ಭಾರತ್ ಬಂದ್ ಗೆ ಪೊಲೀಸ್ ಅನುಮತಿ ಇಲ್ಲ: ಭಾಸ್ಕರ್ ರಾವ್

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಇದೇ 8ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಮುಷ್ಕರ್, ಮೆರವಣಿಗೆ‌ ಮಾಡಲು ಅನುಮತಿ....
ಭಾಸ್ಕರ್ ರಾವ್
ಭಾಸ್ಕರ್ ರಾವ್

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಇದೇ 8ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಮುಷ್ಕರ್, ಮೆರವಣಿಗೆ‌ ಮಾಡಲು ಅನುಮತಿ ನಿರಾಕರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 10 ಕಾರ್ಮಿಕ ಸಂಘಟನೆಗಳು ಬುಧವಾರ ದೇಶದಾದ್ಯಂತ ಬಂದ್ ಗೆ ಕರೆ ನೀಡಿವೆ. 
ಮುಷ್ಕರದ ಹೆಸರಲ್ಲಿ ಮೆರವಣಿಗೆ ನಡೆಸಿದರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ನಗರದಲ್ಲಿ ಮುಷ್ಕರಕ್ಕೆ ಅನುಮತಿ ನೀಡುವುದಿಲ್ಲ. ಮೆರವಣಿಗೆ ಮಾಡಿದರೆ ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದರು. 

ಒಂದು ವೇಳೆ ಆದೇಶ ಉಲ್ಲಂಘಿಸಿ ಮೆರವಣಿಗೆ ಮಾಡಿದರೆ ಆಯೋಜಕರ ಮೇಲೆ 107 ಸೆಕ್ಷನ್ ಅಡಿ ಮೊಕದ್ದಮೆ ದಾಖಲಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದರು. 

ಕೆಲವು ಕಾರ್ಮಿಕ ಸಂಘಟನೆಗಳು ಮೆರವಣಿಗೆ ಮಾಡುವುದಾಗಿ ಅನುಮತಿ ಕೇಳುವುದಕ್ಕೆ ಬಂದಿದ್ದರು. ಆದರೆ, ನಾವು ಅನುಮತಿ ಕೊಡುವುದಿಲ್ಲ ಎಂದು ತಿಳಿಸಿದ್ದೇವೆ. ಏನೇ ಹೋರಾಟ ಮಾಡುವುದಿದ್ದರೂ ಫ್ರೀಡಂ ಪಾರ್ಕಿನಲ್ಲಿ ಮಾಡಬೇಕು ಎಂದರು. 

ನಗರದಲ್ಲಿ ದಿನ ಬೆಳಗಾದರೆ ಸಂಚಾರಿ ಒತ್ತಡ ಉಂಟಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಅಗುತ್ತದೆ. ಇವರು ಮೆರವಣಿಗೆ ಮಾಡಿ ಲಕ್ಷಾಂತರ ಜನರಿಗೆ ತೊಂದರೆ ಕೊಡಲು ಬಿಡುವುದಿಲ್ಲ. ಭಾರತ್ ಬಂದ್ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಒಂದು ವೇಳೆ ಬಂದ್ ಮಾಡಿದರೆ ಅದಕ್ಕೆ ಆಯೋಜಕರೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು. 

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಷರತ್ತುಗಳಿವೆ. ಏನೇ ಸಣ್ಣ ಘಟನೆಯಾದರೂ ಆಯೋಜಕರ ಮೇಲೆ ದೂರು ದಾಖಲಿಸುತ್ತೇವೆ. ಯಾವುದೇ ಅನಾಹುತವಾದರೂ ಅವರೇ ಅದಕ್ಕೆ ಜವಾಬ್ದಾರರು ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com