#Go Back: ಉದ್ದೇಶಿತ ಅಮಿತ್ ಶಾ ಮಂಗಳೂರು ಭೇಟಿಗೆ ಕಾಂಗ್ರೆಸ್ ವಿರೋಧ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉದ್ದೇಶಿತ ಮಂಗಳೂರು ನಗರ ಭೇಟಿಯಿಂದ ಕರಾವಳಿ ಪಟ್ಟಣದಲ್ಲಿ ಮತ್ತೆ ಶಾಂತಿ, ನೆಮ್ಮದಿ ಹದಗೆಡುವ ಸಾಧ್ಯತೆಯಿದೆ.
ಅಮಿತ್ ಶಾ
ಅಮಿತ್ ಶಾ

ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉದ್ದೇಶಿತ ಮಂಗಳೂರು ನಗರ ಭೇಟಿಯಿಂದ ಕರಾವಳಿ ಪಟ್ಟಣದಲ್ಲಿ ಮತ್ತೆ ಶಾಂತಿ, ನೆಮ್ಮದಿ ಹದಗೆಡುವ ಸಾಧ್ಯತೆಯಿದೆ ಎಂದು ಆಕ್ಷೇಪ ಎತ್ತಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಅಮಿತ್ ಷಾ ಭೇಟಿ ವಿರೋಧಿಸಿ ಜಿಲ್ಲೆಯಾದ್ಯಂತ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ

ಡಿಸೆಂಬರ್ 19 ರಂದು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದದ ಪ್ರತಿಭಟನೆಗಳಿಂದ ನಗರದಲ್ಲಿ ವ್ಯಾಪಕ ಹಿಂಸಾಚಾರಗಳು ನಡೆದಿದ್ದವು, ಪ್ರಸ್ತುತ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಸನ್ನಿವೇಶದಲ್ಲಿ ಉದ್ದೇಶಿತ ಅಮಿತ್ ಶಾ ಅವರ ಭೇಟಿ ಜಿಲ್ಲೆಯಲ್ಲಿ ಆಶಾಂತಿ ಮರುಕಳಿಸುವ ಸಾಧ್ಯತೆಯಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

ಅಮಿತ್ ಶಾ ಮಂಗಳೂರು ಭೇಟಿಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲೆಯಾದ್ಯಂತ ಧರಣಿ ನಡೆಸಲಿದ್ದಾರೆ ಎಂದು ಪ್ರಕಟಿಸಿದರು. ಪೊಲೀಸ್ ಫೈರಿಂಗ್ ನಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬ ಸದಸ್ಯರನ್ನು ಈವರೆಗೂ ಸ್ಥಳೀಯ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಮಾಡಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ, ಮಂಗಳೂರು ನಗರಕ್ಕೆ ಅಮಿತ್ ಶಾ ಭೇಟಿಯನ್ನು ವಿರೋಧಿಸಿದರು. ಸಂಪೂರ್ಣ ರಾಜಕೀಯ ಉದ್ದೇಶದಿಂದ ಅಮಿತ್ ಶಾ ನಗರಕ್ಕೆ ಬರುತ್ತಿದ್ದಾರೆ ಎಂದು ಆರೋಪಿಸಿದರು 

ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ 19 ರಂದು ಮಂಗಳೂರು ನಗರಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದ್ದು, ಜಿಲ್ಲಾ ಬಿಜೆಪಿ ಆಯೋಜಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಳೆದ ಡಿಸೆಂಬರ್ ಕೊನೆ ವಾರದಲ್ಲಿ ಕೇಂದ್ರದ ಸಿಎಎ ಕಾಯ್ದೆ ಜಾರಿ ವಿರೋಧಿಸಿ ನೆಡೆದ ಪ್ರತಿಭಟನೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಪೊಲೀಸ್ ಠಾಣೆಯೊಂದಕ್ಕೆ ಉದ್ರಿಕ್ತ ಗುಂಪು ನುಗ್ಗಲು ಯತ್ನಿಸಿತು ಎಂದು ಆರೋಪಿಸಿ ಪೊಲೀಸರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com