ಭಾರತ ಬಂದ್‌ಗೆ ನೀರಸ ಪ್ರತಿಕ್ರಿಯೆ; ಎಲ್ಲೆಡೆ ಕಾರ್ಮಿಕರಿಂದ ಪ್ರತಿಭಟನೆ

ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ರಾಜ್ಯದಲ್ಲಿ ಕಾರ್ಮಿಕ ಸಂಘಟನೆಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಆದರೂ ರಾಜ್ಯದ ಬಹುತೇಕ ಕಡೆ ಜನಜೀವನ ಎಂದಿನಂತಿದ್ದು, ಬಂದ್‌ಗೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಭಾರತ್ ಬಂದ್
ಭಾರತ್ ಬಂದ್

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ರಾಜ್ಯದಲ್ಲಿ ಕಾರ್ಮಿಕ ಸಂಘಟನೆಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಆದರೂ ರಾಜ್ಯದ ಬಹುತೇಕ ಕಡೆ ಜನಜೀವನ ಎಂದಿನಂತಿದ್ದು, ಬಂದ್‌ಗೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ರಾಜ್ಯಾದ್ಯಂತ ಕಾರ್ಮಿಕ ಸಂಘಟನೆಗಳು ವಿವಿಧ ಸಂಘಟನೆಗಳೊಂದಿಗೆ ಸೇರಿ ಜಾಥಾ, ಪ್ರತಿಭಟನೆಗಳನ್ನು ನಡೆಸುತ್ತಿವೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳು ಸಂಚರಿಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ. ಇನ್ನು ಬಂದ್ ಎಫೆಕ್ಟ್ ಬೆಂಗಳೂರಿನ ಕೆಆರ್ ಮಾರುಕಟ್ಟೆ ವಹಿವಾಟಿನ ಮೇಲೂ ನಕಾರಾತ್ಮಕ ಪರಿಣಾಮ ಬೀರಿದ್ದು, ಪ್ರತಿದಿನಕ್ಕಿಂತ ಕಡಿಮೆ ಮಟ್ಟದಲ್ಲಿ ಹೂವು, ಹಣ್ಣು, ತರಕಾರಿಗಳ ಮಾರಾಟವಾಗುತ್ತಿದೆ.

ಬೆಳ್ಳಂಬೆಳಗ್ಗೆ 3 ಗಂಟೆಗೆ ರಾಜ್ಯದ ವಿವಿಧ ಭಾಗಗಳಿಂದ ಬಂದ ರೈತರು ಹಾಗೂ ವ್ಯಾಪಾರಿಗಳು ವ್ಯಾಪಾರ ಆರಂಭಿಸಿದ್ದಾರೆ. ಆದರೇ ಗ್ರಾಹಕರು ಬರುತ್ತಿಲ್ಲ, ಬೋಣಿಯೇ ಆಗಿಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ಉಂಟಾಯಿತು. ಅಲ್ಲದೆ ಉಳಿದಿರುವ ಹೂವು ಮಾರಾಟ ಮಾಡಬೇಕು ಇಲ್ಲವೆಂದರೆ ನಾಳೆಗೆ ಇಡಬೇಕಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಭಾರತ ಬಂದ್‍ಗೆ ಕೆ.ಆರ್ ಮಾರ್ಕೆಟ್‍ನಲ್ಲಿ ಕರುನಾಡ ಸಂಘಟನೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿತ್ತು. ಮಾರ್ಕೆಟ್‍ಗೆ ಬರುವ ಜನರಿಗೆ, ವಾಹನ ಸವಾರರಿಗೆ, ಗ್ರಾಹಕರಿಗೆ, ವ್ಯಾಪಾರಿಗಳಿಗೆ ಗುಲಾಬಿ ಹೂ ಕೊಟ್ಟು ಸ್ವಾಗತ ನೀಡಿದರು.  ಬಂದ್ ಜನವಿರೋಧಿ ಸಾವಿರಾರು ಕೋಟಿ ನಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸದ್ಯ ಕೆ.ಆರ್ ಮಾರ್ಕೆಟ್ ಜನಗಳಿಲ್ಲದೇ ಬಿಕೋ ಎನ್ನುತ್ತಿದೆ. ಇನ್ನು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೂ ಭಾರತ್ ಬಂದ್ ಬಿಸಿ ಮುಟ್ಟಿದ್ದು, ತರಕಾರಿ ಸಗಟು ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಸರಕು ಸಾಗಣೆ ಲಾರಿಗಳು ನಿಂತ ಸ್ಥಳದಲ್ಲೇ ನಿಂತಿದ್ದು, ಕೆಲಸವಿಲ್ಲದೇ ಕೂಲಿ ಕಾರ್ಮಿಕರು ಲಾರಿಗಳ ಮೇಲೆಯೇ ನಿದ್ರೆಗೆ ಶರಣಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬಿಎಂಟಿಸಿಗೆ ಪ್ರಯಾಣಿಕರ ಕೊರತೆ
ಇನ್ನು ಬಂದ್ ಬಿಸಿ ಬಿಎಂಟಿಸಿಗೂ ತಟ್ಟಿದ್ದು, ಬಿಎಂಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಎಂದಿನಂತೆ ಇಂದೂ ಕೂಡ ಬಿಎಂಸಿಟಿ ಬಸ್ ಸಂಚಾರ ಸಾಗಿದೆಯಾದರೂ ಬಸ್ ಗಳಲ್ಲಿ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. ನಿತ್ಯ ತುಂಬಿ ತುಳುಕುತ್ತಿದ್ದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿತ್ತು. ಅಲ್ಲದೆ ಬಸ್ ಗಳೂ ಕೂಡ ಖಾಲಿ ಹೊಡೆಯುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com