ಪೊಲೀಸರ ಎನ್ ಕೌಂಟರ್ ಗೆ ರೌಡಿ ಸ್ಲಂ ಭರತ್ ಫಿನೀಶ್

ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಸ್ಲಂ ಭರತ್ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. 
ಸ್ಲಂ ಭರತ್
ಸ್ಲಂ ಭರತ್

ಬೆಂಗಳೂರು: ರೌಡಿಶೀಟರ್ ಸ್ಲಂ ಭರತ್ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿರುವ ಘಟನೆ ಬೆಂಗಳೂರಿನ ಉತ್ತರ ತಾಲೂಕಿನ ಹೆಸರುಘಟ್ಟ ಬಳಿ ನಡೆದಿದೆ.

ರಾಜಗೋಪಾಲ್ ನಗರ ಪೊಲೀಸ್ ಇನ್ಸ್ ಪೆಕ್ಟರ್ ದಿನೇಶ್ ಪಾಟೀಲ್ ಹಾಗೂ ನಂದಿನಿ ಲೇಔಟ್ ಇನ್ಸ್ ಪೆಕ್ಟರ್ ಲೋಹಿತ್ ರ ಗುಂಡೇಟಿಗೆ ಭರತ್ ಬಲಿಯಾಗಿದ್ದಾನೆ.

ಇತ್ತೀಚೆಗೆ ರೌಡಿಶೀಟರ್ ಭರತ್ ನನ್ನು ಬಂಧಿಸಲು ಮುಂದಾಗಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಆತ ಪರಾರಿಯಾಗಿದ್ದ. 
ನಂತರ ಸ್ಲಂ ಭರತ್ ಹೈದರಾಬಾದ್ ನಲ್ಲಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ, ಬೆಂಗಳೂರಿಗೆ ಕರೆತರುತ್ತಿದ್ದರು. ಈ ವೇಳೆ ಸ್ಲಂ‌ಭರತ್ ನ ಸಹಚರರು ಭರತ್ ನನ್ನು ಕರೆತರುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಭರತ್ ಪೊಲೀಸ್ ರ ಮೇಲೆ ಹಲ್ಲೆ ಮಾಡಿ ಪರಾರಿಯಾದ. ತಕ್ಷಣವೇ ಬೆಂಗಳೂರು ಪೊಲೀಸರು ಎಲ್ಲೆಡೆ ಸ್ಲಂ ಭರತ್ ನ ಬಂಧನಕ್ಕೆ ಅಲರ್ಟ್ ಘೋಷಿಸಿದರು. 

ಹೆಸರುಘಟ್ಟ ಬಳಿ ಭರತ್ ಪರಾರಿಯಾಗುತ್ತಿದ್ದ ಮಾಹಿತಿ ತಿಳಿದ ಪೊಲೀಸರು ಆತನ ಮೇಲೆ ಫೈರಿಂಗ್ ಮಾಡಿದ್ದರು. ಆಗ ಲಾಂಗ್ ನಿಂದ ಹಲ್ಲೆ ಮಾಡಿ, ಪೊಲೀಸರ ಮೇಲೆ ಭರತ್ ಮೂರು ಸುತ್ತು ಗುಂಡು ಹಾರಿಸಿದ್ದ. ಆದರೆ, ಪೊಲೀಸರು ಬುಲೆಟ್ ಪ್ರೂಫ್ ಜಾಕೆಟ್ ಹಾಕಿಕೊಂಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. 

ನಂತರ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಗೆ ಭರತ್ ನೆಲಕ್ಕೆ ಉರುಳಿದ್ದು, ತಕ್ಷಣವೇ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

ಸ್ಲಂ ಭರತ್ ವಿರುದ್ಧ ಕೊಲೆ, ದರೋಡೆ, ಅಪಹರಣ ಸೇರಿ 47 ಪ್ರಕರಣಗಳು ದಾಖಲಿದ್ದವು. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com