ರಾಜ್ಯದಲ್ಲಿ ಇವಿ ಮೋಟಾರು ವಾಹನ ತಯಾರಿಕೆಗೆ ಆದ್ಯತೆ: ಜಗದೀಶ್ ಶೆಟ್ಟರ್

ರಾಜ್ಯದಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಕ್ಲಸ್ಟರ್ ಅಭಿವೃದ್ಧಿಪಡಿಸಿ, ಸ್ಥಳೀಯ ಎಲೆಕ್ಟ್ರಿಕ್ ವೆಹಿಕಲ್ ಮೋಟಾರು ತಯಾರಿಕೆಗೆ ಆದ್ಯತೆ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಕ್ಲಸ್ಟರ್ ಅಭಿವೃದ್ಧಿಪಡಿಸಿ, ಸ್ಥಳೀಯ ಎಲೆಕ್ಟ್ರಿಕ್ ವೆಹಿಕಲ್ ಮೋಟಾರು ತಯಾರಿಕೆಗೆ ಆದ್ಯತೆ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್ ಹೇಳಿದ್ದಾರೆ.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಆವರಣದಲ್ಲಿ ಇಂದು ಉದ್ಯೋಗ್ ಭಾರತಿ ಮತ್ತು ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದ ಸಹಯೋಗದಲ್ಲಿ ಆಯೋಜಿಸಿದ್ದ "ಇ-ಮೊಬಿಲಿಟಿ ಮತ್ತು ಚಾರ್ಜಿಂಗ್ ಇನ್ಫ್ರಾಸ್ಟ್ರಕ್ಚರ್" ಕುರಿತು ಕಾರ್ಯಾಗಾರ ಮತ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳು ದುಬಾರಿ ಎಂಬ ಮಾತು ಇದೆ. ಏಕೆಂದರೆ ಎಲೆಕ್ಟ್ರಿಕ್ ವಾಹನ ಖರೀದಿಯ ವೆಚ್ಚದಲ್ಲಿ ಶೇಕಡಾ 30 ರಷ್ಟು ವೆಚ್ಚ ಎಲೆಕ್ಟ್ರಿಕ್ ಬ್ಯಾಟರಿಗೇ ತಗಲುತ್ತದೆ. ಈ ಮೊತ್ತದಲ್ಲಿ ಕಡಿತವಾದರೆ ಇವಿ ವಾಹನಗಳು ಸಹ ಅಗ್ಗದ ದರದಲ್ಲಿ ಲಭ್ಯವಾಗಲಿದೆ. 

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲೆಕ್ಟ್ರಿಕ್ ಮೋಟಾರು ತಯಾರಿಕೆಯನ್ನು ಪ್ರಾರಂಭಿಸಲು ಆದ್ಯತೆ ನೀಡಲಾಗಿದೆ ಹಾಗೂ ಬ್ಯಾಟರಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜೊತೆಗೆ ರಾಜ್ಯದಲ್ಲಿ ಇವಿ ಕ್ಲಸ್ಟರ್ ತೆರೆಯುವ ಪ್ರಕ್ರಿಯೆ ನಡೆಯುತ್ತಿದ್ದು ಇದಕ್ಕಾಗಿ ಸರಕಾರ ಪ್ರತ್ಯೇಕ ಅನುದಾನ ಮೀಸಲಿಟ್ಟಿದೆ ಎಂದು ವಿವರಿಸಿದರು. ಭಾರತವು  ವಿಶ್ವದಲ್ಲಿ ವಾಹನ ಉದ್ಯಮ, ಇ-ಮೊಬಿಲಿಟಿ ರೂಪಿಸುವಲ್ಲಿ ಪ್ರಮುಖ ಸ್ಥಾನ ಅಲಂಕರಿಸಿದೆ.  ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ‌ ಅಳವಡಿಕೆಗೆ ಬೇಕಾದ ಸೂಕ್ತ  ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ. 

ಓಲಾ  ಮೊಬಿಲಿಟಿ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿದ ಇತ್ತೀಚಿನ  ವರದಿಯ ಪ್ರಕಾರ, ಭಾರತವು ವಿಶ್ವದ ಅತಿದೊಡ್ಡ ವಿದ್ಯುತ್ ವಾಹನ (ಇವಿ) ಮಾರುಕಟ್ಟೆಯಾಗುವ  ಸಾಮರ್ಥ್ಯವನ್ನು ಹೊಂದಿದೆ ಎಂಬ ಅಭಿಪ್ರಾಯ ಹೊರಹಾಕಿದೆ.  ಎಲೆಕ್ಟ್ರಿಕ್ ಮೊಬಿಲಿಟಿ  ಭವಿಷ್ಯ ರೂಪಿಸಲುವಲ್ಲಿ ಕರ್ನಾಟಕ ಮಹತ್ವದ ಪಾತ್ರ ವಹಿಸಲಿದೆ. ಪ್ರಸ್ತುತ ಬೆಂಗಳೂರು ನಗರ  ಸುಮಾರು 9000 ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದೆ.  ಮಹೀಂದ್ರಾ ಎಲೆಕ್ಟ್ರಿಕ್, ಅಥರ್  ಎನರ್ಜಿ, ಯೂಲೂ, ವೊಗೊ, ಎನ್‌ಡಿಎಸ್ ಇಕೋ ಮೋಟಾರ್ಸ್ ಮತ್ತು ಇತರ ದೇಶದ ಅತಿದೊಡ್ಡ ಇವಿ  ಕಂಪನಿಯು ಇಲ್ಲಿ ಮಾರುಕಟ್ಟೆ ಸೃಷ್ಟಿಸುತ್ತಿವೆ ಎಂದು ತಿಳಿಸಿದರು.

2017  ರಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಮೊದಲ‌ ಬಾರಿಗೆ ಇ ಮೊಬಿಲಿಟಿ ಪಾಲಿಸಿ ತಂದಿತು. ಈ  ಮಾದರಿಯನ್ನು ಇತರೆ ರಾಜ್ಯಗಳು ಅನುಸರಿಸುತ್ತಿವೆ. ಎಲೆಕ್ಟ್ರಿಕ್ ವಾಹನ ಬಳಕೆಯನ್ನು  ಸಾರ್ವಜನಿಕ ಸಾರಿಗೆ ವ್ಯಾಪ್ತಿಗೆ ತರಲಾಗುತ್ತಿದೆ. ಕೇಂದ್ರ ಸರಕಾರ ನೀಡುವ ಅನುದಾನದಲ್ಲಿ  ರಾಜ್ಯಕ್ಕೆ 400 ಇ-ಬಸ್‌ಗಳು ಸಿಗಲಿದ್ದು, ಅದರಲ್ಲಿ 300 ಬಿಎಂಟಿಸಿ ಬಸ್‌ಗಳನ್ನು  ಗುತ್ತಿಗೆ ಮೇಲೆ ರಸ್ತೆಗಿಳಿಸಲಾಗುವುದು. ಮುಂದಿನ ದಿನಗಳಲ್ಲಿ ಬಿಎಂಟಿಸಿ ವತಿಯಿಂದ 6000  ಬಸ್‌ಗಳನ್ನು ಖರೀದಿಸಲು ಚಿಂನತೆ ನಡೆದಿದ್ದು, ಇದರಲ್ಲಿ  ಶೇ.50 ರಷ್ಟು ಬಸ್‌ಗಳು  ವಿದ್ಯುತ್‌ ಚಾಲಿತವಾಗಿರಲಿದೆ ಎಂದರು. 

ಇದರ  ಜೊತೆಗೆ 12 ಸ್ಥಳಗಳಲ್ಲಿ "ಇವಿ ಫಾಸ್ಟ್ ಚಾರ್ಜಿಂಗ್ ಕೇಂದ್ರ"ಗಳು ಕಾರ್ಯಾರಂಭ ಮಾಡಿವೆ.  ಮುಂದಿನ ದಿನಗಳಲ್ಲಿ ಇತರೆ 80 ಸ್ಥಳಗಳಲ್ಲಿ 100 ಚಾರ್ಜಿಂಗ್ ಪಾಯಿಂಟ್‌ಗಳನ್ನು  ಬೆಸ್ಕಾಮ್ ಸ್ಥಾಪಿಸಲಿದೆ. ಈ ಚಾರ್ಜಿಂಗ್ ಕೇಂದ್ರಗಳನ್ನು ಅಪ್ಲಿಕೇಶನ್ ಮೂಲಕ ಸುಲಭವಾಗಿ  ಪ್ರವೇಶಿಸಬಹುದು. ಅಷ್ಟೆ ಅಲ್ಲದೆ ಚಾರ್ಜಿಂಗ್‌ ಮಾಡಿಸಲು ಮುಂಗಡವೇ ಕಾಯ್ದಿರಿಸುವ  ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ಹೇಳಿದರು.  ಇನ್ನುಳಿದಂತೆ  ಶಾಪಿಂಗ್ ಮಾಲ್, ಪಾರ್ಕಿಂಗ್ ಲಾಟ್, ಅಪಾರ್ಟ್‌ಮೆಂಟ್‌ ಇತರೆ ಖಾಸಗಿ ಸ್ಥಳಗಳಲ್ಲೂ  ಕಡ್ಡಾಯವಾಗಿ ಇವಿ ಚಾರ್ಜಿಂಗ್ ಕೇಂದ್ರ ತೆರೆಯುವಂತೆ  ಕರ್ನಾಟಕ ವಿದ್ಯುತ್ ನಿಯಂತ್ರಣ  ಆಯೋಗ (ಕೆಇಆರ್‌ಸಿ)  ಸುತ್ತೋಲೆ ಹೊರಡಿಸಲಿದೆ ಎಂದು ಹೇಳಿದರು. 

ವಾಣಿಜ್ಯ  ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, ಇವಿ  ಕ್ಲಸ್ಟರ್ ತೆರೆಯಲು ಸರಕಾರ ಸಿದ್ದವಿದ್ದು, ಆಸಕ್ತ ಕಂಪನಿಗಳು ಮುಂದೆ ಬರಬೇಕು ಎಂದರು.  ಪ್ರಸ್ತುತ ಇವಿ ಮೋಟಾರು ಅತ್ಯಂತ ದುಬಾರಿ ಎಂಬ ಭಾವನೆ ಜನರಲ್ಲಿ ಇದೆ. ಪ್ರಾರಂಭದಲ್ಲಿ  ಇದು ಸಹಜ. ನಂತರ ಇವಿ ಮೋಟಾರು ತಯಾರಿಗೆ ಇಲ್ಲಿಯೇ ಪ್ರಾರಂಭವಾದರೆ ದರವೂ ಇಳಿಯಲಿದೆ. ಇವಿ  ಚಾರ್ಜಿಂಗ್ ಕೇಂದ್ರ ತೆರೆಯಲು ಕೇಂದ್ರ ಸರಕಾರವು ಸಬ್ಸಿಡಿ ನೀಡುವಂತೆ ಮನವಿ  ಮಾಡಲಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದ ಸ್ಥಳದಲ್ಲಿ ಪ್ರದರ್ಶಿಸಲಾಗಿದ್ದ ವಿದ್ಯುತ್‌ ಚಾಲಿತ ಆಟೋರಿಕ್ಷಾ ದಲ್ಲಿ ಸಚಿವರು ಕುಳಿತ ಪರಿಶೀಲಿಸಿದರು. 

ಕಾರ್ಯಕ್ರಮದಲ್ಲಿ  ರವಿಕುಮಾರ್‌, ಎನ್‌ಎಸ್‌ಐಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಲಘು ಉದ್ಯೋಗ ಭಾರತಿ  ಕರ್ನಾಟಕದ ಅಧ್ಯಕ್ಷರಾದ ಶ್ರೀಕಂಠ ದತ್ತ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com