ಬಾಗಲಕೋಟೆ: ಮಾರುಕಟ್ಟೆಯಲ್ಲಿ ಲಿಂಬೆಹಣ್ಣಿನ ಬೆಲೆಯಲ್ಲಿ ಭಾರಿ ಕುಸಿತ

ಬರೊಬ್ಬರಿ ಒಂದುವರೆ ತಿಂಗಳು ಹಿಂದಿನ ಮಾತು, ಮಾರುಕಟ್ಟೆಯಲ್ಲಿ ಸಾಂಬಾರು ಪದಾರ್ಥಗಳ ಬೆಲೆ ಕೈಗೆಟಕುವ ಸ್ಥಿತಿಯಲ್ಲಿ ಇರಲಿಲ್ಲ. ಈರುಳ್ಳಿ, ಬೆಳ್ಳುಳ್ಳಿ, ಲಿಂಬೆಹಣ್ಣು, ಕೋತಂಬರಿ, ಕರಿಬೇವಿನ ದರ ಕೇಳಿದರೆ ಗ್ರಾಹಕರು ದೂರ ಸರಿದು ಹೋಗುತ್ತಿದ್ದರು. 
ಲಿಂಬೆಹಣ್ಣು
ಲಿಂಬೆಹಣ್ಣು

ಬಾಗಲಕೋಟೆ: ಬರೊಬ್ಬರಿ ಒಂದುವರೆ ತಿಂಗಳು ಹಿಂದಿನ ಮಾತು, ಮಾರುಕಟ್ಟೆಯಲ್ಲಿ ಸಾಂಬಾರು ಪದಾರ್ಥಗಳ ಬೆಲೆ ಕೈಗೆಟಕುವ ಸ್ಥಿತಿಯಲ್ಲಿ ಇರಲಿಲ್ಲ. ಈರುಳ್ಳಿ, ಬೆಳ್ಳುಳ್ಳಿ, ಲಿಂಬೆಹಣ್ಣು, ಕೋತಂಬರಿ, ಕರಿಬೇವಿನ ದರ ಕೇಳಿದರೆ ಗ್ರಾಹಕರು ದೂರ ಸರಿದು ಹೋಗುತ್ತಿದ್ದರು. 

ಈರುಳ್ಳಿ ೧೫೦ ರೂ.ಗೆ ಕೆಜಿ, ಬೆಳ್ಳುಳ್ಳಿ ೨೪೦ ರೂ.ಗೆ ಒಂದು ಕೆಜಿ ಹಾಗೆ ಲಿಂಬೆಹಣ್ಣಿನ ಬೆಲೆ ಕೂಡ ೨೦ ರೂ.ಗೆ ಮೂರು ಲಿಂಬೆಹಣ್ಣು ಮಾರಾಟವಾಗುತ್ತಿದ್ದವು. ಇದೀಗ ಪರಿಸ್ಥಿತಿ ಸಾಕಷ್ಟು ಬದಲಾಗುತ್ತಿದೆ. 

ರೂಪಾಯಿಗೆ ಒಂದು ಲಿಂಬೆ ಮಾರಾಟವಾಗುತ್ತಿದ್ದರೆ, ಈರುಳ್ಳಿ ಕೆಜಿಗೆ ೫೦ ರೂ.ಗಳಿಂದ ೯೦ ರೂ.ಗೆ ಕೆಜಿಗೆ ಮಾರಾಟವಾಗುತ್ತಿದೆ. ಆದರೆ ಬೆಳ್ಳುಳ್ಳಿ ಮಾತ್ರ ೨೫೦ ರೂಪಾಯಿಗೆ ಕೆಜಿಗಿಂತ ಕಡಿಮೆ ಆಗಿಲ್ಲ. ೧೦ ರೂಪಾಯಿಗೆ ಕೋತಂಬರಿ, ಕರಿಬೇವು ಸಿಕ್ಕುತ್ತಿರಲಿಲ್ಲ. ೨೦ ರೂ. ಕೊಟ್ಟಾಗ ಒಂದೆರಡು ಕಡ್ಡಿ ಸಿಕ್ಕುತ್ತಿತ್ತು. ಈಗ ದೊಡ್ಡ ದೊಡ್ಡ ಕಟ್ಟುಗಳು ಸಿಕ್ಕುತ್ತಿವೆ.

ಸಾಂಬಾರು ಪದಾರ್ಥಗಳ ಬೆಲೆಯಲ್ಲಿ ಆಗಿರುವ ವ್ಯತ್ಯಾಸದಿಂದ ಗ್ರಾಹಕರು ಸಂತಸದಿಂದ ಖರೀದಿಗೆ ಮುಂದಾಗುತ್ತಿದ್ದಾರೆ. ತರಕಾರಿಗಳ ದರಗಳೂ ಸಾಕಷ್ಟು ಇಳಿಮುಖಗೊಂಡಿವೆ. ೨೦ ರಿಂದ ೩೦ ರೂ.ಗೆ ಮಾರಾಟವಾಗುತ್ತಿದ್ದ ಮೆಂತ್ಯಪಲ್ಲೆ ಸದ್ಯ ೫ ರಿಂದ ೧೦ ರೂ.ಗೆ ಒಂದು ಕಟ್ಟ ಮಾರಾಟವಾಗುತ್ತಿದೆ.

ಮಾರುಕಟ್ಟೆಯಲ್ಲಿ ಬಹುತೇಕ ದರಗಳಲ್ಲಿ ವ್ಯತ್ಯಾಸ ಕಂಡು ಬಂದಿದೆಯಾದರೂ ಅಷ್ಟಾಗಿ ಪರಿಣಾಮ ಬೀರುತ್ತಿಲ್ಲ. ಲಿಂಬೆಹಣ್ಣಿನ ಬೆಲೆಯಲ್ಲಿ ಆಗಿರುವ ವ್ಯತ್ಯಾಸ ಮಾತ್ರ ಲಿಂಬೆ ಬೆಳೆಗಾರರನ್ನು ಕಂಗೆಡಿಸಿದೆ. ಮಾರುಕಟ್ಟೆಗೆ ನಿರೀಕ್ಷೆಗೂ ಮೀರಿ ಲಿಂಬೆ ಹರಿದು ಬರುತ್ತಿದೆ. ಈ ಹಿಂದೆ ಸ್ಥಳೀಯ ಲಿಂಬೆ ಬಾರದೇ ಹೋದಾಗ ಮಾರಾಟಗಾರರು ಆಂಧ್ರಪ್ರದೇಶ ಮತ್ತು ತೇಲಂಗಾಣ ರಾಜ್ಯದಿಂದ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದರು. 

ಆಂದ್ರ ಪ್ರದೇಶ ಮತ್ತು ತೇಲಂಗಾಣದಿಂದ ಲಿಂಬೆ ಸ್ಥಳೀಯ ಮಾರುಕಟ್ಟೆಗೆ ಬರಲಾರಂಭಿಸಿದಾಗ ಕ್ರಮೇಣ ದರ ವ್ಯತ್ಯಾಸ ಆರಂಭಗೊಂಡಿತು. ಇದೀಗ ಮಾರುಕಟ್ಟೆಯಲ್ಲಿ ಲಿಂಬೆಹಣ್ಣು ಕೇಳುವವರೆ ಇಲ್ಲದಂತಾಗಿದೆ. ಮಾರುಕಟ್ಟೆಗೆ ಬರುವ ಗ್ರಾಹಕರು ಮನೆ ಬಳಕೆ ಜತೆಗೆ ಉಪ್ಪಿನಕಾಯಿ ಹಾಕಲು ಲಿಂಬೆಯನ್ನು ಹೊಲ್‌ಸೆಲ್ ಖರೀದಿಸುತ್ತಿದ್ದಾರೆ. 

ಲಿಂಬೆ ಮಾರಾಟಗಾರರ ಪ್ರಕಾರ ಜನವರಿ ಕೊನೆವರೆಗೂ ಈ ಪರಿಸ್ಥಿತಿ ಮುಂದುವರಿಯಲಿದೆ. ಬಳಿಕ ಲಿಂಬೆ ದರದಲ್ಲಿ ಸುಧಾರಣೆ ಕಾಣಲಿದೆ ಎನ್ನುವ ಭರವಸೆ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲಿಯವರೆಗೂ ಲಿಂಬೆ ಬೆಳೆಗಾರರು ದರ ವ್ಯತ್ಯಾಸವನ್ನು ಅನಿವಾರ್ಯವಾಗಿ ಸಹಿಸಲೇ ಬೇಕಾಗಿದೆ.

ಒಮ್ಮೆ ಬೇಸಿಗೆ ಆರಂಭಗೊಂಡರೆ ಲಿಂಬೆ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ. ಹಾಗೆ ಇತರ ವಸ್ತುಗಳ ಬೆಲೆಯಲ್ಲೂ ಸ್ಥಿರತೆ ಕಾಣುವ ಸಾಧ್ಯತೆಗಳಿವೆ ಎಂದು ಮಾರಾಟಗಾರರು ಅಭಿಪ್ರಾಯ ಪಡುತ್ತಿದ್ದಾರೆ. ಬೆಲೆಗಳಲ್ಲಿ ಸ್ಥಿರತೆ ಕಂಡು ಬರುವುದರಿಂದ ಮಾರುಕಟ್ಟೆ ಸಮತೋಲಿತವಾಗಿ ನಡೆಯಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಏತನ್ಮಧ್ಯೆ ಮಧ್ಯಪ್ರಾಚ್ಯ ರಾಷ್ಟಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ತೈಲ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬರಲಿದೆ ಎನ್ನುವ ಹೊಸ ಆತಂಕ ಜನಸಾಮಾನ್ಯರನ್ನು ಕಾಡಲಾರಂಭಿಸಿದೆ.

ಇರಾನ್ ಮತ್ತು ಅಮೆರಿಕ ಮಧ್ಯೆ ಉಂಟಾಗಿರುವ ಸಂಘರ್ಷದಿಂದಾಗಿ ಈಗಲೇ ತೈಲ ಬೆಲೆಯಲ್ಲಿ ಏರಿಕೆ ಆರಂಭಗೊಂಡಿದೆ. ಇದು ನೂರರ ಗಡಿಯನ್ನು ತಲುಪಲಿದೆ ಎನ್ನಲಾಗುತ್ತಿದೆ. ಇದರಿಂದ ಸಾರಿಗೆ ದರದಲ್ಲಿ ವ್ಯತ್ಯಾಸಗಳು ಆಗಲಿದ್ದು, ಇದರಿಂದ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಮುಖಿ ಆಗಿ ಮಾರುಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗುತ್ತಿದೆ.
-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com