ಕನಕಪುರ ಏಸು ಪ್ರತಿಮೆ ನಿರ್ಮಾಣ ಸಂಬಂಧ ವರದಿ ನೀಡುವಂತೆ ಸೂಚನೆ: ಆರ್. ಅಶೋಕ್

ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಮತಕ್ಷೇತ್ರ ಕನಕಪುರದ ಕಪಾಲಿಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸಲು ಅನಧಿಕೃತವಾಗಿ ವ್ಯವಸ್ಥೆ ಮಾಡಲಾಗಿತ್ತು.

Published: 01st January 2020 02:58 PM  |   Last Updated: 01st January 2020 03:00 PM   |  A+A-


R Ashok

ಆರ್ ಅಶೋಕ್

Posted By : lingaraj
Source : UNI

ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಮತಕ್ಷೇತ್ರ ಕನಕಪುರದ ಕಪಾಲಿಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸಲು ಅನಧಿಕೃತವಾಗಿ ವ್ಯವಸ್ಥೆ ಮಾಡಲಾಗಿತ್ತು. ಈ ಸಂಬಂಧ ವರದಿ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.

ಏಸು ಪ್ರತಿಮೆ ನಿರ್ಮಾಣವನ್ನು ಟ್ರಸ್ಟ್ ನವರೇ ಸ್ಥಗಿತಗೊಳಿಸಿರಬಹುದು. ಪ್ರತಿಮೆ ನಿರ್ಮಿಸಲು ಗೋಮಾಳ ಭೂಮಿ ಕೊಡಲಾಗಿದೆ. ಏಸು ಪ್ರತಿಮೆ ನಿರ್ಮಾಣಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ, ಕೊಳವೆಬಾವಿ ತೊಡಿಸಲಾಗಿದೆ ಎಂದಿದ್ದಾರೆ.

ಗೃಹಕಚೇರಿ ಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಸು ಪ್ರತಿಮೆ ನಿರ್ಮಾಣ ಸ್ಥಳದಲ್ಲಿ ಎರಡು ಕಿ.ಮೀ ರಸ್ತೆಯನ್ನೂ ಅನಧಿಕೃತವಾಗಿ ನಿರ್ಮಿಸಲಾಗಿದೆ. ಹೀಗಾಗಿ ಈ ಕುರಿತು ರಾಮನಗರ ಡಿಸಿ, ಕನಕಪುರ ತಹಸೀಲ್ದಾರ್ ರಿಂದ ವರದಿ  ಕೇಳಿದ್ದೇವೆ. ಈ ಸಂಬಂಧ ಮಂಗಳವಾರ ಅಧಿಕಾರಿಗಳು ತಮಗೆ ಮೌಖಿಕ ವಿವರ ನೀಡಿದ್ದು, ವರದಿ ರೂಪದಲ್ಲಿ ವಿವರ ಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ‌ ಸರ್ಕಾರ ಮುಂದಿನ ಕ್ರಮ ಜರುಗಿಸಲಿದೆ ಎಂದರು.

ಹೊಸ ವರ್ಷಾಚರಣೆಯಲ್ಲಿ ಅಸಭ್ಯ ವರ್ತನೆ ತೋರಿದವರ ಬಂಧನ ವಿಚಾರವಾಗಿ ಮಾತನಾಡಿದ ಅಶೋಕ್, ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಕಿಡಿಗೇಡಿಗಳು ಮಹಿಳೆಯರಿಗೆ ದೌರ್ಜನ್ಯ ನೀಡುವುದು ಹೆಚ್ಚಾಗಿದೆ. ಡಿ.31ರಂದು ಸಹ ಹಲವು ಯುವಕರು ಕಿರುಕುಳ  ಕೊಟ್ಟಿದ್ದಾರೆ‌. ಕಿಡಿಗೇಡಿಗಳ‌ ಬಂಧನಕ್ಕೆ ಕ್ರಮ ಕೈಗೊಳ್ಳಲು ನಗರ ಪೊಲೀಸ್ ಆಯುಕ್ತರ  ಜೊತೆ ಚರ್ಚಿಸಲಾಗುವುದು. ಮೊದಲು ಇಷ್ಟೊಂದು ಸಂಖ್ಯೆಯಲ್ಲಿ ಯುವಕರು ಎಂ ಜಿ ರಸ್ತೆಯಲ್ಲಿ  ಸೇರುತ್ತಿರಲಿಲ್ಲ. ಈಗೀಗ ಸಾವಿರಾರು, ಲಕ್ಷಾಂತರ ಯುವ ಸಮೂಹ ಸೇರುತ್ತದೆ. ಇದಕ್ಕೆ ಕಡಿವಾಣ ಹಾಕದೇ ಹೋದರೆ ಮುಂದೆ ಸಮಸ್ಯೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪೊಲೀಸರು  ವಾರ ಪೂರ್ತಿ ಹಗಲು ರಾತ್ರಿ ಭದ್ರತೆ ನೀಡುತ್ತಿದ್ದರಾದರೂ ಅದನ್ನೂ‌ ಮೀರಿ ಕೆಲವರು  ದೌರ್ಜನ್ಯ ಎಸಗಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಎಂಜಿ ರಸ್ತೆ ಬದಲು ಪ್ಯಾಲೇಸ್ ಗ್ರೌಂಡ್ ನಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಕೊಡಬಹುದು.

ಆದರೆ ಅಲ್ಲಿ ಅವಕಾಶ ಕೊಟ್ಟರೆ ಇನ್ನಷ್ಟು ದೊಡ್ಡ ಪ್ರಮಾಣದ ಜನರು ಸೇರಿ ಆಚರಣೆ ಇನ್ನಷ್ಟು ಹೆಚ್ಚಬಹುದು. ಮುಂದಿನ ವರ್ಷ ಎಲ್ಲಿ ಆಚರಣೆ ಮಾಡಬೇಕು ಎನ್ನುವ ಬಗ್ಗೆ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಮಹಾರಾಷ್ಟ್ರ ಕರ್ನಾಟಕ ಗಡಿವಿವಾದ ಬಗ್ಗೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರದಲ್ಲಿರುವುದು ಹುಚ್ಚರ ಸರ್ಕಾರ. ಗಡಿ ವಿಚಾರ 30-40  ವರ್ಷಗಳ ಹಿಂದೆಯೇ ತೀರ್ಮಾನ ಆಗಿದೆ‌. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಅವರಿಗೆ ಶೋಭೆ ತರುವಂತಹದ್ದಲ್ಲ. ಅವರು ಗೌರವಯುತವಾಗಿ ಆಡಳಿತ ನಡೆಸಲಿ. ಮಹಾರಾಷ್ಟ್ರದ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಗಡಿವಿಚಾರದಲ್ಲಿ ಗೊಂದಲ ಸೃಷ್ಟಿಸಲು‌ ಮಹಾರಾಷ್ಟ್ರ ಸರ್ಕಾರ ಹೊರಟಿದೆ. ಕರ್ನಾಟಕದ ಒಂದಿಂಚೂ ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟು  ಕೊಡುವುದಿಲ್ಲ. ಮಹಾರಾಷ್ಟ್ರಕ್ಕೆ ಯಾವ ರೀತಿ ಉತ್ತರ ಕೊಡಬೇಕೋ ಅದೇ ರೀತಿ ಕರ್ನಾಟಕ  ಸರ್ಕಾರ ಉತ್ತರ ಕೊಡಲಿದೆ ಎಂದರು.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp