ಪೌರತ್ವ ಕಾಯ್ದೆ ವಿರೋಧಿಸುವ ಮೂಲಕ ಕಾಂಗ್ರೆಸ್ ಸಂಸತ್ತನ್ನು ವಿರೋಧಿಸುತ್ತಿದೆ: ತುಮಕೂರಿನಲ್ಲಿ ಪ್ರಧಾನಿ ಮೋದಿ

 ನಾಗರಿಕ ತಿದ್ದುಪಡಿ ಕಾಯ್ದೆಯನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ  ಮೋದಿ ಅವರು, ಕಾಯ್ದೆ ವಿರುದ್ಧ ಆಂಧೋಲನ ಆರಂಭಿಸುವ ಮೂಲಕ ವಿಪಕ್ಷ  ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸಂಸತ್ತಿನ ವಿರುದ್ಧವೇ ಆಂಧೋಲನ ನಡೆಸುತ್ತಿದೆ ಎಂದು ಕಿಡಿಕಾರಿದರು. 

Published: 02nd January 2020 04:12 PM  |   Last Updated: 02nd January 2020 04:17 PM   |  A+A-


ತುಮಕೂರಿನಲ್ಲಿ ಪ್ರಧಾನಿ ಮೋದಿ

Posted By : Raghavendra Adiga
Source : UNI

ತುಮಕೂರು: ನಾಗರಿಕ ತಿದ್ದುಪಡಿ ಕಾಯ್ದೆಯನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ  ಮೋದಿ ಅವರು, ಕಾಯ್ದೆ ವಿರುದ್ಧ ಆಂಧೋಲನ ಆರಂಭಿಸುವ ಮೂಲಕ ವಿಪಕ್ಷ  ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸಂಸತ್ತಿನ ವಿರುದ್ಧವೇ ಆಂಧೋಲನ ನಡೆಸುತ್ತಿದೆ ಎಂದು ಕಿಡಿಕಾರಿದರು. 

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು , ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕ ದಬ್ಬಾಳಿಕೆಗೆ ಗುರಿಯಾದವರಿಗೆ ರಕ್ಷಣೆ ನೀಡುವುದು ನಮ್ಮ ಸಂಸ್ಕೃತಿ ಮಾತ್ರವಲ್ಲದೆ, ರಾಷ್ಟ್ರೀಯ ಜವಾಬ್ದಾರಿಯಾಗದೆ. ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಕಾಯ್ದೆ ಜಾರಿಗೆ ತಂದಿದೆ. ಆದರೆ, ಅದರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ಧರಣಿ ನಡೆಸುತ್ತಿದೆ. ಕೇಂದ್ರ ಸರ್ಕರದ ವಿರುದ್ದ ಘೋಷಣೆಗಳನ್ನು ಕೂಗುತ್ತಿದೆ. ಆದರೆ, ಈ ಮೂಲಕ ಅವು ಸಂಸತ್ತನ್ನು ಅವಮಾನಿಸುತ್ತಿದೆ. ಸಂಸತ್ತಿನ ನಿರ್ಣಯದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ ಎಂದು ಆರೋಪಿಸಿದರು. 

ಧರ್ಮದ ಆಧಾರದ ಮೇಲೆ ಹುಟ್ಟಿಕೊಂಡು, ವಿಭಜನೆಗೊಂಡ  ಪಾಕಿಸ್ತಾನ ಅಲ್ಲಿನ ಹಿಂದು, ಜೈನ, ಸಿಖ್ ಮತ್ತಿತರರ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ  ಅತ್ಯಾಚಾರ ಎಸಗುತ್ತಿದೆ. ಅಲ್ಲಿನ ಜನರು ತಮ್ಮ ಧರ್ಮ, ಜೀವನ ಮತ್ತು ಹೆಣ್ಣುಮಕ್ಕಳನ್ನು ಸಂರಕ್ಷಿಸುವ ಸಲುವಾಗಿ ಭಾರತಕ್ಕೆ ವಲಸೆ ಬರುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಅಂತವರಿಗೆ ಈ ಕಾಯ್ದೆ ರಕ್ಷಣೆ ನೀಡುತ್ತದೆ ಎಂದರು. 

ರಕ್ಷಣೆ ಕೋರಿ ನಮ್ಮ ದೇಶಕ್ಕೆ ಬಂದ ಶರಣಾರ್ಥಿಗಳನ್ನು ಅವರ ಹಣೆಬರಹದಂತೆ ಬಿಡಲು ಸಾಧ್ಯವಿಲ್ಲ. ಅವರನ್ನು ರಕ್ಷಿಸುವುದು ನಮ್ಮ ರಾಷ್ಟ್ರೀಯ ಜವಾಬ್ದಾರಿ. ಕಾಯ್ದೆಯ ವಿರುದ್ದ ಹೋರಾಟ ನಡೆಸುತ್ತಿರುವ ಕಾಂಗ್ರೆಸ್, ಪಾಕಿಸ್ತಾನದ ದೌರ್ಜನ್ಯದ ಏಕೆ ಮಾತನಾಡುತ್ತಿಲ್ಲ. ಅಲ್ಪಸಂಖ್ಯಾತ ವಿರುದ್ಧ ಶೋಷಣೆ ಮಡುತ್ತಿರುವ ಲಕ್ಷಾಂತರ ಜನರ ಜೀವನ ಹಾಳು ಮಾಡಿದ ಪಾಕಿಸ್ತಾನದ ವಿರುದ್ದ ಮಾತನಾಡಲು ಕಾಂಗ್ರೆಸ್ ಬಾಯಿಗೆ ಬೀಗ ಬಿದ್ದಿದೆಯೇಕೆ? ಜನರ ಮನಸ್ಸಿನಲ್ಲಿ ಈ ಕುರಿತು ಪ್ರಶ್ನೆ ಮೂಡಿದೆ ಎಂದರು. 

ಪಾಕಿಸ್ತಾನದ ದೌರ್ಜನ್ಯಗಳನ್ನು ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಿರಂಗೊಳಿಸಬೇಕಿದೆ. ಆದ್ದರಿಂದ  ಕಾಂಗ್ರೆಸ್ ಗೆ ನಾನು ನೀಡುವ ಸಲಹೆಯಿಂದರೆ, ನಿಮಗೆ  ಆಂಧೋಲನ ನಡೆಸಲೇಬೇಕೆಂದಿದ್ದರೆ ಪಾಕಿಸ್ತಾನದ ದೌರ್ಜನ್ಯದ ವಿರುದ್ದ ನಡೆಸಿ. ಪ್ರತಿಭಟನೆ ನಡೆಸುತ್ತಿರುವವರಿಗೆ  ನೆರೆ ರಾಜ್ಯದ ಅಮಾನವೀಯ ನಡೆಯ ವಿರುದ್ಧ ಮಾನತಾಡುವ ಧೈರ್ಯವಿರುಬೇಕು. ದ್ವೇಷ ಸಾಧಿಸುವುದಾದರೆ ಜನರ ಜೀವನ ದುರ್ಭರಗೊಳಿಸಿರುವ 
ಪಾಕ್ ವಿರುದ್ಧ ದ್ವೇಷ ಸಾಧಿಸಿ, ಧರಣಿ ಮಾಡುವುದಾದರೆ ಧಾರ್ಮಿಕ ಅಲ್ಪಸಂಖ್ಯಾತರ ನೋವಿನ ವಿರುದ್ಧ ಮಾಡಿ ಎಂದು ಸವಾಲು ಹಾಕಿದರು. 

ಬಿಜೆಪಿ ಸರ್ಕಾರ ಕಳೆದ ಅನೇಕ ವರ್ಷಗಳಿಂದ ದೇಶದ ಹಳೆಯ ಸವಾಲುಗಳನ್ನು ಎದುರಿಸಿ ಜನರ ಜೀವನದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದೆ.  ದೇಶದ ಜನರ ಜೀವನ ಸುಲಭವಾಗಿಸುವುದು ನಮ್ಮ ಆದ್ಯತೆ. ಎಲ್ಲರಿಗೂ ಸೂರು, ಅಡುಗೆ ಅನಿಲ ಸಂಪರ್ಕ, ಕುಡಿಯುವ ನೀರು, ವಿಮಾ ಸುರಕ್ಷಾ ಕವಚ,  ಪ್ರತಿ ಗ್ರಾಮದಲ್ಲೂ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸುವುದು ನಮ್ಮ ಗುರಿ ಎಂದರು. 

2014ರಲ್ಲಿ ತಾವು ಅಧಿಕಾರಕ್ಕೇರಿದಾಗ ಸ್ವಚ್ಛ ಭಾರತದ ಯೋಜನೆಗೆ  ಕರೆ ನಿಡಿದ್ದೆ. ಲಕ್ಷಾಂತರ ಜನರು ಬೆಂಬಲಿಸಿದರು. ಈ ವರ್ಷದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 150ನೇ ಗಾಂಧಿ ಜನ್ಮದಿನಾಚರಣೆಯ ಸಂದರ್ಭದಲ್ಲಿ ನಮ್ಮ ದೇಶ ಬಯಲು ಶೌಚ ಮುಕ್ತವಾಗುವತ್ತ ಯಶಸ್ವಿ ಹೆಜ್ಜೆ ಇರಿಸಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು.

ಸಂತರಿಗೆ ಮೂರು ಮನವಿಗಳು ದೇಶದ ಅಭಿವೃದ್ಧಿಗಾಗಿ ತಾವು ಸಂತರಿಂದ ಮೂರು ಸಂಕಲ್ಪದಲ್ಲಿ ಸಕ್ರಿಯ ನೆರವು ಕೋರುತ್ತಿದ್ದೇನೆ ಎಂದು ಪ್ರಧಾನಿ ಮೋದಿ, ಮೊದಲನೆಯದಾಗಿ ಸಂತರು  ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು. ಪುರಾತನ ಸಂಸ್ಕೃತಿಯನ್ನು ಮತ್ತೊಮ್ಮೆ ಬಲಗೊಳಿಸಬೇಕು. ತಮ್ಮ ಭಕ್ತರು, ಸಮಾಜವನ್ನು ಈ ನಿಟ್ಟಿನಲ್ಲಿ ನಿರಂತರ ಜಾಗೃತಿಗೊಳಿಸಬೇಕು ಎಂದು ಕರೆ ನೀಡಿದರು. 

ಎರಡನೆಯದಾಗಿ ಸಂತರು ಪ್ರಕೃತಿ ಮತ್ತು ಪರಿಸರದ ರಕ್ಷಣೆಗೆ ಕೈಜೋಡಿಸಬೇಕು. ಸಮಾಜವನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತವಾಗಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಮೂರನೆಯದಾಗಿ, ಜಲಸಂರಕ್ಷಣೆ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಈ ಕುರಿತು ಜನಜಾಗೃತಿ ಮೂಡಿಸಿ ಸಹಯೋಗ ಒದಗಿಸಬೇಕು ಎಂದರು. 

ಭಾರತ ಎಂದಿಗೂ ಸಂತರು, ಋಷಿ, ಗುರುಗಳನ್ನು ಸರಿಯಾದ ಮಾರ್ಗದ ಮಾರ್ಗದರ್ಶಕರನ್ನಾಗಿ ನೋಡಿದೆ. ನವ ಭಾರತದಲ್ಲಿ ಕೂಡ ತುಮಕೂರಿನ ಸಿದ್ಧಗಂಗಾ ಮಠದ ಪಾತ್ರ ಮಹತ್ವದ್ದಾಗಿದೆ. ಸಂತರ ಆಶಿರ್ವಾದ ಸದಾ ನಮ್ಮ ಮೇಲಿರಲಿ ಎಂದರು. 

ಭಯೋತ್ಪಾದನೆಯ ವಿರುದ್ಧ ಭಾರತದ ರೀತಿ ಮತ್ತು ನೀತಿ ಬದಲಾಗಿದೆ.  ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಭಯೋತ್ಪಾದನೆಯನ್ನು ಸಂಪೂರ್ಣ ನಿಗ್ರಹಿಸಲು ಸಾಧ್ಯವಾಗಿದೆ.ಅಲ್ಲಿನ ಅನಿಶ್ಚಿತತೆ ಕೊನೆಯಾಗಿದೆ. ಈಗ  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಕೂಡ ಪ್ರಶಸ್ತ ವಾತಾವರಣ ನಿರ್ಮಾಣವಾಗಿದೆ ಎಂದರು. 

ನಾವೀಗ 21ನೇ ಶತಮಾನದ ಮೂರನೇ ದಶಕಕ್ಕೆ ಪ್ರವೇಶಿಸುತ್ತಿದ್ದೇವೆ. 21ನೇ ಶತಮಾನದ ಮೊದಲನೇ ದಶಕ ಕಠಿಣವಾದ ಪರಿಸ್ಥಿತಿ ಎದುರಿಸಿತು. ಮೂರನೇ ಶತಮಾನವನ್ನು ನಾವು ಬಲವಾದ ಅಡಿಪಾಯದೊಂದಿಗೆ ಪ್ರವೇಶಿಸುತ್ತಿದ್ದೇವೆ. ಈ ಆಕಾಂಕ್ಷೆ ನವ ಭಾರತ, ಯುವ ಕನಸುಗಳು, ದೇಶದ ಸಹೋದರ,ಸಹೋದರಿಯವರು, ದಲಿತರು, ಅದಿವಾಸಿಗಳು, ಅವಕಾಶ ವಂಚಿತರದ್ದಾಗಿದೆ. ಭಾರತವನ್ನು ಸಮೃದ್ಧ, ಸಕ್ಷಮ ಮತ್ತು ಸರ್ವ ಹಿತಕಾರಿಯನ್ನಾಗಿಸುವ  ಹಾಗೂ ಜಗತ್ತಿನ ನಕ್ಷೆಯಲ್ಲಿ ಭಾರತಕ್ಕೆ ಮಹತ್ವದ ಸ್ಥಾನ ಒದಗಿಸುವುದು ನಮ್ಮ ಗುರಿಯಾಗಿದೆ ಎಂದರು. 

ಶಿವಕುಮಾರ ಸ್ವಾಮಿ ಸ್ಮರಣೆ 

ಹಲವು ವರ್ಷಗಳ ನಂತರ ತುಮಕೂರಿಗೆ ಆಗಮಿಸುವ ಅವಕಾಶ ದೊರೆತಿದೆ ಎಂದ ಮೋದಿ,  ಇಲ್ಲಿ ಶಿವಕುಮಾರ ಸ್ವಾಮೀಜಿ ಅವರ ಕೊರತೆ ಎದ್ದುಕಾಣುತ್ತಿದೆ. ಅವರ  ಪವಿತ್ರ ವ್ಯಕ್ತಿತ್ವದ ಪ್ರೇರಣೆಯಿಂದ ದರ್ಶನ ಮಾತ್ರದಿಂದಲೇ ಭವಿಷ್ಯ ಉಜ್ವಲವಾಗುತ್ತಿತ್ತು.  ಈ ಮಠ ದಶಕದಿಂದ ಸಮಾಜಕ್ಕೆ ನೆರವು ನೀಡುತ್ತಿದೆ. 

ಸಮಾಜ ಅವಕಾಶಗಳ ಸಮಾಜಕ್ಕೆ ಇಲ್ಲಿಂದ ನೆರವಿನ ಗಂಗೆ ನಿರಂತರವಾಗಿ ಹರಿಯುತ್ತಿದೆ.  ಸ್ವಾಮೀಜಿ ತಮ್ಮ ಜೀವನಾವಧಿಯಲ್ಲಿ ಹಲವರ ಮೇಲೆ ತಮ್ಮ ಪ್ರಭಾವ ಬೀರಿದ್ದಾರೆ . ಇದು ಬಹಳ ಅಪರೂಪ. ಸ್ವಾಮೀಜಿಯ ಚರಣ ಕಮಲಗಳಿಗೆ ನಮಿಸುತ್ತಿದ್ದೆನೆ ಎಂದರು. 

ಕರ್ನಾಟಕದ ಪ್ರಮುಖ ಸಂತರಲ್ಲಿ ಒಬ್ಬರಾದ ಪೇಜಾವರ ಶ್ರೀಗಳ ದೇಹಾಂತದಿಂದ ಕೂಡ ಸಮಾಜಕ್ಕೆ ದೊಡ್ಡ ಕೊರತೆಯಾಗಿದೆ. ಅವರು ಹಾಕಿಕೊಟ್ಟ ದಿಕ್ಕಿನಲ್ಲಿ ಸಾಗುವ ಮೂಲಕ ಮಾನವತೆ ಮತ್ತು ಭಾರತಮಾತೆಗೆ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು. 

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೈಂಗೈತ್ಯ ಡಾ.ಶಿವಕುಮಾರ ಸ್ವಾಮಿ ಅವರ ಬೆಳ್ಳಿ ಪ್ರತಿಮೆ ನೀಡಿ ಗೌರವಿಸಲಾಯಿತು. 

ಹೊಸ ವರ್ಷದ ಶುಭಾಷಯಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ತುಮಕೂರಿನ ಈ ಪವಿತ್ರ ನೆಲದಲ್ಲಿ ಹೊಸ ವರ್ಷ ಆರಂಭಗೊಂಡಿತು. ಸಿದ್ಧಗಂಗಾ ಮಠದ ಈ ದೇಶದ ಜನರಿಗೆ ಕಲ್ಯಾಣವನ್ನುಂಟು ಮಾಡಲಿ ಎಂದು ಕನ್ನಡದಲ್ಲೇ ಹಾರೈಸಿದಾಗ ಜನರಲ್ಲಿ ಹರ್ಷೋದ್ಗಾರ ಕೇಳಿಬಂತು. 

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ಪ್ರಲ್ಹಾದ್ ಜೋಷಿ, ಸುರೇಶ್ ಅಂಗಡಿ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮತ್ತಿತರರು ಉಪಸ್ಥಿತರಿದ್ದರು.


Stay up to date on all the latest ರಾಜ್ಯ news
Poll
Amarinder-Sidhu

ನವಜೋತ್ ಸಿಂಗ್ ಸಿಧುಗೆ ಅಮರೀಂದರ್ ಅವರ ಪ್ರಬಲ ವಿರೋಧವು ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಾನಿ ಮಾಡುತ್ತದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp