ಸ್ಥಿತಿವಂತರು ಬಿಪಿಎಲ್ ಪಡಿತರ ಚೀಟಿಯನ್ನು ಇಲಾಖೆಗೆ ವಾಪಸ್ ನೀಡಿ: ಸಚಿವ ಗೋಪಾಲಯ್ಯ

ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅರ್ಹಬಡವರಿಗೆ ನ್ಯಾಯಯುತವಾಗಿ ಪಡಿತರ ಧಾನ್ಯ ದೊರಕಿಸಿಕೊಡುವುದು ತಮ್ಮ ಪ್ರಧಾನ ಆದ್ಯತೆಯಾಗಿದ್ದು, ಬಡವರ ಪಡಿತರ ಕಸಿಯುತ್ತಿರುವ ಅನುಕೂಲಸ್ಥರು ತಮ್ಮ ಬಳಿಯಿರುವ ಪಡಿತರ ಕಾರ್ಡ್‌ಗಳನ್ನು ಕೂಡಲೇ ಇಲಾಖೆಗೆ ಒಪ್ಪಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ. 
ಗೋಪಾಲಯ್ಯ
ಗೋಪಾಲಯ್ಯ

ಬೆಂಗಳೂರು: ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅರ್ಹಬಡವರಿಗೆ ನ್ಯಾಯಯುತವಾಗಿ ಪಡಿತರ ಧಾನ್ಯ ದೊರಕಿಸಿಕೊಡುವುದು ತಮ್ಮ ಪ್ರಧಾನ ಆದ್ಯತೆಯಾಗಿದ್ದು, ಬಡವರ ಪಡಿತರ ಕಸಿಯುತ್ತಿರುವ ಅನುಕೂಲಸ್ಥರು ತಮ್ಮ ಬಳಿಯಿರುವ ಪಡಿತರ ಕಾರ್ಡ್‌ಗಳನ್ನು ಕೂಡಲೇ ಇಲಾಖೆಗೆ ಒಪ್ಪಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ. 
  
ರಾಜ್ಯದ ಆಹಾರ ಇಲಾಖೆಯನ್ನು ಸದೃಢಗೊಳಿಸಲು ಒತ್ತು ನೀಡಲಿದ್ದು, ಈ ಸಂಬಂಧ ಎಲ್ಲಾ 30 ಜಿಲ್ಲೆಗಳಿಗೂ ಭೇಟಿ ನೀಡಿ ಆಹಾರ ಇಲಾಖೆಯ ಕಾರ್ಯವೈಖರಿಯನ್ನು ಬದಲಾಯಿಸುವುದಾಗಿ ಘೋಷಿಸಿದ್ದಾರೆ.
  
ನಗರದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಆಹಾರ ಇಲಾಖೆಯ ಕಚೇರಿ, ಯಶವಂತಪುರದಲ್ಲಿರುವ ಆಹಾರ ಸಗಟು ಮಳಿಗೆಗಳಿಗೆ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಇನ್ನು ಮುಂದೆ ಕಚೇರಿಗಳಿಗೆ ಅಧಿಕಾರಿಗಳು ಮತ್ತು ನೌಕರರು ಗೈರುಹಾಜರಾದರೆ ಅದನ್ನು ಅಶಿಸ್ತು ಎಂದು ಭಾವಿಸಿ ಶಿಸ್ತುಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ ಎಂದರು. 

ಆಹಾರ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಹಾಜರಾತಿ ಪುಸ್ತಕ ಪರಿಶೀಲಿಸಿದಾಗ ಶೇ.೫೦ ಕ್ಕಿಂತ ಕಡಿಮೆ ಹಾಜರಾತಿ ಇರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ಎಲ್ಲಾ ಜಿಲ್ಲೆಗಳ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರ ಸಭೆ ನಡೆಸಿ, ಇಲಾಖೆ ಕಾರ್ಯನಿರ್ವಹಣೆ ಬಗ್ಗೆ ಪರಾಮರ್ಶೆ ನಡೆಸಿ ಆಡಳಿತ ವ್ಯವಸ್ಧೆಯನ್ನು ಚುರಕುಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. 

ಸ್ಥಿತಿವಂತರು ಪಡೆದಿರುವ ಬಿಪಿಎಲ್ ಪಡಿತರ ಚೀಟಿಯನ್ನು ವಾಪಸ್ ಮಾಡಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ಅವ್ಯವಸ್ಥೆ, ಅಕ್ಕಿ ಪೋಲಾಗುವುದು ಸೇರಿದಂತೆ ಮತ್ತಿತರರ ಮಾಹಿತಿ ಪಡೆಯುತ್ತಿದ್ದು, ಇವುಗಳಿಗೆ ಸೂಕ್ತ ಪರಿಹಾರ ರೂಪಿಸಲಾಗುವುದು. ಆಹಾರ ಇಲಾಖೆಯಲ್ಲಿ ಹಿಂದೆ ಏನಾಗಿತ್ತೋ ತಮಗೆ ಗೊತ್ತಿಲ್ಲ. ಆಹಾರ ಇಲಾಖೆ ಬಡವರ ಪರ ಕೆಲಸ ಮಾಡಬೇಕು ಎಂದರು. 

ಪಡಿತರದಾರರಿಗೆ 7 ಕೆಜಿ ಅಕ್ಕಿ ಪೂರೈಕೆಯಲ್ಲಿ 2 ಕೆಜಿ ಅಕ್ಕಿ ಕಡಿತಗೊಳಿಸುವ ಬಗ್ಗೆ ಪ್ರತಿಕ್ರಿಯಿಸಿದ ಗೋಪಾಲಯ್ಯ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್ ಮಂಡಿಸಿದ ಬಳಿಕವಷ್ಟೇ ಈ ಬಗ್ಗೆ ಹೇಳಲು ಸಾಧ್ಯ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com