ಭಾರತ್ ಬಂದ್ ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ; ರಸ್ತೆಗಿಳಿದ ಕಾರ್ಮಿಕರಿಂದ ಪ್ರತಿಭಟನೆ

ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ಕರೆ ನೀಡಿದ್ದ ಭಾರತ್ ಬಂದ್ ಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.  
ಭಾರತ್ ಬಂದ್ ನಡೆಸಿದ ಕಾರ್ಮಿಕರು
ಭಾರತ್ ಬಂದ್ ನಡೆಸಿದ ಕಾರ್ಮಿಕರು

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ಕರೆ ನೀಡಿದ್ದ ಭಾರತ್ ಬಂದ್ ಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಬೆಂಗಳೂರಿನಲ್ಲಿ ಸಿಪಿಐಎಂ, ಸಿಪಿಐ, ಸಿಐಟಿ ಸೇರಿ ರಾಜ್ಯದ ಹಲವು ಕಾರ್ಮಿಕ ಸಂಘಟನೆಗಳು ಒಗ್ಗೂಡಿ ನಗರದ ಫ್ರೀಡಂ ಪಾರ್ಕ್ ಎದುರಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.

ಈ ಪ್ರತಿಭಟನೆಯಲ್ಲಿ 2000ಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದು, ಅಂಗನವಾಡಿ ಕಾರ್ಯಕರ್ತೆಯರು ಭಾಗಿಯಾಗಿದ್ದರು. ಫ್ರೀಡಂ ಪಾರ್ಕ್ ರಸ್ತೆ ಕೆಂಪುಮಯವಾಗಿತ್ತು.

ದೇಶಾದ್ಯಂತ ಎಲ್ಲಾ ಕಾರ್ಮಿಕರಿಗೂ 21,000 ಕನಿಷ್ಠ ಕೂಲಿ ನೀಡಬೇಕು. ಎಲ್ಲಾ ಕಾರ್ಮಿಕರಿಗೂ ಪಿಂಚಣಿ ಸೌಲಭ್ಯ ಒದಗಿಸಬೇಕು. ರಾಷ್ಟ್ರೀಯ ಪಿಂಚಣಿ ಯೋಜನೆ ಮೋಸದ್ದಾಗಿದ್ದು, ಹಿಂದಿನ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು. ಅಲ್ಲದೇ, ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಸಾರ್ವತ್ರಿಕ ವಿತರಣಾ ವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದಬೇಕು ಹಾಗೂ ನೂತನ ಉದ್ಯೋಗಗಳ ಸೃಷ್ಟಿ ಮತ್ತು ಖಾಲಿಯಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಗುತ್ತಿಗೆ ಉದ್ಯೋಗಿ ಮತ್ತು ಕಾರ್ಮಿಕರಿಗೆ ಖಾತರಿಯಾದ ನಿರಂತರ ಉದ್ಯೋಗ ಸಿಗಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕೇಂದ್ರ ಬಜೆಟ್ ನಲ್ಲಿ ಮನ್ರೇಗಾ ಮತ್ತು ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಕಾರ್ಮಿಕ ಕಾನೂನುಗಳ ಯೋಜಿತ ಕೋಡಿಂಗ್ ಅನ್ನು ಈ ಕೂಡಲೇ ಸ್ಥಗಿತವಾಗಬೇಕು. ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣ ನಿಲ್ಲಿಸಬೇಕು. ಅಲ್ಲದೇ, ರೈಲ್ವೆ, ರಕ್ಷಣಾ ವಲಯ, ಕಲ್ಲಿದ್ದಲು ಮತ್ತು ಇನ್ನಿತರ ಸಾರ್ವಜನಿಕ ಉದ್ಯಮಗಳಲ್ಲಿ ಶೇಕಡಾ 100 ವಿದೇಶಿ ಬಂಡವಾಳ ಹೂಡಿಕೆ ಸ್ಥಗಿತಗೊಳಿಸಬೇಕು. ಎಲ್ಲಾ ಬ್ಯಾಂಕ್ ವಿಲೀನಗಳನ್ನು ಸ್ಥಗಿತಗೊಳಿಸಲು ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪ್ರತಿಭಟನಕಾರರು ಒತ್ತಾಯಿಸಿದರು.

ಗಾರ್ಮೆಂಟ್ಸ್ ಲೇಬರ್ ಒಕ್ಕೂಟದ ಅಧ್ಯಕ್ಷೆ ರುಕ್ಮಿಣಿ ಸುದ್ದಿಗಾರರೊಂದಿಗೆ ಮಾತನಾಡಿ, ಗಾರ್ಮೆಂಟ್ಸ್ ಗಳಲ್ಲಿ ಮಹಿಳೆಯರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಅಲ್ಲದೇ, ಯುವತಿಯರಿಗೆ ಲೈಂಗಿಕ‌ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.  ಮ್ಯಾನೇಜರ್ ಗಳಿಗೆ ಸಹಕಾರ ನೀಡದಿದ್ದರೇ, ಕೆಲಸದಿಂದ ವಜಾಗೊಳಿಸಲಾಗುತ್ತದೆ. ಈ ಮಧ್ಯೆ 44 ಕಾನೂನುಗಳನ್ನು 4 ಕ್ಕೆ ಇಳಿಸಲಾಗಿದೆ‌ ಎಂದು ಕೇಂದ್ರ ಸರ್ಕಾರದ ವಿರುದ್ಧ ಅವರು ಹರಿಹಾಯ್ದರು. 

ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಶನ್ ಟೌನ್ ಹಾಲ್ ಬಳಿ ಇರುವ ಕೆನರಾ ಬ್ಯಾಂಕ್ ಆವರಣದಲ್ಲಿ ಪ್ರತಿಭಟನೆ ನಡೆಸಿತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್, ವಿಮೆ, ರಕ್ಷಣೆ, ಕಲ್ಲಿದ್ದಲು ಸೇರಿ ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಪ್ರತಿಭಟನಕಾರರು ವಿರೋಧ ವ್ಯಕ್ತಪಡಿಸಿದರು.

ಪೊಲೀಸರ ಆದೇಶವನ್ನು ಮೀರಿ ಪ್ರತಿಭಟನೆಗೆ ಮುಂದಾದ ಕನ್ನಡ ಪರ ಸಂಘಟನೆಯ ಅಧ್ಯಕ್ಷೆ ವಾಟಾಳ್​ ನಾಗರಾಜ್​ ಮೆಜೆಸ್ಟಿಕ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದರು. ಅಲ್ಲದೇ ಬಸ್​ ನಿಲ್ದಾಣದಲ್ಲಿ ಬಸ್ಸು ಸಂಚಾರಕ್ಕೆ ತಡೆಯೊಡ್ಡಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದರು. ನಗರದಾದ್ಯಂತ 11 ಡಿಸಿಪಿ, 23 ಎಸಿಪಿ,111 ಇನ್ಸ್​​ಪೆಕ್ಟರ್​​ಗಳು, 316 ಪಿಎಸ್ಐ, 476 ಎಎಸ್ಐಗಳು, 4,547 ಕಾನ್ಸ್​​ಟೇಬಲ್​​ಗಳು, 82 ಕೆಎಸ್ಆರ್​​​ಪಿ ಹಾಗೂ ಸಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಅಲ್ಲದೇ, ಟೌನ್ ಹಾಲ್ ಬಳಿ 2,000 ಪೊಲೀಸ್ ಸಿಬ್ಬಂದಿ ನಿಯೋಜನೆಗೊಳಿಸಲಾಗಿತ್ತು. 

ಮಡಿಕೇರಿಯಲ್ಲಿ ಕಲ್ಲು ತೂರಾಟ

ಡಿಕೇರಿ ನಗರದ ಹೊರವಲಯದ ಚೈನ್ ಗೇಟ್ ಬಳಿ ಸರ್ಕಾರಿ ಬಸ್ಸಿಗೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆಯೂ ನಡೆಯಿತು.
ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ಸಿಗೆ ಕಲ್ಲು ತೂರಿದ ಹಿನ್ನೆಲೆಯಲ್ಲಿ ಬಸ್ಸಿನ ಮುಂಭಾಗದ ಗ್ಲಾಸ್‌ಗೆ ಸಣ್ಣಪುಟ್ಟ ಹಾನಿಯಾಗಿತ್ತು. ಆದರೆ, ಅದೃಷ್ಟವಶಾತ್ ಬಸ್ಸಿನಲ್ಲಿ ಯಾರೂ ಇರಲಿಲ್ಲ. 

ಮಂಡ್ಯ ಜಿಲ್ಲೆಯ ಪಾಂಡವಪುರ ವಿಭಾಗಕ್ಕೆ ಸೇರಿದ ಸರ್ಕಾರಿ ಬಸ್ಸು ಇದಾಗಿತ್ತು ಎಂದು ತಿಳಿದು ಬಂದಿದ್ದು, ಬಸ್ಸು ಚಾಲಕ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಬಳ್ಳಾರಿಯಲ್ಲಿ ಬೆಂಬಲ

ಭಾರತ್ ಬಂದ್​ಗೆ ಬಳ್ಳಾರಿಯಲ್ಲಿ ಬೆಂಬಲ ವ್ಯಕ್ತಪಡಿಸಿ, ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಿಐಟಿಯು, ಎಐಡಿಎಸ್​ಯು, ಸಿಪಿಐ, ಎಐವೈಎಫ್​​ನ ನೂರಾರು ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಮೋತಿವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್​ ಮುಖಂಡ ವಿ.ಎಸ್​.ಉಗ್ರಪ್ಪ ಪಾಲ್ಗೊಂಡು ಕಾರ್ಮಿಕ ಸಂಘಟನೆಗಳಿಗೆ ಸಾಥ್​ ನೀಡಿ, ಕೇಂದ್ರ ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ಹೊರಹಾಕಿದರು. ಟಾಟಾ ಮಾರ್ಕೊಪೊಲೊ ಕಾರ್ಮಿಕರಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಟಿಎಂಕೆಕೆಯು ಸಂಘಟನೆಯ ನೇತೃತ್ವದಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ‌ ಪ್ರತಿಭಟನಾಕಾರರು ಆಗ್ರಹಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರಿನಲ್ಲಿ‌ ಮಿಶ್ರ ಪ್ರತಿಕ್ರಿಯೆ

ರಾಯಚೂರಿನಲ್ಲಿ‌ ಭಾರತ್ ಬಂದ್ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲೆಯ ಸಿಂಧನೂರು, ದೇವದುರ್ಗದ ಜಾಲಹಳ್ಳಿಯಲ್ಲಿ ಅಂಗಡಿ ಬಂದ್ ಮಾಡಿ ಮುಷ್ಕರಕ್ಕೆ ಜನ ಬೆಂಬಲ ಸೂಚಿಸಿದರು. 

ರಾಯಚೂರಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ನಗರದ ರೈಲ್ವೆ ನಿಲ್ದಾಣ ವೃತ್ತದಲ್ಲಿ ರಸ್ತಾ ರೋಕೋ ನಡೆಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿ, ವಿವಿಧ ಬ್ಯಾಂಕ್ ಗಳ ಸಿಬ್ಬಂದಿ ಬ್ಯಾಂಕ್ ಗಳ ಮುಂದೆ ಪ್ರತಿಭಟನೆ ನಡೆಸಿದರು.  ಬಳಿಕ ಅಂಬೇಡ್ಕರ್ ವೃತ್ತದಲ್ಲಿ 10 ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಸಮಾವೇಶ ನಡೆಸಿದವು.ನಂತರ ಹೋರಾಟಗಾರರು ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಇನ್ನು, ಸಾರ್ವತ್ರಿಕ ಮುಷ್ಕರಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಎಂದಿನಂತೆ ಬಸ್ಸು ಸಂಚಾರ ಮಾಡಿದವು. ನಗರದ ಮಾಲಾದೇವಿ ಮೈದಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಪ್ರಮುಖ ಬೀದಿಗಳನ್ನು ಹಾಯ್ದು, ಜಿಲ್ಲಾಧಿಕಾರಿ ಕಚೇರಿ ತಲುಪಿತು. ಪ್ರತಿಭಟನೆಯಲ್ಲಿ ಸಿಐಟಿಯು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. 

ಹುಬ್ಬಳ್ಳಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸುಮಾರು 10 ಕ್ಕೂ ಹೆಚ್ಚು ಸಂಘಟನೆಗಳು ನಗರದಲ್ಲಿ ಬೃಹತ್ ಪ್ರತಿಭಟನೆ‌ ನಡೆಸಿದವು.

ನಗರದ ‌ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೂ ಪ್ರತಿಭಟನಾ ‌ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಏಷ್ಯಾದಲ್ಲೇ ಅತಿ ದೊಡ್ಡದಾದ ಹುಬ್ಬಳ್ಳಿಯ ಎಪಿಎಂಸಿಗೆ ಬಂದ್‌ನ ಬಿಸಿ ತಟ್ಟಿತು. ಕೂಲಿಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾದ ಪರಿಣಾಮ ಎಂಪಿಎಂಸಿ ಸಂಪೂರ್ಣ ಸ್ಥಗಿತಗೊಂಡಿತ್ತು. ಭಾರತ್​​ ಬಂದ್ ಹಿನ್ನೆಲೆಯಲ್ಲಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿರಲಿಲ್ಲ. ಅಲ್ಲದೇ ಹಮಾಲರ ಸಂಘ ನಿನ್ನೆ ಬಂದ್​ಗೆ ಬೆಂಬಲ ಘೋಷಿಸಿದ ಪರಿಣಾಮ ವ್ಯಾಪಾರ ವಹಿವಾಟು ಸ್ಥಬ್ತಗೊಂಡಿತ್ತು. ಎಂಪಿಎಂಸಿಯಲ್ಲಿನ ಎಲ್ಲಾ ಅಂಗಡಿ-ಮುಂಗಟ್ಟುಗಳು ಸ್ಥಗಿತವಾಗಿತ್ತು. 

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಮಿಕ ಸಂಘಟನೆ ಮುಖಂಡ ದೇವಾನಂದ ಜಗಾಪೂರಿ, ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕಿದ್ದ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಜಾರಿಗೊಳಿಸಿ ಅವರ ಬದುಕಿನ ಜೊತೆಗೆ ಆಟವಾಡುತ್ತಿದೆ. ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿಪಡಿಸಬೇಕು. ಬ್ಯಾಂಕ್ ಖಾಸಗೀಕರಣ ಹಾಗೂ ವಿಲೀನಗೊಳಿಸುವುದನ್ನು ಕೈಬಿಡಬೇಕು. ಅಸಂಘಟಿತ ಕಾರ್ಮಿಕರಿಗೆ ಪ್ರತಿ ತಿಂಗಳು 21 ಸಾವಿರ ರೂ. ಸಂಬಳ ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬ್ಯಾಂಕ್, ಎಲ್ ಐಸಿ ನೌಕರರ ಅಸೋಸಿಯೇಷನ್, ಸಿಐಟಿಯು, ಸಿಪಿಎಂ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. 

ಇನ್ನು ಉಡುಪಿ, ಚಿಕ್ಕಬಳ್ಲಾಪುರ, ಕೋಲಾರ  ಕಲಬುರಗಿ, ಬೀದರ್, ಯಾದಿಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರದಲ್ಲಿ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 50ಕ್ಕೂ ಹೆಚ್ಚು ಮಂದಿ ಪ್ರತಿಭಟನಕಾರರನ್ನು ಚಿಕ್ಕಬಳ್ಳಾಪುರ ಪೊಲೀಸರು ವಶಕ್ಕೆ ಪಡೆದಿದರು.   ಸಿಪಿಐಎಂ ಮುಖಂಡರು ಹಾಗೂ ಕಾರ್ಯಕರ್ತರು ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ಶಿಡ್ಲಘಟ್ಟ ವೃತ್ತದ ರಸ್ತೆಯಲ್ಲಿ ಕುಳಿತು ಪ್ರತಿಭಟನಾ ಧರಣಿ ಮಾಡಿದರು.ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಯಲ್ಲೇ ಕುಳಿತು ಪ್ರತಿಭಟನಾ ಧರಣಿ ನಡೆಸಿದರು. ಈ ಹಿನ್ನಲೆಯಲ್ಲಿ‌ ಗೌರಿಬಿದನೂರು ಮಾರ್ಗದ ರಸ್ತೆ ಬಂದ್ ಆದ ಪರಿಣಾಮ ಜಿಲ್ಲಾಸ್ಪತ್ರೆಗೆ ಬಂದು ಹೋಗುವ ಅಂಬುಲೆನ್ಸ್ ಗಳ ಒಡಾಟಕ್ಕೆ ಅಡ್ಡಿಯಾಗಿತ್ತು.ಈ ಸಂದರ್ಭದಲ್ಲಿ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್‍ಪಿ ಅಭಿನವ್ ಖರೆ ಪ್ರತಿಭಟನೆ ವಾಪಸ್ಸು ಪಡೆಯುವಂತೆ ಮನವಿ ಮಾಡಿಕೊಂಡರು. ಈ ವೇಳೆ ಅಂಬುಲೆನ್ಸ್ ಸಹ ಅದೇ ರಸ್ತೆಯಲ್ಲಿ ಬಂದ ಪರಿಣಾಮ ಪ್ರತಿಭಟನಕಾರರನ್ನು ಚದುರಿಸಿದ ಪೊಲೀಸರು ಅವರನ್ನ ವಶಕ್ಕೆ ಪಡೆದುಕೊಂಡರು.

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು, ವಾಹನಗಳ ಸಂಚಾರ ಎಂದಿನಂತೆ ಸಾಗಿದ್ದು, ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನೊಂದೆಡೆ ಜಿಲ್ಲೆಯ ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಸೂರಿನಲ್ಲಿಯೂ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com