ಆಧ್ಯಾತ್ಮ ಗುರುವಿಗೆ ಹುಲಿ ಚರ್ಮ ತಂದ ಸಂಕಷ್ಟ!

ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಫೋಟೋವೊಂದು ಸ್ವಯಂಘೋಷಿತ ಆಧ್ಯಾತ್ಮ ಗುರು ವಿನಯ್ ಗುರೂಜಿ ಅವರಿಗೆ ಸಂಕಷ್ಟ ತಂದೊಡ್ಡಿದೆ.
ಹುಲಿ ಚರ್ಮ ಮತ್ತು ವಿನಯ್ ಗುರೂಜಿ
ಹುಲಿ ಚರ್ಮ ಮತ್ತು ವಿನಯ್ ಗುರೂಜಿ

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಫೋಟೋವೊಂದು ಸ್ವಯಂಘೋಷಿತ ಆಧ್ಯಾತ್ಮ ಗುರು ವಿನಯ್ ಗುರೂಜಿ ಅವರಿಗೆ ಸಂಕಷ್ಟ ತಂದೊಡ್ಡಿದೆ.

ಹೌದು.. ಖ್ಯಾತ ಸ್ವಯಂಘೋಷಿತ ಆಧ್ಯಾತ್ಮ ಗುರು ಅವರು ಇತ್ತೀಚೆಗೆ ಅತಿಥಿಯೊಂದಿಗೆ ಸಂಭಾಷಣೆ ನಡೆಸಿದ್ದ ಫೋಟೋ ವೈರಲ್ ಆದ ಬೆನ್ನಲ್ಲೇ ವಿನಯ್ ಗುರೂಜಿ ಆಶ್ರಮದಲ್ಲಿ ಅರಣ್ಯಾಧಿಕಾರಿಗಳು ಶೋಧ ನಡೆಸಿದ್ದಾರೆ. ಈ ವೇಳೆ ಅವರಿಗೆ ಹುಲಿ ಚರ್ಮ ದೊರೆತಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಷ್ಟಕ್ಕೂ ನಡೆದ್ದದ್ದೇನು?
ಇತ್ತೀಚೆಗಷ್ಟೇ ಅಶ್ರಮಕ್ಕೆ ಆಗಮಿಸಿದ್ದ ಭಕ್ತರೊಬ್ಬರು ವಿನಯ್ ಗುರೂಜಿ ಅವರನ್ನು ಭೇಟಿಯಾಗಿದ್ದರು. ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋಗಳನ್ನೂ ಕೂಡ ಅಪ್ಲೋಡ್ ಮಾಡಿದ್ದರು. ಫೋಟೋದಲ್ಲಿ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತು ಮಾತನಾಡುತ್ತಿದ್ದರು. ಈ ಫೋಟೋ ವ್ಯಾಪಕ ವೈರಲ್ ಆಗಿತ್ತು. ಇದೇ ಫೋಟೋ ವಿಚಾರಕ್ಕೆ ಸಂಬಂಧಿಸಿದಂತೆ  ಅರಣ್ಯಾಧಿಕಾರಿಗಳಿಗೆ ಕೂಡಲೇ ಅಧಿಕಾರಿಗಳು ವಿನಯ್ ಗುರೂಜಿ ಆಶ್ರಮದಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಅವರಿಗೆ ಹುಲಿ ಚರ್ಮವೊಂದು ದೊರೆತಿದೆ ಎನ್ನಲಾಗಿದೆ. ಈ ಕುರಿತಂತೆ ಅಧಿಕಾರಿಗಳು ವಿನಯ್ ಗುರೂಜಿ ಅಶ್ರಮದ ವಿವರ ಕೇಳಿದ್ದಾರೆ ಎನ್ನಲಾಗಿದೆ.

ಹುಲಿ ಚರ್ಮ ಅಕ್ರಮವಲ್ಲ. ಸೂಕ್ತ ಪ್ರಮಾಣ ಪತ್ರವಿದೆ
ಇನ್ನು ಹುಲಿ ಚರ್ಮದ ಫೋಟೋ ವೈರಲ್ ಆದ ಬೆನ್ನಲ್ಲೇ ಈ ಕುರಿತಂತೆ ಮಾಹಿತಿ ನೀಡಿರುವ ವಿನಯ್ ಗುರೂಜಿ, ಹುಲಿ ಚರ್ಮ ಅಕ್ರಮದಲ್ಲ. ಆಶ್ರಮಕ್ಕೆ ಭಕ್ತರು ನೀಡಿದ್ದು. ಅದಕ್ಕೆ ಸೂಕ್ತ ಮಾಲೀಕತ್ವ ಪ್ರಮಾಣ ಪತ್ರಕೂಡ ಇದೆ. ಶೀಘ್ರದಲ್ಲೇ ಅದನ್ನು ಅರಣ್ಯಾಧಿಕಾರಿಗಳಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಆದರೆ ಆಶ್ರಮದ ಆಡಳಿತ ಮಂಡಳಿಯ ಉತ್ತರಕ್ಕೆ ಸಮಾಧಾನಗೊಳ್ಳದ ಅರಣ್ಯ ಇಲಾಖೆ, ಮೊದಲು ಅವರು ಪ್ರಮಾಣ ಪತ್ರ ನೀಡಲಿ. ಆ ಬಳಿಕ ಅದರ ಸತ್ಯಾಸತ್ಯತೆ ತಿಳಿದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ. ಒಂದು ವೇಳೆ ವಿನಯ್ ಗುರೂಜಿ ಅವರು ಹೇಳಿದಂತೆ ಪ್ರಮಾಣ ಪತ್ರ ಅಸಲಿಯಾದರೂ, ಅದನ್ನು ಯಾರು ನೀಡಿದರು. ಅವರಿಗೆ ಈ ಹುಲಿ ಚರ್ಮ ಎಲ್ಲಿಂದ ಬಂತು ಎಂಬಿತ್ಯಾದಿ ಪ್ರಶ್ನೆಗಳು ಏಳುತ್ತವೆ. ಈ ಕುರಿತು ತನಿಖೆ ಬಳಿಕವೇ ಉತ್ತರ ದೊರೆಯಲಿದೆ  ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

2000ರಲ್ಲಿ ಅಂದಿನ ಕರ್ನಾಟಕ ಅರಣ್ಯ ಇಲಾಖೆ ಪರಿಸರ ಇಲಾಖೆಯ ನಿರ್ದೇಶನದ ಮೇರೆಗೆ ಜನರು ತಮ್ಮ ಬಳಿ ಇರುವ ವನ್ಯ ಜೀವಿಗಳ ವಸ್ತುಗಳನ್ನು ಬಹಿರಂಗ ಪಡಿಸಿ ಸೂಕ್ತ ಪ್ರಮಾಣ ಪತ್ರ ಪಡೆಯುವಂತೆ ಸೂಚಿಸಲಾಗಿತ್ತು. ಆದರೆ ಆ ಬಳಿಕದ ವರ್ಷಗಳಲ್ಲಿ ಇಲಾಖೆ ಅದನ್ನು ಸ್ಥಗಿತಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com