ಕೊಪ್ಪಳ: ಅವಧಿಗೆ ಮುನ್ನ ತೆನೆಕಟ್ಟಿದ ಭತ್ತ, ಆತಂಕದಲ್ಲಿ ಅನ್ನದಾತ!

ಅದು ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ. ಭತ್ತದ ನಾಡು ಎಂದು ಖ್ಯಾತಿ ಪಡೆದ ಭತ್ತದ ಕಣಜ. ಇಲ್ಲಿ ಬೆಳೆಯುವ ಭತ್ತ  ಒಂದೊಮ್ಮೆ ವಿದೇಶಗಳಿಗೆ ರಫ್ತು ಆಗುತ್ತಿತ್ತು ಹಾಗೂ ಪಕ್ಕದ ರಾಜ್ಯಗಳಿಗೂ ರಫ್ತು ಮಾಡಲಾಗುತ್ತದೆ. ಆದ್ರೆ ಇದೀಗ ಈ ಪ್ರದೇಶ ಒಂದಲ್ಲ ಒಂದು ಸಮಸ್ಯೆಗೆ ಸುದ್ದಿಯಾಗುತ್ತಿದೆ.
ಭತ್ತ
ಭತ್ತ

ಕೊಪ್ಪಳ: ಅದು ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ. ಭತ್ತದ ನಾಡು ಎಂದು ಖ್ಯಾತಿ ಪಡೆದ ಭತ್ತದ ಕಣಜ. ಇಲ್ಲಿ ಬೆಳೆಯುವ ಭತ್ತ  ಒಂದೊಮ್ಮೆ ವಿದೇಶಗಳಿಗೆ ರಫ್ತು ಆಗುತ್ತಿತ್ತು ಹಾಗೂ ಪಕ್ಕದ ರಾಜ್ಯಗಳಿಗೂ ರಫ್ತು ಮಾಡಲಾಗುತ್ತದೆ. ಆದ್ರೆ ಇದೀಗ ಈ ಪ್ರದೇಶ ಒಂದಲ್ಲ ಒಂದು ಸಮಸ್ಯೆಗೆ ಸುದ್ದಿಯಾಗುತ್ತಿದೆ.

ಹೌದು! ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ, ಕನಕಗಿರಿ, ರಾಯಚೂರಿನ ಸಿಂಧನೂರ ಗಡಿ ಭಾಗದ ವರೆಗೂ ಕಣ್ಣು ಹಾಯಿಸಿದಷ್ಟು ಹೊಲಗಳು ಭತ್ತದ ಬೆಳೆಯ ಹಸಿರಿನಿಂದ ಕಂಗೊಳಿಸುತ್ತವೆ. ಭತ್ತ ಬೆಳೆಗೆ ಈ ಪ್ರದೇಶಗಳು ಅಷ್ಟೊಂದು ಖ್ಯಾತಿ. ಆದರೀಗ ಅದೇ ಭತ್ತದ ಬೆಳೆ ರೈತರ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ಈ ಭಾಗದ ರೈತರು ವರ್ಷದಲ್ಲಿ ಎರಡು ಸಲ ಭತ್ತದ ಬೆಳೆಯನ್ನು ಬೆಳೆಯುತ್ತಾರೆ. ಈ ಸಲ ತುಂಗಾಭದ್ರ ಜಲಾಶಯದಲ್ಲಿ ಎರಡನೇ ಬೆಳೆಗೆ ಆಗುವಷ್ಟು ನೀರು ಸಮೃದ್ಧವಾಗಿರುವುದರಿಂದ ರೈತರು ಎರಡನೇ ಬೆಳೆಯನ್ನು ಬಿತ್ತಿದ್ದಾರೆ. 60 ರಿಂದ 75 ದಿನಗಳಗೆ ತೆನೆ ಕಟ್ಟಬೇಕಾದ ಬೆಳೆ, ಬಿತ್ತಿದ 20 ದಿನಗಳಲ್ಲಿ ಭತ್ತ ತೆನೆ ಕಟ್ಟಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಇದೇ ಮೊದಲ ಸಲ ಈ ರೀತಿ ತೆನೆ ಕಟ್ಟಿದ್ದಾಗಿ ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕಳೆದ ನಾಲೈದು ವರ್ಷಗಳಿಂದ ಮಳೆ ಕೊರತೆ , ನೀರಿನ ಕೊರತೆಯಿಂದ ಈ ಭಾಗದ ರೈತರು ಕೇವಲ ಒಂದೇ ಒಂದು ಬೆಳೆ ತೆಗೆಯುತ್ತಿದ್ದರು. ಈ ಬಾರಿ ಎರಡನೇ ಬೆಳೆಗೆ ನೀರು ಬಿಟ್ಟಿರುವುದರಿಂದ ಬಿತ್ತಿದ್ದಾರೆ. ಆದ್ರೆ 60 ದಿನಕ್ಕೆ ಬಿಡೋ ಭತ್ತದ ತೆನೆ ಇದೀಗ 20 ದಿನಗಳಲ್ಲಿಯೇ ಕಟ್ಟಿದ ಹಿನ್ನೆಲೆ ಎಕರೆಗೆ ಕೇವಲ 10 ರಿಂದ 15 ಚೀಲ ಬಂದ್ರೆ ಹೆಚ್ಚಾಯ್ತು ಅಂತಾ ಹೇಳುತ್ತಾರೆ. ಇದು ಸತ್ವಭರಿತವಾಗಿರುವುದಿಲ್ಲ. 60 ದಿನಗಳ ನಂತರ ತೆನೆ ಕಟ್ಟಿದ್ದರೆ ಒಂದು ಸಸಿಯಲ್ಲಿ 50 ರಿಂದ 60 ಗೊಂಚಲುಗಳು ಕಟ್ಟುತ್ತವೆ.ಇದರಿಂದ ಎಕರೆಗೆ 40 ರಿಂದ 45 ಚೀಲ ಭತ್ತ ಬರುತ್ತಿತ್ತು ಎನ್ನುತ್ತಾರೆ. ಈಗ 20 ದಿನಗಳಲ್ಲಿ ಕಟ್ಟಿರುವ ತೆನೆಯಲ್ಲಿ ಗೊಂಚಲು ಕಡಿಮೆ ಇದೆ. ಇದು ರೈತರಿಗೆ ತುಂಬಲಾರದ ನಷ್ಟ. ಹಾಗಾಗಿ ಕೃಷಿ ವಿಜ್ಞಾನಿಗಳು ಇದನ್ನು ಪರಿಶೀಲಿಸಬೇಕು. ಅಧಿಕಾರಿಗಳು ರೈತರ ಸಂಕಷ್ಟಕ್ಕೆ ನೆರವಾಗಬೇಕು. ಕಳೆದ ಬಾರಿ ಮಳೆಯಾಗಿ ಭತ್ತ ನೆಲಕ್ಕಚ್ಚಿ ನಷ್ಟ ಅನುಭವಿಸಿದ್ದೇವೆ ಅಂತಾ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಕೊಪ್ಪಳ ಜಿಲ್ಲೆಯ ತುಂಗಾಭದ್ರ ಜಲಾಶಯದ ಅಚ್ಚುಕಟ್ಟು ಪ್ರದೇಶದ ಸುಮಾರು 32 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಕಾವೇರಿ, ಸೋನಾ, ಆರ್ ಎನ್ ಆರ್  ಸೇರಿದಂತೆ, ವಿವಿಧ ತಳಿಯ ಸೋನಾಮಸೂರಿ ಭತ್ತ ಬೆಳೆಯಲಾಗುತ್ತದೆ. ಒಂದೊಮ್ಮೆ ಈ ಭಾಗದ ಭತ್ತ ವಿದೇಶಗಳಿಗೂ ರಫ್ತು ಆಗುತ್ತಿತ್ತು. ಬೇಡಿಕೆಯೂ ಇತ್ತು. ಆದರೆ ಈ ಭತ್ತದಲ್ಲಿ ರಸಾಯಿನಿಕ ಗೊಬ್ಬರದ ಅಂಶ ಇರುವುದಾಗಿ ಪ್ರಯೋಗಾಲಯದಿಂದ ತಿಳಿದು ಬಂದ ಹಿನ್ನೆಲೆ ವಿದೇಶಗಳಿಗೆ ರಫ್ತಾಗುವ ಅಕ್ಕಿ ನಿಂತಿದೆ. ಅಕ್ಕಪಕ್ಕದ ರಾಜ್ಯಗಳಿಗೆ ಮಾತ್ರ ರಫ್ತು ಮಾಡಲಾಗುತ್ತಿದೆ. ಭತ್ತದ ಬೆಳೆಗೆ ವಿಪರೀತ ರಾಸಾಯನಿಕ ಗೊಬ್ಬರ ಸಿಂಪಡಿಸಿ ಬೆಳೆಯುತ್ತಿರುವುದರಿಂದ ಕೆಲವು ರಾಜ್ಯಗಳು ಭತ್ತ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದಲ್ಲಿ ಆಂಧ್ರದಿಂದ ವಲಸೆ ಬಂದ ರೈತರು ಅತಿ ಹೆಚ್ಚಾಗಿ ಭತ್ತ ಬೆಳೆಯುತ್ತಾರೆ. ಈ ಪ್ರದೇಶದ ರೈತರು ಹೆಚ್ಚಾಗಿ ತಮ್ಮ ಜಮೀನುಗಳನ್ನು ಆಂಧ್ರದವರಿಗೆ ಲೀಸ್ ಗೆ ಕೊಟ್ಟಿರುವ ನಿದರ್ಶನಗಳಿವೆ. ಇನ್ನೊಂದು ಪ್ರಮುಖ ವಿಷಯವೆಂದರೆ ಅತಿ ಹೆಚ್ಚಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿರುವ ಹಿನ್ನೆಲೆ ಭೂಮಿ ಕೂಡ ತನ್ನ ಫಲವತ್ತತೆಯನ್ನು ಕಳೆದು ಕೊಳ್ಳುತ್ತಿದೆ ಎಂಬುದು ಈ ಭಾಗದ ಕೆಲ ರೈತರ ವಾದ ಕೂಡ ಇದೆ. 

ಇನ್ನೂ ಭತ್ತ ನಾಟಿ ಮಾಡಿ 60 ರಿಂದ 75 ದಿನಗಳಲ್ಲಿ ಭತ್ತ ತೆನೆ ಕಟ್ಟಬೇಕು ಆದ್ರೆ ಇದೀಗ ಕೇವಲ 20 ದಿನಗಳಲ್ಲಿ ಭತ್ತ ಬೆಳೆಗಳಲ್ಲಿ ತೆನೆ ಕಟ್ಟಿರುವುದರಿಂದ, ಇತಿಹಾಸದಲ್ಲಿಯೇ ಇದೇ  ಮೊದಲ ಸಲ ಇಂತಹ ಸನ್ನಿವೇಶವನ್ನು ಕಾಣಲಾಗುತ್ತಿದೆ. ಈಗಾಗಲೇ ಕೃಷಿ ಅಧಿಕಾರಿಗಳು ಭೇಟಿ ನೀಡಿ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಈ ರೀತಿ ಆಗಿರಬಹುದು ಎಂದು ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ ಅಂತಾ ಭತ್ತ ಬೆಳೆಗಾರ ಪ್ರಸಾದ್ ಹೇಳುತ್ತಾರೆ. ಆದರೆ ಕೆಲವರು ಕಳಪೆ ಬೀಜ ನೀಡಿರುವುದರಿಂದ  ಸಮಸ್ಯೆ ಆಗಿರಬಹುದು ಎನ್ನುತ್ತಾರೆ. ಕೆಲವರು ಸಸಿಗಳನ್ನು ತಡವಾಗಿ ನಾಟಿ ಮಾಡಿರುವುದರಿಂದ ತನ್ನ ಸತ್ವ ಕಳೆದುಕೊಂಡು ಬೆಳೆ ಈ ರೀತಿ ಬಂದಿದೆ ಎಂಬ ಭಿನ್ನ ಅಭಿಪ್ರಾಯಗಳು ರೈತರ ವಲಯದಲ್ಲಿ ಕೇಳಿ ಬರುತ್ತಿವೆ. 

ಒಟ್ಟಾರೆ ರೈತರು ಪ್ರತಿ ಎಕರೆಗೆ 20 ರಿಂದ 30 ಸಾವಿರ ಹಣ ಖರ್ಚು ಮಾಡಿ ಭತ್ತ ಬೆಳೆಯುತ್ತಿದ್ದು ಶೇ 60 ಜಮೀನುಗಳಲ್ಲಿ ಭತ್ತ 20 ದಿನಗಳಲ್ಲಿ ತೆನೆ ಕಟ್ಟಿರುವುದರಿಂದ ಆತಂಕಕೊಳಗಾಗಿದ್ದು ನಷ್ಟ ಪರಿಹಾರಕ್ಕು ಒತ್ತಾಯಿಸುತ್ತಿದ್ದಾನೆ.ಸಂಬಂಧಪಟ್ಟ ಕೃಷಿ ಅಧಿಕಾರಿಗಳು ಸಹ ರೈತರಿಗೆ ನಿಖರವಾದ ಮಾಹಿತಿ ನೀಡಿ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದೆ.

ಬೇಸಿಗೆ ಬೆಳೆ ಬೆಳೆಯಲು ಈ ಸಲ ನೀರಿನ ಸೌಕರ್ಯ ಇತ್ತು. ಹಾಗಾಗಿ ಭತ್ತ ಬೆಳೆದವು. ಸಾಮಾನ್ಯವಾಗಿ ಭತ್ತ 60 ರಿಂದ 75 ದಿನಗಳ ನಡುವೆ ತೆನೆ ಕಟ್ಟಬೇಕು. ಆದರೆ ನಾಟಿ ಮಾಡಿದ ಕೇವಲ 20-25 ದಿನಗಳಲ್ಲೇ ತೆನೆ ಕಟ್ಟಿಕೊಂಡಿದೆ. ಕೃಷಿ ಇಲಾಖೆ ಗಮನಕ್ಕೆ ತಂದರೆ ಬೀಜ ಖರೀದಿಸಿದ ರಸೀದಿ ಕೇಳುತ್ತಾರೆ. ಬೀಜವನ್ನ ನಾವೇ ಸಿದ್ಧಪಡಿಸಿಕೊಂಡಿದ್ದೇವೆ. ರಸೀದಿ ಎಲ್ಲಿಂದ ತರಬೇಕು. ಇಲಾಖೆಯ ನಿಲುವು ನೋಡಿದರೆ ಈ ಸಲ ಭತ್ತದ ಬೆಳೆಗಾರರ ಬದುಕು ಬೀದಿಗೆ ಬೀಳುವ ಲಕ್ಷಣ ಕಾಣುತ್ತಿದೆ. ಎಂದು ಗಂಗಾವತಿ ರೈಅತರಾಗಿರುವ ರಮೇಶ್ ಕುಲಕರ್ಣಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಭತ್ತದ ಬೆಳೆ ಅವಧಿಗೂ ಮುನ್ನ ತೆನೆ ಕಟ್ಟಿಕೊಂಡಿದೆ. ಬಹುಶಃ ವಾತಾವರಣ ಹಾಗೂ ಬೇಸಿಗೆ ಬೆಳೆಯನ್ನ ಬಹು ವರ್ಷಗಲ ನಂತರ ಬೆಳೆಯುತ್ತಿರುವುದರಿಂದ ಹೀಗಾಗಿರಬಹುದು. ಕೃಷಿ ವಿಜ್ಞಾನಿಗಳು ಈಗಾಗಲೇ ಕ್ಷೇತ್ರ ಸಮೀಕ್ಷೆ ನಡೆಸುತ್ತಿದ್ದಾರೆ. ಸಮೀಕ್ಷೆ ಬಳಿಕ ಅವರ ವರದಿಯನ್ನ ಸರಕಾರಕ್ಕೆ ಕಳುಹಿಸಿ, ಸರಕಾರದ ನಿರ್ದೇಶನದನ್ವಯ ಕ್ರಮ ಕೈಗೊಳ್ಳಲಾಗುವುದು. ಎಂದು ಜಿಲ್ಲಾ ,ಕೃಷಿ ಇಲಾಖೆ,ನಿರ್ದೇಶಕರಾದ .ಶಬಾನಾ, ಜಂಟೀ ಹೇಳಿದರು.

ವರದಿ: ಬಸವರಾಜ ಕರುಗಲ್, ಕೊಪ್ಪಳ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com