ಕಾವೇರಿ ಕೂಗು ಅಭಿಯಾನ: ಯಾವ ಅಧಿಕಾರದ ಮೇಲೆ ಹಣ ಸಂಗ್ರಹಿಸುತ್ತಿದ್ದೀರಿ? ಈಶಾ ಫೌಂಡೇಷನ್ ಗೆ ಹೈಕೋರ್ಟ್‌ ಚಾಟಿ

‘ಕಾವೇರಿ ಕೂಗು’ ಅಭಿಯಾನದ ಹೆಸರಲ್ಲಿ ಇಲ್ಲಿಯವರೆಗೆ ಸಾರ್ವಜನಿಕರಿಂದ ಎಷ್ಟು ಹಣ ಸಂಗ್ರಹಿಸಲಾಗಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಷನ್ ಅನ್ನು ಹೈಕೋರ್ಟ್ ಪ್ರಶ್ನಿಸಿದೆ.
ಸದ್ಗುರು ಜಗ್ಗಿ ವಾಸುದೇವ
ಸದ್ಗುರು ಜಗ್ಗಿ ವಾಸುದೇವ

ಬೆಂಗಳೂರು: ‘ಕಾವೇರಿ ಕೂಗು’ ಅಭಿಯಾನದ ಹೆಸರಲ್ಲಿ ಇಲ್ಲಿಯವರೆಗೆ ಸಾರ್ವಜನಿಕರಿಂದ ಎಷ್ಟು ಹಣ ಸಂಗ್ರಹಿಸಲಾಗಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಷನ್ ಅನ್ನು ಹೈಕೋರ್ಟ್ ಪ್ರಶ್ನಿಸಿದೆ.

ಈ ಕುರಿತು ವಕೀಲ ಎ.ವಿ. ಅಮರನಾಥನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ಪೀಠ,  ‘ಕಾವೇರಿ ಕೂಗು’ ಅಭಿಯಾನದ ಹೆಸರಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿರುವ ಈಶಾ ಫೌಂಡೇಷನ್‌ಗೆ ಚಾಟಿ ಬೀಸಿದೆ.

ಫೌಂಡೇಷನ್‌ ಈವರೆಗೆ ಯಾವ ವಿಧಾನದಿಂದ ಎಷ್ಟು ಹಣ ಸಂಗ್ರಹ ಮಾಡಿದೆ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆಯೂ ಹೈಕೋರ್ಟ್ ನಿರ್ದೇಶನ ನೀಡಿದೆ. ಇತ್ತ ರಾಜ್ಯ ಸರ್ಕಾರ, ತಾನು ಹಣ ಸಂಗ್ರಹಿಸಲು ಯಾವುದೇ ಸಂಸ್ಥೆಗಳಿಗೆ ಅನುಮತಿ ಕೊಟ್ಟಿಲ್ಲ ಎಂದು ಪ್ರಮಾಣ ಪತ್ರವನ್ನೂ ಹೈಕೋರ್ಟ್‌ಗೆ ಸಲ್ಲಿಸಿದೆ.

‘ಲಾಭರಹಿತ ಆಧ್ಯಾತ್ಮಿಕ ಸಂಸ್ಥೆ ಎಂದು ಹೇಳುತ್ತೀರಿ. ಹಾಗಿದ್ದರೆ ಹಣ ಏಕೆ ಸಂಗ್ರಹ ಮಾಡುತ್ತೀರಿ? ಯಾವ ಅಧಿಕಾರದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿದ್ದೀರಿ? ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಸಂಸ್ಥೆಗೆ ಸೇರಿಸಿಕೊಂಡಿದ್ದೀರಲ್ಲಾ, ಅವರನ್ನು ನೇಮಕ ಮಾಡಿದ್ದು ಯಾರು? ನೀವು ಹಣ ಸಂಗ್ರಹ ಮಾಡುತ್ತಿರುವ ವಿಚಾರ ಆ ನ್ಯಾಯಮೂರ್ತಿಗಳಿಗೆ ಗೊತ್ತಿದೆಯೇ?’ ಎಂದು ಫೌಂಡೇಷನ್‌ ಪರ ವಕೀಲರನ್ನು ಕೋರ್ಟ್‌ ಪ್ರಶ್ನಿಸಿತು.

ಇನ್ನು ಹೈಕೋರ್ಟ್‌ ಪ್ರಶ್ನೆಗೆ ಉತ್ತರಿಸಿದ ಫೌಂಡೇಷನ್ ಪರ ವಕೀಲರು, ‘ನದಿ ಪುನಶ್ಚೇತನ ಹಾಗೂ ಪರಿಸರದ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಿಂದ ಬಲವಂತವಾಗಿ ಹಣ ಸಂಗ್ರಹ ಮಾಡುತ್ತಿಲ್ಲ, ಜನರೇ ಸ್ವಯಂಪ್ರೇರಣೆಯಿಂದ ದೇಣಿಗೆ ನೀಡುತ್ತಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com