ಉಚಿತ ವಿದ್ಯುತ್, ಸಾಲಮನ್ನಾದಂತಹ ತಾತ್ಕಾಲಿಕ ಪರಿಹಾರದಿಂದ ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ: ವೆಂಕಯ್ಯ ನಾಯ್ಡು

ಉಚಿತ ವಿದ್ಯುತ್, ರೈತರ ಸಾಲಮನ್ನಾ ಎನ್ನುವುದು ತಾತ್ಕಾಲಿಕ ಪರಿಹಾರ ಮಾತ್ರ. ತಾತ್ಕಾಲಿಕ ಉಪಶಮನದಿಂದ ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಪ್ರತಿಪಾದಿಸಿದ್ದಾರೆ.
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು

ಬೆಂಗಳೂರು: ಉಚಿತ ವಿದ್ಯುತ್, ರೈತರ ಸಾಲಮನ್ನಾ ಎನ್ನುವುದು ತಾತ್ಕಾಲಿಕ ಪರಿಹಾರ ಮಾತ್ರ. ತಾತ್ಕಾಲಿಕ ಉಪಶಮನದಿಂದ ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಪ್ರತಿಪಾದಿಸಿದ್ದಾರೆ.

ಕಳೆದ ಐದು ದಿನಗಳಿಂದ ನಗರದ ಜಿಕೆವಿಕೆಯಲ್ಲಿ ಆಯೋಜನೆಗೊಂಡಿದ್ದ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಉಚಿತ ವಿದ್ಯುತ್, ರೈತರ ಸಾಲ ಮನ್ನಾದಿಂದ ಯಾವುದೇ ಸಾಧನೆ ಆಗುವುದಿಲ್ಲ. ನಿಜವಾಗಿ ಸಾಲಮನ್ನಾ ಇರುವುದೇ ಆಗಿದ್ದರೆ ನಾನು ಸಹ ಬ್ಯಾಂಕಿನಿಂದ ಹಣಪಡೆದುಕೊಳ್ಳುತ್ತಿದ್ದೆ ಎಂದರು. 

ಜೈ ಜವಾನ್, ಜೈ‌ ಕಿಸಾನ್,‌ ಜೈ ವಿಜ್ಞಾನ್ ಎನ್ನುವುದನ್ನು ಮರೆಯಬಾರದು‌. ನಮ್ಮ ದೇಶದಲ್ಲಿ ಪ್ರಶ್ನೆ ಮಾಡುವುದು ಸುಲಭ. ಆದರೆ ಉತ್ತರ ಕಂಡುಕೊಳ್ಳುವುದು ಕಷ್ಟ. ಕೃಷಿ ಕ್ಷೇತ್ರದಲ್ಲಿ ಉತ್ತರ ಕಂಡುಕೊಳ್ಳಲು ಆದ್ಯತೆ ನೀಡಬೇಕು ಎಂದರು.  

ಹೊಸವರ್ಷದ ಆರಂಭದಲ್ಲಿ ದೇಶದ ವಿವಿಧ ಭಾಗಗಳಿಂದ ಹಲವಾರು ವಿಜ್ಞಾನಿಗಳು ಭಾಗವಹಿಸಿ ಸಮ್ಮೇಳನ  ಯಶಸ್ವಿಗೊಳಿಸಿದ್ದಾರೆ. ಕೃಷಿ ಭಾರತದ ಮೂಲ. ಕೃಷಿ ಕ್ಷೇತ್ರವನ್ನು ಪ್ರೇರೇಪಿಸಿ ಉಳಿಸಿ ಬೆಳೆಸುವ ಕೆಲಸವಾಗಬೇಕು. ಕೃಷಿಯತ್ತ ಎಲ್ಲರೂ ಹೆಚ್ಚು ಒತ್ತು ಕೊಡಬೇಕು. ಕೃಷಿ ಇಂದು ಹಲವು ಸಮಸ್ಯೆಗಳಿಂದ ನರಳುತ್ತಿದೆ. ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದೇ ಮಾದರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಕರ್ನಾಟಕ‌ದಲ್ಲಿ ಕೃಷಿಗೆ ಒತ್ತು ಕೊಟ್ಟಿದ್ದಾರೆ ಎಂದರು.
 
ನಮ್ಮಲ್ಲಿ ಆಲೂಗಡ್ಡೆ ಬೆಳೆದು ಚಿಪ್ಸ್‌ನ್ನು ಹೊರದೇಶದಿಂದ ಆಮದು ಮಾಡಿಕೊಳ್ಳುತ್ತೇವೆ. ಇದು ಮೂರ್ಖತನ. ಹೀಗಾಗಿ ವಿಜ್ಞಾನ  ತಂತ್ರಜ್ಞಾನ ಬಳಸಿಕೊಂಡು ನಾವೇ ಚಿಪ್ಸ್ ತಯಾರಿಸುವಂತಾಗಬೇಕು. ಇದು ನಿಜವಾದ ಬೆಳವಣಿಗೆ ಎಂದು ಹೇಳಿದರು.

ಕೃಷಿ ತಜ್ಞ ಡಾ. ಎಂ.ಎಸ್.ಸ್ವಾಮಿನಾಥನ್ ಅವರ ಸೇವೆಯನ್ನು ಕೃಷಿ ವಲಯ ಎಂದೆಂದಿಗೂ ನೆನಪಿಸಿಕೊಳ್ಳಬೇಕು. ಹೊರದೇಶದಿಂದ ಬಂದ ಆಹಾರ ಅವಲಂಬಿಸಿ ನಮ್ಮ ದೇಶದಲ್ಲಿ ಆಹಾರ ಭದ್ರತೆ ಸೃಷ್ಟಿಸಲು ಸಾಧ್ಯವಿಲ್ಲ. ದೇಶದ ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕು. ಹೊಸ ಕೃಷಿ ವಿಧಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಕುರಿತು ಗಮನಹರಿಸಬೇಕು. ಮಣ್ಣಿನ ಗುಣಮಟ್ಟ ಕಾಪಾಡಲು ಒತ್ತು ನೀಡಬೇಕು ಎಂದರು. 

ದೇಶಾದ್ಯಂತ ಹಲವು ಕೃಷಿ ವಿಶ್ವವಿದ್ಯಾಲಯಗಳು, ಕೃಷಿ‌ ಕೇಂದ್ರಗಳಿದ್ದು, ರೈತರು ಇಂತಹ ಕೇಂದ್ರಗಳಿಗೆ ಭೇಟಿ ಕೊಟ್ಟು ಆಗಾಗ ಮಾಹಿತಿ ಪಡೆದು ಕೃಷಿ ಕ್ಷೇತ್ರ ಸಮೃದ್ಧಿಗೊಳಿಸಬೇಕು. ಸರ್ಕಾರಗಳು ರೈತರು ಬೆಳೆದ ಫಸಲಿಗೆ ಉತ್ತಮ ಬೆಲೆ ದೊರಕಿಸಿಕೊಡುವ ಕೆಲಸ ಮಾಡಬೇಕು ಎಂದು ವೆಂಕಯ್ಯ ನಾಯ್ಡು ಸಲಹೆ ಮಾಡಿದರು. 

ಸಮಾರೋಪ ಸಮಾರಂಭ ಉದ್ದೇಶಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಈ ಐದು ದಿನಗಳ ಕಾಲ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಯಶಸ್ವಿಯಾಗಿ ನಡೆದಿದೆ. ರೈತರಿಗೆ ವಿಜ್ಞಾನದ ಕುರಿತು ಸಾಕಷ್ಟು ಮಾಹಿತಿ ಲಭ್ಯವಾಗಿದ್ದು, ವಿಜ್ಞಾನದ ಹಲವು ಶಾಖೆಗಳ ಪರಿಚಯವಾಗಿದೆ ಎಂದರು.  

ವಿಜ್ಞಾನ ನಿಂತ ನೀರಾಗದೇ ನಿರಂತರ ಚಲನಶೀಲವಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೇರೆಬೇರೆಯಾಗಿ ನೋಡಲು ಸಾಧ್ಯವೇ ಇಲ್ಲ. ವಿಜ್ಞಾನ ಬೆಳೆದು ತಂತ್ರಜ್ಞಾನವಾಗುತ್ತದೆ. ವಿಜ್ಞಾನಿಗಳು ಮಾರ್ಗದರ್ಶಕರು ಪರಿಣಿತರ ಸೇವೆ ಸಮಾಜಕ್ಕೆ ಅಗತ್ಯ. ಸಾಧನೆಗೆ ವಿಜ್ಞಾನ ಅವಶ್ಯಕ. ವಿಜ್ಞಾನದ ಬೆಳವಣಿಗೆಯಿಂದ ಸಮಾಜದ ಜ್ಞಾನವೂ ವೃದ್ಧಿಸುತ್ತದೆ ಎಂದು ಸಲಹೆ ನೀಡಿದರು.

ಭಾರತೀಯ ವಿಜ್ಞಾನ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದ್ದು, ಕೃಷಿ ವಿಶ್ವವಿದ್ಯಾಲಯಕ್ಕೆ ಈ ವಿಜ್ಞಾನ ಕಾಂಗ್ರೆಸ್‌ನಿಂದ ಹೊಸ‌ ರೂಪ ಬಂದಿದೆ. ಕುಲಪತಿ ರಾಜೇಂದ್ರ ಪ್ರಸಾದ್ ಹಾಗೂ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಅಧ್ಯಕ್ಷ ಪ್ರೊ.ರಂಗಪ್ಪ ಶ್ರಮವಹಿಸಿ ಈ ಸಮ್ಮೇಳನ ಯಶಸ್ವಿಗೊಳಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ 2021ರ ಐಎಸ್‌ಸಿಎ ಕೊಲ್ಕತ್ತಾ ಚುನಾಯಿತ ಅಧ್ಯಕ್ಷೆ ವಿಜಯಲಕ್ಷ್ಮೀ ಸಕ್ಸೇನಾ ಅವರಿಗೆ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಜ್ಯೋತಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ವಿಜ್ಞಾನ ಕ್ಷೇತ್ರ ವಿವಿಧ ವಿಭಾಗಗಳಲ್ಲಿ ಸಾಧನೆಗೈದವರಿಗೆ ಸಿ.ವಿ.ರಾಮನ್ ಪ್ರಶಸ್ತಿ, ಆಶಿಷ್ ಕುಮಾರ್ ಮುಖ್ಯೋಪಾಧ್ಯಾಯ, ಟಿ.ಸಿ.ರಾವ್-ಎ.ಕೆ.ತ್ಯಾಗಿ ಮುಂಬೈ, ಜೆ.ಸಿ.ಬೋಸ್ ಮೆಮೋರಿಯಬಲ್ ಅವಾರ್ಡ್- ಸತ್ಯೇಂದ್ರಪಾಲ್ ಕಟರ್‌ಕರ್ ಸೇರಿ ಹಲವ ಯುವ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com