ಕೊಟ್ಟ ಸಾಲ ವಾಪಸ್ ಕೇಳಿದ ಮಹಿಳೆಯ ಕೊಲೆ, ಗ್ರಾಮಸ್ಥರಿಂದ ಗೂಸ ತಿಂದ ಹಂತಕನೂ ದುರ್ಮರಣ! 

ಕೊಟ್ಟ ಸಾಲ ವಾಪಸ್ ಕೇಳಲು ಹೋಗಿ ಮಹಿಳೆಯೊಬ್ಬರು ಕೊಲೆಯಾಗಿದ್ದು ಹಂತಜನನ್ನು ಗ್ರಾಮಸ್ಥರೇ ಥಳಿಸಿ ಹತ್ಯೆ ಮಾಡಿರುವ ಘಟನೆ ಮದ್ದೂರು ತಾಲ್ಲೂಕಿನ ಹಾಗಲಹಳ್ಳಿಯಲ್ಲಿ ಬುಧವಾರ ನಡೆದಿದೆ.
ಕೊಟ್ಟ ಸಾಲ ವಾಪಸ್ ಕೇಳಿದ ಮಹಿಳೆಯ ಕೊಲೆ, ಗ್ರಾಮಸ್ಥರಿಂದ ಗೂಸ ತಿಂದ ಹಂತಕನೂ ದುರ್ಮರಣ!
ಕೊಟ್ಟ ಸಾಲ ವಾಪಸ್ ಕೇಳಿದ ಮಹಿಳೆಯ ಕೊಲೆ, ಗ್ರಾಮಸ್ಥರಿಂದ ಗೂಸ ತಿಂದ ಹಂತಕನೂ ದುರ್ಮರಣ!

ಮಂಡ್ಯ: ಕೊಟ್ಟ ಸಾಲ ವಾಪಸ್ ಕೇಳಲು ಹೋಗಿ ಮಹಿಳೆಯೊಬ್ಬರು ಕೊಲೆಯಾಗಿದ್ದು ಹಂತಜನನ್ನು ಗ್ರಾಮಸ್ಥರೇ ಥಳಿಸಿ ಹತ್ಯೆ ಮಾಡಿರುವ ಘಟನೆ ಮದ್ದೂರು ತಾಲ್ಲೂಕಿನ ಹಾಗಲಹಳ್ಳಿಯಲ್ಲಿ ಬುಧವಾರ ನಡೆದಿದೆ.

ಶೋಭಾ (50) ಮತ್ತು ಕೃಷ್ಣ (35) ಹತ್ಯೆಗೀಡಾಗಿದ್ದಾರೆ. ಕೊಟ್ಟ ಸಾಲ ವಾಪಸ್ ಕೇಳಲು ಹೋಗಿ ಶೋಭಾ ಕೃಷ್ಣನಿಂದ ಕೊಲೆಯಾದರೆ ಆಕೆಯನ್ನು ಕೊಲೆ ಮಾಡಿದ ಕೃಷ್ಣ ಸ್ಥಳೀಯರ ಥಳಿತದಿಂದ ಸಾವನ್ನಪ್ಪಿದ್ದಾನೆ.

ಘಟನೆ ಹಿನ್ನೆಲೆ: ಶೋಭಾ ಮತ್ತು ಕೃಷ್ಣ ಒಂದೇ ಊರಿನ (ಹಾಗಲಹಳ್ಳಿ)ಯ ನಿವಾಸಿಗಳಾಗಿದ್ದು ಶೋಭಾ ಅವರಿಂದ ವರ್ಷದ ಹಿಂದೆ ಕೃಷ್ಣ 50 ರಿಂದ 60 ಸಾವಿರ ರೂಪಾಯಿಗಳನ್ನು ಸಾಲಪಡೆದುಕೊಂಡಿದ್ದ. ಆದರೆ ವರ್ಷದಿಂದಲೂ ಸಾಲ ಹಿಂತಿರುಗಿಸದೆ ಸತಾಯಿಸುತ್ತಿದ್ದ ಕೃಷ್ಣನ ಮನೆಗೆ ಬುಧವಾರ ಮಧ್ಯಾಹ್ನ 1 ರ ಸಮಯದಲ್ಲಿ ಶೋಭ ಹೋಗಿದ್ದರು. ಈ ವೇಳೆ ಸಾಲದ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಶೋಭಾಳನ್ನು ಕತ್ತುಹಿಸುಕಿ ಕೊಲೆ ಮಾಡಿದ ಕೃಷ್ಣ ಮನೆಯೊಳಗೇ ಇದ್ದ ನೀರಿನ ಡ್ರಮ್ ಒಳಗೆ ಆಕೆಯ ಶವವನ್ನು ಹಾಕಿ ಎನೂ ಗೊತ್ತಿಲ್ಲದವನಂತೆ ಊರಿನಲ್ಲೇ ಇದ್ದ.

ಇತ್ತ ಮಧ್ಯಾಹ್ನವಾದರೂ ಮನೆಗೆ ವಾಪಸ್ಸಾಗದ ಶೋಭಾ ಅವರನ್ನು ಆಕೆಯ ಪತಿ ಪಾಪೇಗೌಡ ಮತ್ತು ಪುತ್ರ ಕಿರಣ್ ಸೇರಿದಂತೆ ಸಂಬಂಧಿಕರೆಲ್ಲಾ ಊರಿನಲ್ಲೆಲ್ಲಾ ಹುಡುಕಾಡಿದ್ದಾರೆ. ಎಲ್ಲಿಯೂ ಪತ್ತೆಯಾಗದಿದ್ದಾಗ ಅನುಮಾನದ ಮೇಲೆ ಕೃಷ್ಣನನ್ನು ವಿಚಾರಿಸಿದ್ದಾರೆ. ಆದರೆ ಆತ ಸರಿಯಾಗಿ ಉತ್ತರಿಸದೆ `ಆಕೆ ಯಾರು? ನನಗೇನು ಗೊತ್ತು ಅವಳು?’ ಎಂಬ ಅನುಮಾನದ ಮಾತುಗಳನ್ನಾಡಿದ್ದಾನೆ. ಇದರಿಂದ ಮತ್ತಷ್ಟು ಅನುಮಾನಗೊಂಡ ಪಾಪೇಗೌಡ ಮತ್ತು ಕುಟುಂಬಸ್ಥರು ಕೃಷ್ಣನ ಮನೆಯನ್ನೇಲ್ಲಾ ಜಾಲಾಡಿದ್ದಾರೆ. ಕೊನೆಗೆ ನೀರಿನ ಡ್ರಮ್ ನೋಡಲಾಗಿ ಶೋಭಾ ಅವರನ್ನು ಕೊಲೆ ಮಾಡಿ ಅದರೊಳಗೆ ಹಾಕಿರುವುದು ಪತ್ತೆಯಾಗಿದೆ.

ಇದರಿಂದ ರೊಚ್ಚಿಗೆದ್ದ  ಗ್ರಾಮಸ್ಥರೆಲ್ಲಾ ಕೃಷ್ಣನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕೃಷ್ಣನನ್ನು ಗ್ರಾಮಸ್ಥರೇ ಮದ್ದೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ವೈದ್ಯರ ಸಲಹೆಯ ಮೇರೆಗೆ ತೀವ್ರವಾಗಿ ಗಾಯಗೊಂಡಿದ್ದ ಕೃಷ್ಣನನ್ನು ಹೆಚ್ಚಿನ ಚಿಕಿತ್ಸೆಗೆ ಮಂಡ್ಯಜಿಲ್ಲಾಸ್ಪತ್ರೆಗೆ ದಾಖಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿಯೇ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ಕೊಟ್ಟ ಮದ್ದೂರು ಠಾಣೆ ಸಿಪಿಐ ಪ್ರಸಾದ್, ಪಿಎಸೈ ಮಂಜೇಗೌಡ ಪರಿಶೀಲನೆ ನಡೆಸಿದರು. ತನ್ನ ತಾಯಿ ಶೋಭಾ ಕೊಲೆಗೆ ಸಂಬಂಧಿಸಿದಂತೆ ಪುತ್ರ ಕಿರಣ್ ದೂರು ನೀಡಿದ್ದಾರೆ. ಮತ್ತೊಂದೆಡೆ ಗ್ರಾಮಸ್ಥರ ಥಳಿತದಿಂದ ಕೃಷ್ಣನೂ ಸಾವನ್ನಪ್ಪಿದ್ದರಿಂದ ಹಲವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ. ಸದ್ಯ ಗ್ರಾಮದಲ್ಲಿ ಜೋಡಿಕೊಲೆಯಾಗಿರುವ ಕಾರಣ ಮುಂಜಾಗೃತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಗ್ರಾಮಕ್ಕೆ ಜಿಲ್ಲಾಪೊಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಡಿವೈಎಸ್ಪಿ ಪೃಥ್ವಿ ಅವರನ್ನೊಳಗೊಂಡ ಹಿರಿಯಪೊಲೀಸ್ ಅಧಿಕಾರಿಗಳೂ ಕೂಡ ಭೇಟಿ ಕೊಟ್ಟಿದ್ದು ಪರಿಸ್ಥಿತಿ ಅವಲೋಕಿಸಿದರು. 

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com