ಭೂತವನ್ನು ಬೆನ್ನಟ್ಟಿದಂತಿತ್ತು: ಭೂಗತ ಪಾತಕಿ ರವಿ ಪೂಜಾರಿ ಸೆರೆ ಕುರಿತು ಎಡಿಜಿಪಿ ಮಾಹಿತಿ

ಭೂಗತ ಪಾತಕಿ ರವಿ ಪೂಜಾರಿ ಸೆರೆ ಹಿಂದೆ ಎಡಿಜಿಪಿ ಅಮರ್ ಕುಮಾರ್ ಪಾಂಡೆಯವರ ಪಾತ್ರ ಮಹತ್ವದ್ದಾಗಿದ್ದು, ಈ ಗ್ಯಾಂಗ್'ಸ್ಟರ್ ಬಂಧನಕ್ಕೆ ಕಳೆದ 20 ತಿಂಗಳುಗಳಿಂದ ಎಡೆಬಿಡದೆ ಶ್ರಮಪಟ್ಟಿದ್ದಾರೆ. 
ಭೂತವನ್ನು ಬೆನ್ನಟ್ಟಿದಂತಿತ್ತು: ಭೂಗತ ಪಾತಕಿ ರವಿ ಪೂಜಾರಿ ಸೆರೆ ಕುರಿತು ಎಡಿಜಿಪಿ ಮಾಹಿತಿ
ಭೂತವನ್ನು ಬೆನ್ನಟ್ಟಿದಂತಿತ್ತು: ಭೂಗತ ಪಾತಕಿ ರವಿ ಪೂಜಾರಿ ಸೆರೆ ಕುರಿತು ಎಡಿಜಿಪಿ ಮಾಹಿತಿ

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಸೆರೆ ಹಿಂದೆ ಎಡಿಜಿಪಿ ಅಮರ್ ಕುಮಾರ್ ಪಾಂಡೆಯವರ ಪಾತ್ರ ಮಹತ್ವದ್ದಾಗಿದ್ದು, ಈ ಗ್ಯಾಂಗ್'ಸ್ಟರ್ ಬಂಧನಕ್ಕೆ ಕಳೆದ 20 ತಿಂಗಳುಗಳಿಂದ ಎಡೆಬಿಡದೆ ಶ್ರಮ ಪಟ್ಟಿದ್ದಾರೆ. 

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಎಡಿಜಿಪಿ ಅಮರ್ ಕುಮಾರ್ ಪಾಂಡೆಯವರು, ರವಿ ಪೂಜಾರಿ ಬಂಧಿಸಲು ತಾವು ಪಟ್ಟ ಶ್ರಮ ಹಾಗೂ ಎದುರಿಸಿದ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 

ರವಿ ಪೂರಾರಿಯನ್ನು ಸೆನಗಲ್ ನಲ್ಲಿ ನೋಡಿದಾಗ ಇವನೇನಾ ಅಂಡರ್ ವರ್ಲ್ಡ್ ಡಾನ್ ಎಂದು ಆಶ್ಚರ್ಯವಾಗಿತ್ತು. ನಮ್ಮನ್ನು ಮೊದಲು ನೋಡಿದಾಗ ನೀವು ಭಾರತೀಯರಾ ಎಂದು ಹಿಂದಿಯಲ್ಲಿ ಪ್ರಶ್ನೆ ಮಾಡಿದ್ದ. ಹೌದು, ನಿನ್ನ ಜೊತೆಯೇ ನಾವು ಭಾರತಕ್ಕೆ ಮರಳುವುದು ಎಂದು ಉತ್ತರಿಸಿದ್ದೆವು ಎಂದು ಹೇಳಿದರು. 

ಮಂಗಳೂರಿನವನಾದ ಈತನ ಮೂಲ ಹೆಸರು ರವಿ ಪ್ರಕಾಶ್ ರೂಜಾರಿ. ಚೋಟಾ ರಾಜನ್ ಈತನ ಹೆಸರನ್ನು ತನೀಫ್ ಫರ್ನಾಂಡೀಸ್ ಎಂದು ಬದಲಿಸಿದ್ದ. ಬುರ್ಕಿನಾ ಫಾಸೋದಲ್ಲಿ ಈತ ಅಂಥೋನಿ ಫರ್ನಾಂಡೀಸ್, ಸೆಲೆಗಲ್ ನಲ್ಲಿ ರಾಕಿ ಫರ್ನಾಂಡೀಸ್ ಎಂದು ಹೆಸರು ಇಟ್ಟುಕೊಂಡು ನೆಲೆಸಿದ್ದ ಎಂದು ತಿಳಿದುಬಂದಿದೆ. 

ರವಿ ಪೂಜಾರಿ ಭಾರತದಲ್ಲಿರುವ ತನ್ನ ಸಹಚರರ ಮೂಲಕ ವೈದ್ಯರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಜ್ಯೂವೆಲ್ ಮಾಲೀಕರು, ನಟರು ಹಾಗೂ ರಾಜಕೀಯ ವ್ಯಕ್ತಿಗಳನ್ನು ಗುರುತಿಸುತ್ತಿದ್ದ. ಬಳಿಕ ಮೊಬೈಲ್ ಸಂಖ್ಯೆ ಪಡೆದು ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡುತ್ತಿದ್ದ. 2005ರಲ್ಲಿ ಆರ್'ಟಿ ನಗರದಲ್ಲಿ ಉದ್ಯಮಿ ಸುಬ್ಧ ರಾಜು ಹಣಕೊಡದಿದ್ದಕ್ಕೆ ರವಿ ಪೂಜಾರಿ ಸಹಚರರು ಎಂದು ಹೇಳಿಕೊಂಡು ದುಷ್ಕರ್ಮಗಿಳು ಕೊಲೆ ಮಾಡಿದ್ದರು. 

2007 ಫೆ.5 ರಂದು ಹಫ್ತಾ ನೀಡುವಂತೆ ಕರೆ ಮಾಡಿ ಬೆದರಿಸಿದ್ದ ರವಿ ಪೂಜಾರಿ, ಹಫ್ತಾ ಕೊಡಲಿಲ್ಲವೆಂಬ ಕಾರಣಕ್ಕೆ ಸಹಚರರ ಮೂಲಕ ಬೆಘಲೂರಿನ ಶಬನಂಸೇರಿದಂತೆ ಇಬ್ಬರು ರಿಯಲ್ ಎಸ್ಟೇಟ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು. 2009ರಲ್ಲಿ ಇಂದಿರಾನಗರದಲ್ಲಿದ್ದ ಖಾಸಗಿ ವಾಹಿನಿಯೊಂದರ ಕಚೇರಿ ಮೇಲೆ ರವಿ ಪೂಜಾರಿ ಸಹಚರರು ದಾಳಿ ನಡೆಸಿದ್ದರು. ಈ ರೀತಿ ಹಲವು ಅಪರಾಧ ಕೃತ್ಯಗಳಲ್ಲಿ ಆರೋಪಿ ಭಾಗಿಯಾಗಿದ್ದಾನೆ. ಈ ಎಲ್ಲಾ ಪ್ರಕರಣಗಳಲ್ಲಿ ಹಂತ ಹಂತವಾಗಿ ತನಿಖೆ ನಡೆಯಲಿದೆ ಎಂದು ವಿವರಿಸಿದ್ದಾರೆ. 

ಇತ್ತೀಚಿನ ವರ್ಷಗಳಲ್ಲಿ ವಿದೇಶದಿಂದ ಗಡೀಪಾರಾಗಿ ಬಂದ 6ನೇಕ ಪ್ರಮುಖ ಅಂಡರ್ ವರ್ಲ್ಡ್ ಡಾನ್ ಪೂಜಾರಿ ಆಗಿದ್ದಾನೆ. ಇದಕ್ಕೂ ಮುನ್ನ 2002ರಲ್ಲಿ ಮುತ್ತಪ್ಪ ರೈಯನ್ನು ಯುಇಎಯಿಂದ, 2003ರಲ್ಲಿ ಇಕ್ಬಾಲ್ ಅಬು ಸಲೇನನ್ನು ಪೊರ್ಚುಗಲ್ ನಿಂದ, 2015ರಲ್ಲಿ ಛೋಟಾ ರಾಜನ್ ನನ್ನು ಇಂಡೋನೇಷ್ಯಾದಿಂದ ಅದೇ ವರ್ಷ ಬನ್ನಂಜೆ ರಾಜಾನನ್ನು ಮೊರೋಕ್ಕೋದಿಂದ ಗಡೀಪಾರು ಮಾಡಿಸಿಕೊಂಡು ಬರುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದರು. 

ರವಿ ಪೂಜಾರಿ 97 ಪ್ರಕರಣಗಳಲ್ಲಿ ರಾಜ್ಯದ ಪೊಲೀಸರಿಗೆ ಬೇಕಿದ್ದ. ಭೂಗತ ಪಾತಕಿ ಛೋಟಾ ರಾಜನ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಈತ ಶಾರ್ಪ್ ಶೂಟರ್ ಆಗಿದ್ದ. 1994ರಲ್ಲಿ ಮಹಾರಾಷ್ಟ್ರದಲ್ಲಿ ಪ್ರಮುಖ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಜೈಲಿನಿಂದ ಜಾಮೀನನ ಮೇಲೆ ಹೊರಬಂದ ಬಳಿಕ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ನಂತರ ಮುಂಬೈ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. 

ರವಿ ಪೂಜಾರಿ ಹೇಗಿದ್ದಾನೆಂಬುದು ನಮಗೆ ಗೊತ್ತಿರಲಿಲ್ಲ. ಭೂತದ ಬೆನ್ನಟ್ಟಿದಂತಿತ್ತು. 1994ರಲ್ಲಿದ್ದ ಆತನ ಫೋಟೋವನ್ನು ಹಿಡಿದು ಹುಡುಕಾಟ ಆರಂಭಿಸಿದ್ದೆವು. ಇಂಟರ್ನೆಟ್ ನಲ್ಲಿ ಹರಿದಾಡುತ್ತಿದ್ದ ಫೋಟೋಗಳು ಮಾತ್ರ ನಮ್ಮ ಬಳಿ ಇದ್ದವು. ಇದರಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಫೋಟೋ ಕೂಡ ಇದ್ದವು. ಇಂಟರ್ನೆಟ್ ಮೂಲಕ ರವಿ ಪೂಜಾರಿ ಸಂಪರ್ಕಕ್ಕೆ ಸಿಗುತ್ತಿರುವ ಕುರಿತು ಸುದ್ದಿಗಳಲ್ಲಿ ತಿಳಿದುಕೊಂಡಿದ್ದೆವು. ಇಂಟರ್ನೆಟ್ ಪ್ರೊಟೋಕಾಲ್'ನ್ನು ರವಿ ಬಳಸುತ್ತಿದ್ದ ಎಂಬುದು ತಿಳಿದುಬಂದಿತ್ತು. ಈ ಮೂಲಕ ರವಿ ಬೆದರಿಕೆ ಕರೆಗಳನ್ನು ಮಾಡುತ್ತಿದ್ದ. ಆದರೆ, ಆತನ ಸಂಖ್ಯೆ ಮಾತ್ರ ಕಣ್ಮರೆಯಾಗುತ್ತಿತ್ತು. ವಿವಿಧ ದೇಶಗಳ ಸಿಮ್ ಗಳನ್ನು ಬಳಸಿಕೊಂಡು ರವಿ ಬೆದರಿಕೆ ಕರೆಗಳನ್ನು ಮಾಡುತ್ತಿದ್ದ. ಎರಡು ಭಾರಿ ಫೋನ್ ಮಾಡಬೇಕೆಂದರೂ ಕೂಡ ಆದ ಒಂದು ಸಿಮ್ ಬಳಕೆ ಮಾಡುತ್ತಿರಲಿಲ್ಲ ಎಂದು ಅಮರ್ ತಿಳಿಸಿದ್ದಾರೆ. 

1994ರಲ್ಲಿ ಆರೋಪಿ ರವಿ ಪೂಜಾರಿ ಮೈಸೂರಿನ ನಕಲಿ ವಿಳಾಸ ನೀಡಿ ವೀಸಾ ಮತ್ತು ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ. ಬಳಿಕ ನೇಪಾಳಕ್ಕೆ ಹೋಗಿ, ಅಲ್ಲಿಂದ ಬ್ಯಾಂಕಾಕ್, ಉಗಾಂಡಕ್ಕೆ ತೆರಳಿ ಸೆಲೆಗಲ್ ದೇಶಕ್ಕೆ ಹೋಗಿ ನೆಲೆಸಿದ್ದ. ಮೂರು ವರ್ಷ ಬುರ್ಕಾನಾ ಫಾಸೋದಲ್ಲಿ ವಾಸವಾಗಿದ್ದ. ಈ ಮಧ್ಯೆ ಅಮೆರಿಕ್ಕೂ ಹೋಗಿ ಬಂದಿದ್ದಾನೆ. ಮಲೇಷ್ಯಾ, ಇಂಡೋನೇಷ್ಯಾಕ್ಕೂ ಹೋಗಿದ್ದಾನೆ. ಈ ವೇಳೆ ಭಾರತಕ್ಕೆ ಬಂದಿರುವ ಮಾಹಿತಿ ಲಭ್ಯವಾಗಿಲ್ಲ. ಆರೋಪಿ ಕಳೆದ 12 ವರ್ಷದಿಂದ ಸೆನಗಲ್ ನಲ್ಲಿಯೇ ನೆಲೆಸಿದ್ದ. 

2018ರ ಜು.18ರಿಂದ ಕರ್ನಾಟಕದ ಪೊಲೀಸ್ ತಂಡ ಆರೋಪಿಯ ಪತ್ತೆಗೆ ತೀವ್ರ ನಿಗಾವಹಿಸಿ ರಾ ಸಂಸ್ಥೆ ಸೇರಿದಂತೆ ಎಲ್ಲಾ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿತ್ತು. ಆರು ತಿಂಗಳುಗಳ ನಂತರ ಆರೋಪಿ ಸೆಲೆಗಲ್ ನ ರಾಜಧಾರಿ ಡಕಾರ್ ನಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಸ್ಥಳೀಯವಾಗಿ ಪ್ರಭಾವಿಯಾಗಿದ್ದ ರವಿ ಪೂಜಾರಿ ಕ್ರಿಕೆಟ್ ಟೂರ್ನಮೆಂಟ್ ಗಲನ್ನು ಆಯೋಜಿಸುತ್ತಿದ್ದ. ಟೂರ್ನಮೆಂಟ್ ವೊಂದಕ್ಕೆ ಆರೋಪಿ ಮುಖ್ಯ ಅತಿಥಿಯಾಗಿ ಹೋಗಿದ್ದ. ಈ ಟೂರ್ನಿಯ ಉದ್ಘಾಟನೆಯ ಫೋಟೋ ಸ್ಥಳೀಯ ಮಾಧ್ಯಗಳಲ್ಲಿ ಬಿತ್ತರವಾಗಿತ್ತು. ತನಿಖಾ ಸಂಸ್ಥೆಯೊಂದು ಕಾರ್ಯಕ್ರಮದ ಪೋಟೋ ಕಳುಹಿಸಿ ಗುರುತು ಪತ್ತೆ ಹಚ್ಚುವಂತೆ ಕೇಳಿತ್ತು. ಆಳವಾಗಿ ತನಿಖೆ ನಡೆಸಿದ ಬಳಿಕ ಈತನೇ ರವಿ ಪೂಜಾರಿ ಎಂಬುದು ಖಾತ್ರಿಪಡಿಸಿಕೊಂಡು ಬಲೆಗೆ ಕೆಡವಿದೆ ಎಂದು ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com