ಭಾರತ್ ಬಂದ್: ರಾಜ್ಯಾದ್ಯಂತ ಜನ ಜೀವನ ಅಸ್ತವ್ಯಸ್ತ ಸಾಧ್ಯತೆ, ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

ಕೇಂದ್ರದ ಜನ ವಿರೋಧಿ ಆಡಳಿತದ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ರಾಷ್ಟ್ರ ವ್ಯಾಪ್ತಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನ ಜೀವನ ಅಸ್ತವ್ಯಸ್ತವಾಗುವ ನಿರೀಕ್ಷೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೇಂದ್ರದ ಜನ ವಿರೋಧಿ ಆಡಳಿತದ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ರಾಷ್ಟ್ರ ವ್ಯಾಪ್ತಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನ ಜೀವನ ಅಸ್ತವ್ಯಸ್ತವಾಗುವ ನಿರೀಕ್ಷೆಯಿದೆ.

10 ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ರೈತ ಪರ ಮತ್ತು ವಿವಿಧ ಜನಪರ ಸಂಘಟನೆಗಳು ಸಹ ಬೆಂಬಲ ನೀಡಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗುವ ನಿರೀಕ್ಷೆಯಿದೆ. ಬಂದ್ ವಿಫಲಗೊಳಿಸಲು ಸರ್ಕಾರ ಪ್ರಯತ್ನ ನಡೆಸಿದ್ದು, ಬಸ್ ಸಂಚಾರದಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಆದರೆ ಶಾಲಾ ಕಾಲೇಜುಗಳಿಗೆ ಸರ್ಕಾರದಿಂದ ರಜೆ ಘೋಷಿಸಿಲ್ಲ,. ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಪದೇ ಪದೇ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಸ್ಥಳೀಯ ಪರಿಸ್ಥಿತಿಯನ್ನು ಗಮನಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾಧಿಕಾರಿಗಳು, ಜಿಲ್ಲಾಪೊಲೀಸ್ ವರಿಷ್ಠರಿಗೆ ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಎನ್‌ಡಿಎ ಸರ್ಕಾರದ ವಿರುದ್ಧ ನಡೆಯುತ್ತಿರುವ ಭಾರತ್ ಬಂದ್ ಆದ್ದರಿಂದ ಇದನ್ನು ವಿಫಲಗೊಳಿಸಲು ರಾಜ್ಯ ಸರ್ಕಾರ ತನ್ನ ವಿವಿಧ ಇಲಾಖೆಗಳಿಗೆ ಸರ್ಕಾರಿ ಸೇವೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದೆ.

ಸಾರಿಗೆ ಇಲಾಖೆಯ ನೌಕರರಿಗೆ ಬಹಿರಂಗವಾಗಿಯೇ ಕರೆ ನೀಡಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು, ಭಾರತ್ ಬಂದ್ ಮಾಡುವುದೆಂದರೆ ದೇಶದ ಆರ್ಥಿಕ ಶಕ್ತಿಯನ್ನು ಕುಗ್ಗಿಸುವುದು ಎಂದರ್ಥ. ಹೀಗಾಗಿ ದೇಶದ ಅಭಿವೃದ್ಧಿಗೆ ತೊಡಕಾಗಿರುವ ಬಂದ್‌ಗೆ ಸಹಕಾರ ನೀಡಬಾರದು ಎಂದು ಸಾರಿಗೆ ಇಲಾಖೆ ನೌಕರರಿಗೆ ಕರೆ ನೀಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉನ್ನತ ಪೋಲೀಸ್ ಅಧಿಕಾರಿಗಳ ಜತೆ ಚರ್ಚಿಸಿದ್ದು ಭಾರತ್ ಬಂದ್‌ನ್ನು ಯಶಸ್ವಿಯಾಗಿಸಲು ಬಿಜೆಪಿ ವಿರೋಧಿ ಶಕ್ತಿಗಳು ಬೀದಿಗಿಳಿಯಲಿದ್ದು ಸಕಾಲಿಕ ಕ್ರಮ ಕೈಗೊಳ್ಳದೆ ಹೋದರೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತವೆ. ಇದಕ್ಕೆ ಅವಕಾಶ ನೀಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ರಾಷ್ಟ್ರೀಯ ಪೌರತ್ವ ಕಾಯ್ದೆ ಹಾಗೂ ಪೌರತ್ನ ನೋಂದಣಿ ವಿರೋಧಿಸುವ ಶಕ್ತಿಗಳು ಬಂದ್ ಕರೆಯ ಹಿಂದೆ ದೊಡ್ಡ ಮಟ್ಟದಲ್ಲಿ ನಿಂತುಕೊಂಡಿವೆ. ಇದೇ ರೀತಿ ವಿವಿಧ ಶಕ್ತಿಗಳು ಕೇಂದ್ರದ ವಿರುದ್ಧ ಕೆಂಡ ಕಾರುತ್ತಿವೆ. ಹೀಗಾಗಿ ನಾಳಿನ ಬಂದ್ ಯಶಸ್ವಿಯಾಗಬೇಕು ಎಂದು ಅವು ಎಲ್ಲ ರೀತಿಯ ಪ್ರಯತ್ನ ಮಾಡುತ್ತವೆ. ಹೀಗಾಗಿ ಇಂತಹ ಶಕ್ತಿಗಳ ಕೈ ಮೇಲಾಗದಂತೆ ನೋಡಿಕೊಳ್ಳಿ. ಸಮಾಜಘಾತಕ ಶಕ್ತಿಗಳ ಮೇಲೆ ಕಣ್ಣಿರಲಿ. ಸ್ವಲ್ಪ ಎಚ್ಚರ ತಪ್ಪಿದರೂ ಪರಿಸ್ಥಿತಿ ಕೈ ಮೀರಬಹುದು ಎಂದು ಮುಖ್ಯಮಂತ್ರಿಗಳು ಪೋಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಂದ್ ಅನ್ನು ಯಶಸ್ವಿಗೊಳಿಸುವುದು ಪ್ರತಿಪಕ್ಷಗಳ ಸ್ವಪ್ರತಿಷ್ಟೆಯ ಪ್ರಶ್ನೆಯಾಗಿದ್ದು, ಅದನ್ನು ಯಶಸ್ವಿಯಾಗದಂತೆ ನೋಡಿಕೊಳ್ಳುವ ಮೂಲಕ ತನ್ನ ಮೇಲುಗೈ ಮೆರೆಯಬೇಕು ಎಂಬುದು ಸರ್ಕಾರದ ಬಯಕೆಯಾಗಿದೆ. ಹೀಗಾಗಿ ಬಂದ್ ಇದೀಗ ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com