ದೇವರ ಹೆಸರಲ್ಲಿ ವಿಧವೆಗೆ ಬೆದರಿಕೆ, 27 ಕೋಟಿ ರೂ ವಂಚಿಸಿ ಪರಾರಿಯಾದ 'ಕುಡುಕ ಸ್ವಾಮೀಜಿ'

ಸೊಲ್ಲಾಪುರದಮ್ಮ ಮೈ ಮೇಲೆ ಬರುತ್ತಾಳೆ ಎಂದು ಸುಳ್ಳು ಹೇಳಿ ವಿಧವೆ ಮಹಿಳೆಯನ್ನು ಬೆದರಿಸಿ ಆಕೆಗೆ ಬರೊಬ್ಬರಿ 27 ಕೋಟಿ ರೂ ವಂಚನೆ ಕುಡುಕ ಸ್ವಾಮೀಜಿಯೋರ್ವ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ಸೊಲ್ಲಾಪುರದಮ್ಮ ಮೈ ಮೇಲೆ ಬರುತ್ತಾಳೆ ಎಂದು ಸುಳ್ಳು ಹೇಳಿ ವಿಧವೆ ಮಹಿಳೆಯನ್ನು ಬೆದರಿಸಿ ಆಕೆಗೆ ಬರೊಬ್ಬರಿ 27 ಕೋಟಿ ರೂ ವಂಚನೆ ಕುಡುಕ ಸ್ವಾಮೀಜಿಯೋರ್ವ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದೆ.

ಪೊಲೀಸ್ ಮೂಲಗಳು ತಿಳಿಸಿರುವಂತೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೆಂಗನೂರು ಗ್ರಾಮದ ಬಳಿ ಇರುವ ಸೊಲ್ಲಾಪುರದಮ್ಮ ದೇವಾಲಯದ ಅರ್ಚಕ ನಾಗರಾಜ್, ದೇವರ ಹೆಸರಲ್ಲಿ ಮಹಿಳೆಗೆ ಬೆದರಿಸಿ ಕೋಟಿ ಕೋಟಿ ನಾಮ ಹಾಕಿದ್ದಾನೆ.  ಬಂಗಾರಪೇಟೆ ಪಟ್ಟಣದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ನಾಗರಾಜ್, ಕಳೆದ 15 ವರ್ಷಗಳ ಹಿಂದೆ ತನ್ನ ಮೈಮೇಲೆ ಸೊಲ್ಲಾಪುರದಮ್ಮ ಬರ್ತಾಳೆ ಎಂದು ಬೆಂಗಳೂರು ಸಮೀಪದ ಬಂಗಾರಪೇಟೆ ಹೊರವಲಯದಲ್ಲಿ ಒಂದು ದೇವಾಲಯ ನಿರ್ಮಿಸಿಕೊಂಡು ಪೂಜೆ ಮಾಡುತ್ತಿದ್ದನು. 

ಈ ವೇಳೆ ಕುಟುಂಬ ಸಮಸ್ಯೆ ಹೇಳಿಕೊಂಡು ಬಂದ ವಿಧವೆ ಮಹಿಳೆಗೆ ಈ ನಾಗರಾಜ್ ಸುಮಾರು 27 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಕಳ್ಳ ಸ್ವಾಮಿ ನಾಗರಾಜ್, 'ನನ್ನ ಮೈಮೇಲೆ ಸೊಲ್ಲಾಪುರದಮ್ಮ ಬರ್ತಾಳೆ, ಅವಳು ಹೇಳಿದಂತೆ ಕೇಳಬೇಕು. ದೇವಿಗೆ ಸ್ವಲ್ಪ ಅಪಮಾನ ಆದರೂ ಇಡೀ ಕುಟುಂಬದಲ್ಲಿ ಯಾರೂ ಉಳಿಯಲ್ಲ. ನಿಮ್ಮ ಮನೆ ಸ್ಮಶಾನ ಆಗುತ್ತೆ ಎಂದು ಬೆಂಗಳೂರಿನ ರಾಮಮೂರ್ತಿ ನಗರ ನಿವಾಸಿ ಗೀತಾ ಅನ್ನೋರಿಗೆ ಬೆದರಿಸಿ ನಂಬಿಸಿದ್ದಾನೆ. ಅಲ್ಲದೆ ದೇವಿ ಮೈಮೇಲೆ ಬಂದ ಮೊದಲ ದಿನವೇ 5 ಕೆ.ಜಿ ಚಿನ್ನ ಪಡೆದಿದ್ದನಂತೆ. 

ಪ್ರತಿಬಾರಿ ದೇವಿ ಮೈಮೇಲೆ ಬಂದಾಗಲೆಲ್ಲಾ ಹಂತ ಹಂತವಾಗಿ ಬೆಂಗಳೂರು ಮೂಲದ ಮಹಿಳೆ ಗೀತಾ ಎಲ್ಲಾ ಆಸ್ತಿಗಳನ್ನ ಮಾರಾಟ ಮಾಡಿಸಿರುವ ನಾಗರಾಜ್, ಆ ಹಣವನ್ನೆಲ್ಲಾ ಕೊಲ್ಲಾಪುರ ದೇವಿ ಮುಂದೆ ಇಟ್ಟು ವಿಶೇಷ ಪೂಜೆ ಮಾಡಿ ವಾಪಸ್ ಕೊಡ್ತೀನಿ ಎಂದು ನಂಬಿಸಿದ್ದ. ಆದರೆ ಈಗ ಪೂಜಾರಿ ಹಣ ಆಸ್ತಿ ತೆಗೆದುಕೊಂಡು ಪರಾರಿಯಾಗಿದ್ದಾನೆ. ಕಳ್ಳ ಸ್ವಾಮಿಜಿ ಕಪಟ ನಾಟಕಕ್ಕೆ ಬೇಸ್ತು ಬಿದ್ದಿರುವ ಮಹಿಳೆ ಗೀತಾ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಸ್ತುತ ಸ್ವಾಮೀಜಿ ವಿರುದ್ಧ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಮಹಿಳೆ ದೂರು ನೀಡಿದ್ದಾರೆ. ಕುಟುಂಬ ಸಮಸ್ಯೆ ಬಗೆಹರಿಸುವ ನೆಪದಲ್ಲಿ ಮಹಿಳೆ ಬಳಿ ಮಕ್ಕಳಿಗೆ ಗೊತ್ತಿಲ್ಲದೆ ನಿವೇಶನ, ನಗ, ನಾಣ್ಯ ಸೇರಿದಂತೆ 27 ಕೋಟಿಯಷ್ಟು ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತಂತೆ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಂತೆಯೇ ಪರಾರಿಯಾಗಿರುವ ನಾಗರಾಜ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಗುರುವಾರ ರಾತ್ರಿ ಬೆಂಗಳೂರಿನ ಸಿಸಿಬಿ ಪೊಲೀಸರು ವಾರೆಂಟ್ ಸಮೇತವಾಗಿ ದೇವಾಲಯಕ್ಕೆ ಆಗಮಿಸಿದ್ದಾರೆ. ದೇವಾಲಯ ಹಾಗೂ ಮನೆಯನ್ನ ಹುಡುಕಾಡಿರುವ ಸಿಸಿಬಿ ಪೊಲೀಸರು ಒಂದಷ್ಟು ನಗದು ಹಾಗೂ ಮಹತ್ವದ ದಾಖಲೆಗಳನ್ನ ತೆಗಡದುಕೊಂಡು ಹೋಗಿದ್ದಾರೆ. ಮಾತ್ರವಲ್ಲದೆ ದೇವಾಲಯಕ್ಕೆ ಬೀಗ ಜಡಿದಿರುವ ಸಿಸಿಬಿ ಪೊಲೀಸರು ಸ್ವಾಮೀಜಿ ನಾಗರಾಜ್ ಹಾಗೂ ಪತ್ನಿ ಲಕ್ಷ್ಮಮ್ಮರ ಹುಡುಕಾಟದಲ್ಲಿ ಇದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com