ಸೈದ್ಧಾಂತಿಕ  ಭಿನ್ನಾಭಿಪ್ರಾಯ ಸಾಹಿತ್ಯಕ್ಕೆ ಸಲ್ಲದು, ಕನ್ನಡ, ಸಂಸ್ಕೃತಿ ಬಗ್ಗೆ ಸಿ.ಟಿ.ರವಿಗೆ ಗಂಧಗಾಳಿಯೇ ಇಲ್ಲ: ವಿಠ್ಠಲ್ ಹೆಗ್ಡೆ

ಅಕ್ಷರ ಹಬ್ಬವಾಗಬೇಕಿರುವ ಚಿಕ್ಕಮಗಳೂರಿನ ಜಿಲ್ಲಾ ಕನ್ನಡ ಸಾಹಿತ್ಯ  ಸಮ್ಮೇಳನಕ್ಕೆ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಗ್ರಹಣ ಬಡಿದಿದ್ದು, ಅಧ್ಯಕ್ಷರ ಆಯ್ಕೆ  ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ಸಾಹಿತ್ಯ ಪರಿಷತ್ತಿನ ನಡುವೆ ಗುದ್ದಾಟ  ಆರಂಭವಾಗಿದೆ‌. 
ಕಲ್ಕುಳಿ ವಿಠ್ಠಲ ಹೆಗ್ಡೆ
ಕಲ್ಕುಳಿ ವಿಠ್ಠಲ ಹೆಗ್ಡೆ

ಬೆಂಗಳೂರು: ಅಕ್ಷರ ಹಬ್ಬವಾಗಬೇಕಿರುವ ಚಿಕ್ಕಮಗಳೂರಿನ ಜಿಲ್ಲಾ ಕನ್ನಡ ಸಾಹಿತ್ಯ  ಸಮ್ಮೇಳನಕ್ಕೆ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಗ್ರಹಣ ಬಡಿದಿದ್ದು, ಅಧ್ಯಕ್ಷರ ಆಯ್ಕೆ  ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ಸಾಹಿತ್ಯ ಪರಿಷತ್ತಿನ ನಡುವೆ ಗುದ್ದಾಟ  ಆರಂಭವಾಗಿದೆ‌. 

ದತ್ತಪೀಠ ಬಾಬಾ ಬುಡನ್ ಗಿರಿ ವಿವಾದದ ಛಾಯೆ ನಕ್ಸಲ್ ಪೀಡಿತ  ಚಿಕ್ಕಮಗಳೂರಿನ ಸಾಹಿತ್ಯ ಸಂಭ್ರಮದ ಮೇಲೆ ಕರಿನೆರಳಾಗಿದೆ. ಸೂಕ್ಷ್ಮ ಪರಿಸ್ಥಿತಿಯಲ್ಲಿ  ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಚಿಕ್ಕಮಗಳೂರು  ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠಲ್ ಹೆಗ್ಡೆ,  ಕನ್ನಡ ಮತ್ತು  ಸಂಸ್ಕೃತಿಯ ಬಗ್ಗೆ ಗಂಧಗಾಳಿಯೇ ತಿಳಿಯದ ಸಿ.ಟಿ.ರವಿ ಇಲಾಖೆಯ ಸಚಿವರಾಗಿರುವುದೇ ರಾಜ್ಯದ  ದುರದೃಷ್ಟ ಎಂದು ಕುಟುಕಿದ್ದಾರೆ.

ಜಿಲ್ಲಾಡಳಿತದ ವಿರೋಧ ಹಾಗೂ  ಪೊಲೀಸ್ ಇಲಾಖೆಯ ಅಸಹಕಾರದೊಂದಿಗೆ ಜ‌.10 ಮತ್ತು 11 ರಂದು ಜಿಲ್ಲಾ ಕನ್ನಡ ಸಾಹಿತ್ಯ  ಸಮ್ಮೇಳನ ಆಯೋಜನೆಗೊಂಡಿದ್ದು ಸೂಕ್ಷ್ಮ ಜಿಲ್ಲೆಯಲ್ಲಿ ಸಾಹಿತ್ಯವು ಸೂಕ್ಷ್ಮವಾಗಿದೆ.

ಈ ಬಗ್ಗೆ ಕಲ್ಕುಳಿ ವಿಠಲ್ ಹೆಗ್ಡೆ ಯುಎನ್ಐ ಕನ್ನಡ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದು ಹೀಗೆ:

*ನಿಮ್ಮ ಆಯ್ಕೆಗೆ ಸಿ.ಟಿ.ರವಿ ವಿರೋಧ ವ್ಯಕ್ತಪಡಿಸುತ್ತಿರುವುದಾದರೂ ಏಕೆ?

ಸಿ.ಟಿ.ರವಿ  ವಿರೋಧಕ್ಕೆ ಮೂಲಭೂತವಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯವೇ ಕಾರಣ. ಬಾಬಾಬುಡನಗಿರಿ  ಚಳುವಳಿಗೆ ಎದುರಾಗಿ ದತ್ತಪೀಠ ಮಾಡಬೇಕೆಂದು ಆರಂಭಿಸಿದ್ದು ಸಿ.ಟಿ.ರವಿ. ಹೀಗಾಗಿ ನನ್ನ  ಆಯ್ಕೆಗೆ ವಿರೋಧ ವ್ಯಕ್ತಪಡಿಸುತ್ತಿರಬಹುದು. ಇದು ಸಾಹಿತ್ಯಿಕ ಜಾತ್ರೆ. ಸಿ.ಟಿ.ರವಿಗೆ  ಸಾಹಿತ್ಯದ ಬಗ್ಗೆ ಗೊತ್ತಿಲ್ಲ.

*ಸೈದ್ಧಾಂತಿಕ ಭಿನ್ನಾಭಿಪ್ರಾಯ ಸಾಹಿತ್ಯವನ್ನು ಪ್ರವೇಶಿಸಿದೆಯೇ?

ಕನ್ನಡ  ಸಾಹಿತ್ಯ ಎನ್ನುವುದು ಎಡ-ಬಲವನ್ನೂ ಮೀರಿದ್ದು. ದೋಹಾತ್ತ ಪರಂಪರೆಯೇ ಕನ್ನಡ ಪರಂಪರೆ. ಅದು  ಪಂಪನಿಂದ ಹಿಡಿದು ಕುವೆಂಪು ಕಾರಂತರವರೆಗೆ ಕನ್ನಡ ಸಾಹಿತ್ಯ ಎಲ್ಲವನ್ನೂ  ಮೀರಿತ್ತು. ಸಾಹಿತ್ಯ ಸಮ್ಮೇಳನ ಎನ್ನುವುದು ಸಾಹಿತ್ಯಿಕ ಜಾತ್ರೆ. ಸಾಹಿತ್ಯ ಮತ್ತು  ಸಂಸ್ಕೃತಿ ಬಗ್ಗೆ ಸಿ.ಟಿ.ರವಿಗೆ ಅರಿವೇ ಇಲ್ಲ. ಇವರಿಗೆ ಸಾಹಿತ್ಯವೂ  ಗೊತ್ತಿಲ್ಲ. ಸಾಹಿತ್ಯದ ಗಂಧಗಾಳಿಯೇ ಗೊತ್ತಿದ್ದವರು ಯಾರೂ ಈ ರೀತಿ  ನಡೆದುಕೊಳ್ಳುವುದಿಲ್ಲ.


ಸಿ‌.ಟಿ.ರವಿ ಅಂತವರಿಗೆ ಕನ್ನಡ ಮತ್ತು  ಸಂಸ್ಕೃತಿ ಸಚಿವ ಸ್ಥಾನ ಕೊಟ್ಟಿರುವುದೇ ದೊಡ್ಡ ಸಮಸ್ಯೆ. ಸಿ.ಟಿ.ರವಿ ಖಾತೆ ಅಡಿಯಲ್ಲಿ  ಚಿಕ್ಕಮಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹಾಗೂ ಚಿಕ್ಕಮಗಳೂರಿನ  ಸಮ್ಮೇಳನಕ್ಕೆ ನಾನು ಸಿ.ಟಿ.ರವಿಗೆ ಎದುರಾಗಿ ಅಧ್ಯಕ್ಷನಾಗಿರುವುದು ಮತ್ತೊಂದು  ಸಮಸ್ಯೆ. ಪೂರ್ವಾಗ್ರಹ, ವೈಯಕ್ತಿಕ ದ್ವೇಷ‌‌, ಜಾತಿ ಕಾರಣಕ್ಕಾಗಿ ವಿರೋಧ  ವ್ಯಕ್ತವಾಗುತ್ತಿದೆ. ಮುಖ್ಯವಾಗಿ ಬ್ರಾಹ್ಮಣ್ಯೇತರರು ಅಧ್ಯಕ್ಷರಾಗಬಾರದು ಎಂಬುದು ಇವರ  ಉದ್ದೇಶ. 2006ರಲ್ಲಿ ಶೃಂಗೇರಿಯಲ್ಲಿ ಪ್ರಥಮ ಜಿಲ್ಲಾ ಸಮ್ಮೇಳನವಾದಾಗ ಬ್ರಾಹ್ಮಣರಲ್ಲದ  ಪುಟ್ಟಯ್ಯ ಅವರ ಆಯ್ಕೆಗೆ ಸಾಹಿತ್ಯ ಪರಿಷತ್ತಿನಲ್ಲಿರುವ ಬ್ರಾಹ್ಮಣರೆಲ್ಲರೂ ವಿರೋಧ  ವ್ಯಕ್ತಪಡಿಸಿದ್ದರು.

*ನಕ್ಸಲ್ ಬೆಂಬಲಿಗರೆಂಬ ಆರೋಪಕ್ಕೆ ಏನನ್ನುತ್ತೀರಾ?

ಎಂ.ಪಿ.ಪ್ರಕಾಶ್  ಅವರು ಗೃಹ ಸಚಿವರಾಗಿದ್ದಾಗ ಗೃಹ ಇಲಾಖೆ ನಕ್ಸಲ್ ಪಟ್ಟಿ ಬಿಟ್ಟಿತ್ತು. ಆ ಪಟ್ಟಿ ಜೀವಂತವೇ  ಇಲ್ಲ. ಅದರಲ್ಲಿ ರಾಜೇಂದ್ರ ಶೆಟ್ಟಿ, ಕಡಿದಾಳ್ ಶಾಮಣ್ಣ ಸೇರಿದಂತೆ ಬುದ್ಧಿಜೀವಿಗಳ  ಪ್ರಗತಿಪರರ ಹೆಸರೂ ಇತ್ತು. ಪಟ್ಟಿ ಬಿಡುಗಡೆಯಾದ ಮರುದಿನವೇ ಸರ್ಕಾರ ಅದನ್ನು ವಾಪಸು ಪಡೆದಿತ್ತು.


ಆ  ಪಟ್ಟಿ ಹಿಡಿದುಕೊಂಡು ನನ್ನ ಮೇಲೆ ಸುಖಾಸುಮ್ಮನೆ ಆಧಾರರಹಿತ ಆರೋಪ ಮಾಡಿದ್ದರು. ನನ್ನ  ವಿರುದ್ಧ ಸುಳ್ಳು ಆರೋಪ ವರದಿ ಮಾಡಿದವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ನನ್ನ  ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಯಿಲ್ಲ. ನಕ್ಸಲ್ ಪ್ರಕರಣವಿಲ್ಲ. ನಾನೊಬ್ಬ ಸಾಮಾಜಿಕ  ಹೋರಾಟಗಾರ. ಪ್ರಜಾತಾಂತ್ರಿಕವಾಗಿ ನದಿಗಳ ಪರ, ದಲಿತರ, ಹರಿಜನ ಗಿರಿಜನರ ಪರ, ಕುದುರೆಮುಖ  ಅಕ್ರಮ ಗಣಿಗಾರಿಕೆ ಸೇರಿದಂತೆ ಹಲವು ಹೋರಾಟಗಳನ್ನು ಮಾಡಿಕೊಂಡು ಬಂದವನು. ನಾನೆಂದಿಗೂ  ನಕ್ಸಲ್ ಹೋರಾಟವನ್ನು ಬೆಂಬಲಿಸಿಲ್ಲ‌‌. ಸಂದರ್ಭ ಬಂದಾಗಲೆಲ್ಲ ಅದನ್ನು ಖಂಡಿಸಿದ್ದೇನೆ.

* ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ರಕ್ಷಣೆ ಹಿಂಪಡೆದಿದೆಯಲ್ಲ ?

ಇದು  ಮಿತಿಮೀರಿದ ಸರ್ವಾಧಿಕಾರ ಧೋರಣೆ. ಪೊಲೀಸ್‌ ಇಲಾಖೆಯೇ ರಕ್ಷಣೆ ಕೊಡುವುದಿಲ್ಲ ಎನ್ನುವುದು  ದುರದೃಷ್ಟಕರ. ನನ್ನನ್ನು ವಿರೋಧಿಸಿ ಅನಾಮಧೇಯ ಅನಧಿಕೃತ ಕರಪತ್ರ ಹಂಚಿದವರ  ಅನುಮತಿಯಿಲ್ಲದೆ ಪ್ರತಿಭಟನೆ ನಡೆಸುವವರ ವಿರುದ್ಧ ದೂರು ಸಲ್ಲಿಸಿದರೆ ಪೊಲೀಸರು  ಕ್ರಮಕೈಗೊಳ್ಳುವುದಿಲ್ಲ ? 

*ನಿಮ್ಮ ಆಯ್ಕೆಗೆ ಯಾವೆಲ್ಲ ಸಾಹಿತಿಗಳು ಬೆಂಬಲ ನೀಡಿದ್ದಾರೆ?

ಬರಗೂರು,  ಚಂಪಾ, ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಹಲವರು ನನ್ನ ಆಯ್ಕೆಗೆ ಬೆಂಬಲ  ವ್ಯಕ್ತಪಡಿಸಿದ್ದಾರೆ. ಯಾವುದೇ ಸಾಹಿತ್ಯಾಸಕ್ತರು ಸಾಹಿತಿಗಳು ನನ್ನ ಆಯ್ಕೆಗೆ ವಿರೋಧ  ವ್ಯಕ್ತಪಡಿಸಿಲ್ಲ. ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಕೆಲವು ಬುದ್ಧಿಗೇಡಿಗಳು ದೊಡ್ಡ  ಸುದ್ದಿ ಮಾಡಿದ್ದಾರೆ.

*ನಿಮ್ಮ ಆಯ್ಕೆ ಬಗ್ಗೆ ಹೇಳಿ?

ಜಿಲ್ಲಾ  ಸಾಹಿತ್ಯ ಪರಿಷತ್ತಿನಲ್ಲಿ 23 ಕಾರ್ಯಕಾರಿ ಸದಸ್ಯರು ಸರ್ವಾನುಮತದಿಂದ ನನ್ನನ್ನು ಆಯ್ಕೆ  ಮಾಡಿದ್ದಾರೆ. ಆಜೀವ ಸದಸ್ಯರು ಕೇಳಿ ತೀರ್ಮಾನ ಕೈಗೊಳ್ಳಲು ಬರುವುದಿಲ್ಲ. ಕಾರ್ಯಕಾರಿ  ತೀರ್ಮಾನವನ್ನು ಪ್ರಶ್ನಿಸಲು ಬರುವುದಿಲ್ಲ. ಚಿಕ್ಕಮಗಳೂರಿನಲ್ಲಿ ಪೂರ್ಣಚಂದ್ರ ತೇಜಸ್ವಿ  ಬಳಿಕ ನನ್ನ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಹಾಗಾಗಿ ನನಗೂ  ಒಂದು ಆದ್ಯತೆ ಇದೆ. ಅಷ್ಟೊಂದು ದೊಡ್ಡಮಟ್ಟದಲ್ಲಿ ನಾನು ಹೆಚ್ಚಿನ ಸಾಹಿತ್ಯ ರಚಿಸದೇ  ಇದ್ದರೂ ನನಗೂ ಆದ್ಯತೆ ಇದೆ.
ಕಳೆದ ಮೂರು ವರ್ಷಗಳ ಹಿಂದೆಯೇ  ಚಿಕ್ಕಮಗಳೂರಿನಲ್ಲಿನ ಸಾಹಿತ್ಯ ಸಮ್ಮೇಳನಕ್ಕೆ ನನ್ನನ್ನು ಅಧ್ಯಕ್ಷರಾಗಬೇಕೆಂದು  ತೀರ್ಮಾನಿಸಲಾಗಿತ್ತು. ಆದರೆ ಮರುಳ ಸಿದ್ದಪ್ಪ ಅವರಿಗೆ ಹಿರಿತನದ ಆಧಾರದ ಮೇಲೆ  ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ಇದಕ್ಕೆ ನಾನೂ ಸಮ್ಮತಿ ಸೂಚಿಸಿದ್ದೆ.ಈಗ  ಶೃಂಗೇರಿಯಲ್ಲಿ ನಡೆಯುತ್ತಿರುವುದರಿಂದ ನನ್ನ ಆಯ್ಕೆ ಅನಿವಾರ್ಯವಾಯಿತು.

*ಕೊನೆಯದಾಗಿ ಏನು ಹೇಳುತ್ತೀರಿ?

ಉದ್ದೇಶಪೂರಕವಾಗಿ  ಸಮ್ಮೇಳನಾಧ್ಯಕ್ಷರ ಆಯ್ಕೆ ವಿರೋಧಿಸುತ್ತಿರುವುದು ಪೊಲೀಸರ ಮೂಲಕ ಸಮ್ಮೇಳನಕ್ಕೆ  ಅಡ್ಡಿಪಡಿಸುತ್ತಿರುವುದು ಸಮಾಜಕ್ಕೆ ಒಳ್ಳೆಯ ಸಂದೇಶವಲ್ಲ.ವಿರೋಧಿಸುವುದೇ ಆಗಿದ್ದರೆ  ಬೇರೆ ಕಾರಣಕ್ಕೆ ವಿರೋಧ ವ್ಯಕ್ತಪಡಿಸಬಹುದಿತ್ತು.ಅದನ್ನು ಬಿಟ್ಟು ಸಮ್ಮೇಳನಕ್ಕೆ  ಅಡ್ಡಿಪಡಿಸುವುದು ಸರಿಯಲ್ಲ.


ಸಾಹಿತ್ಯಾಸಕ್ತರಿಗೆ ಇದು  ಕಹಿನೆನಪು. ಕನ್ನಡಕ್ಕೆ ಮಾಡಿದ ಅವಮಾನ‌. ಒಂದು ಚರಿತ್ರೆ. ಸದ್ದುಗದ್ದಲವಿಲ್ಲದೇ  ಮುಗಿದುಹೋಗಬೇಕಿದ್ದ ಸಾಹಿತ್ಯ ಸಮ್ಮೇಳನವನ್ನು ಬುದ್ಧಿಗೇಡಿಗಳು ದೊಡ್ಡಸುದ್ದಿ  ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com