ಗ್ರಾಮ ಪಂಚಾಯಿತಿ ಸದಸ್ಯರಿಂದ ಶಾಲೆಗಳ ಮೇಲ್ವಿಚಾರಣೆ: ಆರ್ ಡಿಪಿಆರ್ ಮಾರ್ಗಸೂಚಿಗಳು
ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರಾಮ ಪಂಚಾಯಿತಿ ಸದಸ್ಯರು ಹಳ್ಳಿಗಳಲ್ಲಿ ಇಡೀ ವರ್ಷ ಮಕ್ಕಳ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.
Published: 27th February 2020 12:57 PM | Last Updated: 27th February 2020 01:03 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರಾಮ ಪಂಚಾಯಿತಿ ಸದಸ್ಯರು ಹಳ್ಳಿಗಳಲ್ಲಿ ಇಡೀ ವರ್ಷ ಮಕ್ಕಳ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.
ಪ್ರತಿ ತಿಂಗಳು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟದ ಬಗ್ಗೆ ಪರಿಶೀಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಂಚಾಯಿತಿ ಸದಸ್ಯರುಗಳಿಗೆ ಸಲಹೆ ನೀಡುವುದರ ಜೊತೆಗೆ ಮಾರ್ಗಸೂಚಿಗಳನ್ನು ನೀಡಿದೆ.
ಹಲವು ದಿನಗಳಿಂದ ಶಾಲೆಗೆ ಹೋಗದಂತಹ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಗೈರು ಹಾಜರಿ ಬಗ್ಗೆ ಕಾರಣ ತಿಳಿದುಕೊಳ್ಳಬೇಕು. ಆ ವಿದ್ಯಾರ್ಥಿ ಎಲ್ಲಿಯಾದರೂ ಕೆಲಸ ಮಾಡುತ್ತಿದ್ದಾರಾ, ಅಥವಾ ಮದುವೆಯಾಗಿದ್ದೇಯಾ ಅಥವಾ ಬೇರೆಡೆ ಹೋಗಿದ್ದಾರಾ ಎಂಬುದನ್ನು ತಿಳಿದುಕೊಂಡು ಅಧಿಕಾರಿಗಳ ಗಮನಕ್ಕೆ ತರಬೇಕು. ಇದಲ್ಲದೇ ಮರಳಿ ಶಾಲೆಗೆ ಬರುವಂತಾಗಲು ಪೋಷಕರನ್ನು ಮನವೊಲಿಸಬೇಕು ಎಂದು ಹೇಳಲಾಗಿದೆ.
6 ರಿಂದ 14 ವರ್ಷದೊಳಗಿನ ಮಕ್ಕಳನ್ನು ಸಂವಿಧಾನದಡಿಯಲ್ಲಿ ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಿನ್ಸಿಪಾಲ್ ಸೆಕ್ರಟರಿ ಎಸ್ ಆರ್ ಉಮಾಶಂಕರ್ ಹಾಗೂ ಪಂಚಾಯತ್ ರಾಜ್ ಪ್ರಿನ್ಸಿಪಾಲ್ ಸೆಕ್ರೆಟರಿ ಉಮಾ ಮಹಾದೇವನ್ ಜಂಟಿಯಾಗಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ಮಕ್ಕಳ ಹಕ್ಕು, ಸ್ವಾತಂತ್ರ್ಯ ಮತ್ತು ಕಡ್ಡಾಯ ಶಿಕ್ಷಣ ಪ್ರಕಾರ ಗ್ರಾಮ ಪಂಚಾಯಿತಿ ಗ್ರಾಮ ಶಿಕ್ಷಣ ರಿಜಿಸ್ಟರ್ ನಂತೆ ಕಾರ್ಯನಿರ್ವಹಿಸಬೇಕು, ಸ್ಥಳೀಯ ಸಂಸ್ಥೆಗಳಿಂದ ಮನೆ ಮನೆ ಸರ್ವೇ ಮಾಡುವಂತೆ ಹೈಕೋರ್ಟ್ ಕೂಡಾ ಸಲಹೆ ನೀಡಿದೆ ಎಂದು ಹೇಳಲಾಗಿದೆ.
ಶಾಲೆಯಿಂದ ಹೊರಗೆ ಉಳಿದಿರುವ ವಿದ್ಯಾರ್ಥಿಗಳ ಬಗ್ಗೆ ಸ್ವ ಸಹಾಯ ಸಂಘ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರೊಂದಿಗೆ ಪಂಚಾಯತ್ ಸದಸ್ಯರು ನಿರಂತರವಾಗಿ ಮಾತನಾಡುವಂತೆ ತಿಳಿಸಲಾಗಿದೆ.