ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಮುಳುಗಡೆಗೊಂಡ ಜಮೀನುಗಳಿಗೆ ಸಿಗುತ್ತಾ ಪರಿಹಾರ?

ಆಲಮಟ್ಟಿ ಜಲಾಶಯದ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಮುಳುಗಡೆ ವ್ಯಾಪ್ತಿಯ ಜಮೀನುಗಳಿಗೆ ಪ್ರತಿ ಎಕರೆ ಒಣ ಬೇಸಾಯ ಭೂಮಿಗೆ ೩೦ ಲಕ್ಷ ರೂ., ನೀರಾವರಿಗೆ ೪೦ ಲಕ್ಷ ರೂ. ಸಿಗಲಿದೆ ಎನ್ನುವ ರೈತರ ನಿರೀಕ್ಷೆಗೆ ಫಲ ಸಿಕ್ಕುವ ಕಾಲ ಸನ್ನಿಹಿತವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಮುಳುಗಡೆ ವ್ಯಾಪ್ತಿಯ ಜಮೀನುಗಳಿಗೆ ಪ್ರತಿ ಎಕರೆ ಒಣ ಬೇಸಾಯ ಭೂಮಿಗೆ ೩೦ ಲಕ್ಷ ರೂ., ನೀರಾವರಿಗೆ ೪೦ ಲಕ್ಷ ರೂ. ಸಿಗಲಿದೆ ಎನ್ನುವ ರೈತರ ನಿರೀಕ್ಷೆಗೆ ಫಲ ಸಿಕ್ಕುವ ಕಾಲ ಸನ್ನಿಹಿತವಾಗಿದೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಯುಕೆಪಿ ಯೋಜನೆಯಡಿ ಮುಳುಗಡೆ ಆಗಲಿರುವ ಜಮೀನುಗಳಿಗೆ ೩೦ ಲಕ್ಷ, ೪೦ ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದ ಬಹುತೇಕ ಜನಪ್ರತಿನಿಧಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರು, ಶಾಸಕರಾಗಿದ್ದಾರೆ.

ಆಲಮಟ್ಟಿ ಜಲಾಶಯದ ಎತ್ತರವನ್ನು ಈಗಿನ ೫೧೯.೬೦ ಮೀಟರ್‌ನಿಂದ ೫೨೫.೫೪೨ ಮೀಟರ್ ಹೆಚ್ಚಳದಿಂದ ಹಿನ್ನೀರಿನಲ್ಲಿ ಮುಳುಗಡೆ ಆಗಲಿರುವ ಜಮೀನುಗಳಿಗೆ ಸೂಕ್ತ ಪರಿಹಾರ ಧನ, ಪುನರ್‌ವಸತಿ ಮತ್ತು ಸ್ಥಳಾಂತರಕ್ಕಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರ ಸಮಿತಿ ಬೃಹತ್ ಪ್ರತಿಭಟನೆ ನಡೆಸಿದ್ದ ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಲ್ಲಿ ಮುಳುಗಡೆ ಆಗುವ ಪ್ರತಿ ಎಕರೆ ಒಣ ಬೇಸಾಯ ಜಮೀನಿಗೆ ೩೦ ಮತ್ತು ನೀರಾವರಿ ೪೦ ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಇಂದಿನ ಶಾಸಕರು ಭರವಸೆ ನೀಡಿದ್ದರು. ಇದೀಗ ಬಿಜೆಪಿ ಸರ್ಕಾರ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವುದರಿಂದ ಕೊಟ್ಟ ಭರವಸೆಯನ್ನು ಈಡೇರಿಸಬೇಕಿದೆ.

ಆಲಮಟ್ಟಿ ಜಲಾಶಯದ ಮುಳುಗಡೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಲು ದರ ನಿಗದಿ ಸಮಿತಿ ರಚಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮೊದಲಿನಿಂದಲೂ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಈ ಹಿಂದೆ ಜೆ.ಎಚ್.ಪಟೇಲ್ ಅವರ ಸರ್ಕಾರದಲ್ಲಿ ಮುಳುಗಡೆ ಭೂಮಿಗೆ ಏಕರೂಪದ ದರ ನಿಗದಿ ಪಡಿಸಲಾಗಿತ್ತು. ಈಗಲೂ ಏಕರೂಪ ದರ ನಿಗದಿ ಆಗಬೇಕು ಎನ್ನುವ ವಾದಕ್ಕೆ ಅಂಟಿಕೊಂಡಿದ್ದಾರೆ. 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಮೊದಲ ಬಜೆಟ್ ಮಂಡನೆಗೆ ಸಿದ್ದವಾಗುತ್ತಿದ್ದರೂ ದರ ನಿಗದಿ ಸಮಿತಿ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಈ ಹಿಂದೆ ನಡೆದ ರೈತರ ಹೋರಾಟದಲ್ಲಿ ಭರವಸೆ ನೀಡಿದವರೆಲ್ಲ ಮೌನಕ್ಕೆ ಶರಣಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ ಮೊದಲ ಆದ್ಯತೆ ಎನ್ನುವ ಮಾತನ್ನು ಆಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರು ಮುಂದಿನ ಮೂರುವರೆ ವರ್ಷಗಳಲ್ಲಿ ಯುಕೆಪಿಯ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಭರವಸೆ ನೀಡುತ್ತಲೇ ಇದ್ದಾರೆ. ದರ ನಿಗದಿ ಬಗ್ಗೆ ಚಕಾರವೆತ್ತುತ್ತಿಲ್ಲ.

ಯುಕೆಪಿ ಯೋಜನಾ ವ್ಯಾಪ್ತಿಯ ಜನಪ್ರತಿನಿಧಿಗಳು ಜಮೀನು ಪರಿಹಾರ, ಪುನರ್ವಸತಿ, ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬೇಕಿರುವ ಅಗತ್ಯ ಹಣಕಾಸನ್ನು ಬಜೆಟ್‌ನಲ್ಲಿ ಮೀಸಲಿರುಸುವಂತೆ ಒತ್ತಾಯಿಸಲು ಇದುವರೆಗೂ ಒಂದೇ ಒಂದು ಸಭೆ ಮಾಡಿಲ್ಲ. ಹಾಗಾದರೆ ಮುಳುಗಡೆ ಜಮೀನುಗಳಿಗೆ ಪ್ರತಿ ಎಕರೆಗೆ ೩೦ ಲಕ್ಷ, ೪೦ ಲಕ್ಷ ರೂ. ಪರಿಹಾರ ಸಿಗಲಿದೆ ಎನ್ನುವ ರೈತರಿಗೆ ನಿರಾಸೆ ಕಾಯ್ದಿದೆಯಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

ಪ್ರತಿ ಎಕರೆಗೆ ೩೦ ಲಕ್ಷ, ೪೦ ಲಕ್ಷ ಪರಿಹಾರ ಎನ್ನುವುದು ಬರಿ ಪ್ರತಿಭಟನಾಕಾರರ ಮನವೊಲಿಕೆಗಾಗಿ ಹೇಳಿದ ಭರವಸೆಯಾಗಿ ಉಳಿಯುತ್ತದೋ ಹೇಗೆ ಎನ್ನುವುದು ಉತ್ತರಿಸಲಾಗದ ಬಹುದೊಡ್ಡ ಪ್ರಶ್ನೆಯಾಗಿದೆ.

ಈಗಾಗಲೇ ಕೃಷ್ಣಾ ಮೇಲ್ದಂಡೆ ಯೋಜನಾ ವೆಚ್ಚ ೧ ಲಕ್ಷ ಕೋಟಿ ರೂ. ಮೀರಿದೆ. ಇಷ್ಟೊಂದು ಬೃಹತ್ ಬಜೆಟ್‌ನ ಯೋಜನೆಯನ್ನು ಪೂರ್ಣಗೊಳಿಸಲು ಕರ್ನಾಟಕ ಸರ್ಕಾರದಿಂದ ಸಾಧ್ಯವೆ ? ಎನ್ನುವ ಅನುಮಾನ ಶುರುವಾಗಿದೆ. ಫಲವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇದನ್ನೊಂದು ರಾಷ್ಟಿçÃಯ ಯೋಜನೆಯನ್ನಾಗಿ ರೂಪಿಸಿ ಎನ್ನುವ ಪ್ರಸ್ತಾವನೆಯನ್ನು ಹರಿಬಿಟ್ಟಿದ್ದರೂ ಆ ಬಗ್ಗೆ ಯಾರೂ ಗಂಭೀರವಾಗಿ ಚಿಂತನೆ ನಡೆಸಿಲ್ಲ.

ಏತನ್ಮಧ್ಯೆ ಮುಂದಿನ ತಿಂಗಳು ಮಂಡನೆ ಆಗಲಿರುವ ಬಜೆಟ್‌ನಲ್ಲಿ ಆಲಮಟ್ಟಿ ಯೋಜನೆ ಅನುಷ್ಠಾನಕ್ಕೆ ಎಷ್ಟು ಹಣ ಮೀಸಲು ಇಡಲಾಗುತ್ತದೆ. ಜಿಲ್ಲೆಯ ಜನಪ್ರತಿನಿಧಿಗಳು ರೈತರಿಗೆ ನೀಡಿರುವ ಭರವಸೆ ಎಷ್ಟರ ಮಟ್ಟಿಗೆ ಈಡೇರುತ್ತದೆ ಎನ್ನುವುದು ಕುತೂಹಲದ ಸಂಗತಿಯಾಗಿದೆ.


ವಿಠ್ಠಲ ಆರ್.ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com