ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಸಂದರ್ಶನ ರೂಪದಲ್ಲಿ ಹಿಂಸೆ: ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ ನಿಯಮಗಳ ಉಲ್ಲಂಘನೆ  

ನಾಲ್ಕು-ನಾಲ್ಕೂವರೆ ವರ್ಷದ ಪುಟ್ಟ ಮಗುವನ್ನು ತಾಯಿ ರಚನಾ ನಗರದ ಪ್ರತಿಷ್ಠಿತ ಆಂಗ್ಲಮಾಧ್ಯಮ ಶಾಲೆಗೆ ಸೇರಿಸಲೆಂದು ಕರೆದುಕೊಂಡು ಹೋದರು. ಆಗ ಶಾಲೆಯ ಪ್ರಾಂಶುಪಾಲರು ಮಗುವನ್ನು ಸುಮಾರು 45 ನಿಮಿಷಗಳ ಕಾಲ ನಿರಂತರ ಸಂದರ್ಶನ ನಡೆಸಿದರಂತೆ.
ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಸಂದರ್ಶನ ರೂಪದಲ್ಲಿ ಹಿಂಸೆ: ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ ನಿಯಮಗಳ ಉಲ್ಲಂಘನೆ  

ಬೆಂಗಳೂರು: ನಾಲ್ಕು-ನಾಲ್ಕೂವರೆ ವರ್ಷದ ಪುಟ್ಟ ಮಗುವನ್ನು ತಾಯಿ ರಚನಾ ನಗರದ ಪ್ರತಿಷ್ಠಿತ ಆಂಗ್ಲಮಾಧ್ಯಮ ಶಾಲೆಗೆ ಸೇರಿಸಲೆಂದು ಕರೆದುಕೊಂಡು ಹೋದರು. ಆಗ ಶಾಲೆಯ ಪ್ರಾಂಶುಪಾಲರು ಮಗುವನ್ನು ಸುಮಾರು 45 ನಿಮಿಷಗಳ ಕಾಲ ನಿರಂತರ ಸಂದರ್ಶನ ನಡೆಸಿದರಂತೆ.

ಇಂಗ್ಲಿಷ್ ಅಕ್ಷರಗಳು, ಸಂಖ್ಯೆಗಳು, ಆಕಾರಗಳು, ಬಣ್ಣಗಳು, ಪ್ರಾಣಿಗಳು ಇತ್ಯಾದಿಗಳ ಗುರುತು ಹಿಡಿಯುವಂತೆ ನಿರಂತರವಾಗಿ ಪ್ರಾಂಶುಪಾಲರು ಕೇಳುತ್ತಾ ಹೋದರು. ಇಷ್ಟು ಚಿಕ್ಕ ಮಗುವಿಗೆ ಅಷ್ಟೊಂದು ಸಂದರ್ಶನ ಮಾಡಿದ್ದು ನೋಡಿ ಮಗುವಿನ ತಾಯಿ ರಚನಾ ಕಕ್ಕಾಬಿಕ್ಕಿಯಾದರು. ಸಾಮಾನ್ಯವಾಗಿ ನಮ್ಮ ಮಗ ಎಲ್ಲರ ಜೊತೆ ಮಾತನಾಡುತ್ತಾನೆ. ಆದರೆ ಶಾಲೆಗೆ ಹೋದಾಗ ಅಲ್ಲಿ ಭಯದಿಂದ ಅವನಿಗೆ ಮಾತೇ ಹೊರಬರಲಿಲ್ಲ.ಸಂದರ್ಶನ ಮುಗಿದ ಮೇಲೆ ಹೊರಗೆ ಕಾಯುತ್ತಿರಿ, ಆಮೇಲೆ ಪ್ರತ್ಯೇಕವಾಗಿ ಮಾತನಾಡುವುದಿದೆ ಎಂದರು ಎಂದು ರಚನಾ ಹೇಳುತ್ತಾರೆ.


ನಗರ ಪ್ರದೇಶಗಳಲ್ಲಿ ಶಿಕ್ಷಣ ವಾಣಿಜ್ಯೀಕರಣವಾಗುತ್ತಿದೆ ಎಂದು ಕೇಳಿಬರುತ್ತಿರುವ ಆರೋಪಗಳ ಮಧ್ಯೆ ಇಂದು ಮಕ್ಕಳು ಮೂರು ವರ್ಷಕ್ಕೆ ನರ್ಸರಿ ಶಾಲೆ ಮೆಟ್ಟಿಲು ಹತ್ತುವಾಗಲೇ ಎಲ್ಲವನ್ನೂ ತಿಳಿದುಕೊಂಡಿರಬೇಕೆಂದು ಶಾಲೆಗಳಲ್ಲಿ ಬಯಸುತ್ತಾರೆ. ಪೋಷಕರು ಎಲ್ಲ ಹೇಳಿಕೊಟ್ಟು ಮಕ್ಕಳನ್ನು ತಯಾರು ಮಾಡಿರಬೇಕು ಎಂದು ಬಯಸುತ್ತಾರೆ. ಇದು 2009ರ ಮಕ್ಕಳ ಮುಕ್ತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿದೆ ಎಂಬ ಮಾತು ಕೇಳಿಬರುತ್ತಿದೆ.


ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಮಗುವಿನ ಶಾಲಾ ಪ್ರವೇಶಾತಿ ವೇಳೆ ಸಂದರ್ಶನ ಮಾಡುವಂತಿಲ್ಲ. ಒಂದು ವೇಳೆ ಮಾಡಿ ಕಾನೂನು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ. ಮಕ್ಕಳ ಮೇಲೆ ತಾರತಮ್ಯ ತೋರಿಸದೆ, ಪಾರದರ್ಶಕವಾಗಿ ಶಾಲೆಗಳು ಮಕ್ಕಳ ಪ್ರವೇಶ ಪ್ರಕ್ರಿಯೆಯನ್ನು ಮಾಡಬೇಕು. ಮಕ್ಕಳು ಮತ್ತು ಪೋಷಕರನ್ನು ಸಂದರ್ಶನ ಮಾಡಿ ಅದರ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ಮಾಡಬಾರದು ಎಂದು ಹೇಳುತ್ತದೆ.


ಈಗ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಸಮಯ. ಇಂತಹ ಸಮಯದಲ್ಲಿ ಶಾಲೆಗಳು ನೀತಿ, ನಿಯಮಗಳನ್ನು ಹೆಚ್ಚಾಗಿ ಉಲ್ಲಂಘಿಸುತ್ತವೆ. ''ನಮ್ಮ ಬಳಿ ಶಾಲೆಯಲ್ಲಿ ಸಂದರ್ಶನ ಮಾಡುವಾಗ ಜಾತಿ, ಆದಾಯ, ಶಿಕ್ಷಣದ ಬಗ್ಗೆ ಕೇಳಿದರು. ನನ್ನ ನಾಲ್ಕು ವರ್ಷದ ಮಗುವಿಗೆ 1ರಿಂದ 20ರವರೆಗೆ ಅಂಕೆಗಳನ್ನು ಎಣಿಸು ಎಂದು ಹೇಳಿದರು. ಇಂಗ್ಲಿಷ್ ಅಕ್ಷರಗಳು, ಹಣ್ಣು-ತರಕಾರಿಗಳ ಹೆಸರು ಹೇಳುವಂತೆ ಹೇಳಿದರು. ಕ್ಯಾಥೋಲಿಕ್ ಶಾಲೆಯೊಂದರಲ್ಲಿ ಪ್ರಾರ್ಥನೆ ಕೂಡ ಹೇಳುವಂತೆ ಹೇಳಿದರು, ಆಕಾರ, ಗೆರೆಗಳನ್ನು ಗುರುತಿಸುವಂತೆ ಸೂಚಿಸಿದರು. ಮಕ್ಕಳಿಗೆ ಇನ್ನೂ ಹೇಳಿಕೊಡದಿರುವಾಗ ಇವುಗಳನ್ನೆಲ್ಲ ತಿಳಿದಿರಲು ಹೇಗೆ ಸಾಧ್ಯ? ಮಕ್ಕಳಿಗೆ ಶಾಲೆ ಮೆಟ್ಟಿಲು ಹತ್ತುವಾಗಲೇ ಇವುಗಳನ್ನೆಲ್ಲ ಹೇಳಿಕೊಡಬೇಕೆ ಎಂದು ಮತ್ತೊಬ್ಬ ಮಗುವಿನ ಪೋಷಕ ಪ್ರದೀಪ್ ಕೇಳುತ್ತಾರೆ.


ಮತ್ತೊಬ್ಬ ಪೋಷಕರ ಮಗುವಿನಲ್ಲಿ ಪ್ರಶ್ನೆ ಕೇಳಿದಾಗ ಉತ್ತರಿಸದ್ದಕ್ಕೆ ಏನಾದರೂ ಸಮಸ್ಯೆಯಿದೆಯೇ ಎಂದು ಕೇಳಿದ್ದರಂತೆ. ಕಿವಿ, ಕಣ್ಣು, ಮಾತು ಎಲ್ಲವೂ ಸರಿಯಾಗಿ ಬರುತ್ತದೆ ಎಂದು ಸರ್ಟಿಫಿಕೇಟ್ ತನ್ನಿ ಎಂದರಂತೆ.

ಇಂತಹ ಪರಿಸ್ಥಿತಿ ಬಗ್ಗೆ ಮಾತನಾಡಿದ ಚೈಲ್ಡ್ ರೈಟ್ಸ್ ಟ್ರಸ್ಟ್ ನ ನಾಗಸಿಂಹ ಜಿ ರಾವ್, ಪುಟ್ಟ ಮಕ್ಕಳ ಮೇಲೆ ಸಂದರ್ಶನ ಹೆಸರಿನಲ್ಲಿ ಒತ್ತಡ ಹಾಕಲಾಗುತ್ತಿದೆ ಎಂದು ನಮ್ಮ ಬಳಿ ಹಲವು ದೂರುಗಳು ಬಂದಿವೆ. ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 13 ಮತ್ತು 16ರ ಪ್ರಕಾರ, ಸಂದರ್ಶನ, ಪರೀಕ್ಷೆ ಹೆಸರಿನಲ್ಲಿ ಮಕ್ಕಳಿಗೆ ಕಿರುಕುಳ ನೀಡಬಾರದು. ಕೆಲವು ಶಾಲೆಗಳಲ್ಲಿ ಪೋಷಕರನ್ನು ಬೇರೆಡೆ ಕೂರಿಸಿ ಮಕ್ಕಳನ್ನು ಶಿಕ್ಷಕಿಯರು ಹೂದೋಟಕ್ಕೆ, ಉದ್ಯಾನವನಕ್ಕೆ ಕರೆದುಕೊಂಡು ಹೋಗಿ ಹಣ್ಣು, ಹೂವುಗಳು, ಬಣ್ಣಗಳ ಗುರುತು ಹಿಡಿಯುವಂತೆ ಹೇಳುತ್ತಾರೆ. ನಂತರ ಶಿಕ್ಷಕಿಯರು ಬಂದು ಪ್ರಾಂಶುಪಾಲರಿಗೆ ಮಗುವಿನ ಬಗ್ಗೆ ವರದಿ ನೀಡುತ್ತಾರೆ. ಪೋಷಕರಿಗೆ ಏನೂ ಗೊತ್ತಾಗುವುದಿಲ್ಲ, ಮಗುವಿಗೆ ಶಾಲೆಗೆ ಪ್ರವೇಶ ಸಿಕ್ಕಿದೆಯೇ ಅಥವಾ ಇಲ್ಲವೇ ಎಂದಷ್ಟು ಮಾತ್ರ ಹೇಳುತ್ತಾರೆ. ಮಕ್ಕಳು 8ನೇ ತರಗತಿಗೆ ಹೋಗುವವರೆಗೆ ಇಂತಹ ಯಾವುದೇ ಪರೀಕ್ಷೆ, ಸಂದರ್ಶನ ಮಾಡಬಾರದು ಎಂಬ ನಿಯಮ ಶಿಕ್ಷಣ ಹಕ್ಕು ಕಾಯ್ದೆಯಲ್ಲಿದೆ, ಆದರೆ ಅದು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತದೆ ಎನ್ನುವುದು ಪ್ರಶ್ನೆ ಎನ್ನುತ್ತಾರೆ. 


ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ, ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ನಿಯಮ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗಸಿಂಹ ರಾವ್ ಒತ್ತಾಯಿಸುತ್ತಾರೆ. 

ಈ ಬಗ್ಗೆ ಪ್ರತಿಕ್ರಿಯೆ ಕೇಳೋಣವೆಂದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ ಜಿ ಜಗದೀಶ್, ರಾಜ್ಯ ಮಕ್ಕಳ ಹಕ್ಕು ರಕ್ಷಣೆ ಆಯೋಗದ ಅಧ್ಯಕ್ಷ ಆಂಟನಿ ಸೆಬಾಸ್ಟಿಯನ್ ಸಂಪರ್ಕಕ್ಕೆ ಸಿಗಲಿಲ್ಲ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com