ್ನವಾಗಿದೆ. ಫೆ.18ರಂದು ಕೂಡ 5 ಕಿಲೋ ತೂಕದ ಪೌಡರನ್ನು ಆಸ್ಟ್ರೇಲಿಯಾಕ್ಕೆ ಕಳ್ಳಸಾಗಣೆ ಮಾಡುವ ಪ್ರಯತ್ನ ನಡೆದಿತ್ತು. ಅದು ಕೂಡ ಮಧುರೈನಿಂದಲೇ ಕೊರಿಯರ್ ಆಗಿತ್ತು ಎಂಬ ಅಂಶ ಅಧಿಕಾರಿಗಳಿಂದ ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com