7 ಜಿಲ್ಲೆಗಳ ಮಠಾಧೀಶರಿಂದ 'ಮಹದಾಯಿ' ಸಭೆ: ರಾಜಕೀಯ ಮುಖಂಡರಿಗೆ ಪ್ರವೇಶ ನಿಷಿದ್ಧ

ಮಹದಾಯಿ ನದಿ ನೀರು ಹಂಚಿಕೆ ಹಾಗೂ ರಾಜ್ಯ ಗಡಿಗೆ ಸಂಬಂಧಿಸಿದ ಬಗೆಹರಿಯದ ಸಮಸ್ಯೆಗಳ ಕುರಿತು ಚರ್ಚಿಸಲು 7 ಜಿಲ್ಲೆಗಳ ಮಠಾಧೀಶರು ಮಹತ್ವದ ಆಯೋಜನೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ ಹಾಗೂ ರಾಜ್ಯ ಗಡಿಗೆ ಸಂಬಂಧಿಸಿದ ಬಗೆಹರಿಯದ ಸಮಸ್ಯೆಗಳ ಕುರಿತು ಚರ್ಚಿಸಲು 7 ಜಿಲ್ಲೆಗಳ ಮಠಾಧೀಶರು ಮಹತ್ವದ ಆಯೋಜನೆ ಮಾಡಿದ್ದಾರೆ.

ಮಹದಾಯಿ ನದಿ ನೀರು ಪಡೆದುಕೊಳ್ಳುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸುವಂತೆ ಕೇಂದ್ರವನ್ನು ಹಾಗೂ ಗಡಿ ವಿವಾದ ಕೆದಕುತ್ತಿರುವ ಮಹಾರಾಷ್ಟ್ರಕ್ಕೆ ಸಮರ್ಥ ತಿರುಗೇಟು ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಹೋರಾಟ ರೂಪಿಸಲು ಚರ್ಚಿಸುವುದಕ್ಕಾಗಿ ಜ. 10ರಂದು ಬೆಳಿಗ್ಗೆ 11ಕ್ಕೆ ಬೆಳಗಾವಿಯ ಶಿವಬಸವ ನಗರದ ನಾಗನೂರು ರುದ್ರಾಕ್ಷಿಮಠದಲ್ಲಿ ಈ ಭಾಗದ 7 ಜಿಲ್ಲೆಗಳ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಸಭೆ ಆಯೋಜಿಸಲಾಗಿದೆ.

ಸಭೆಗೆ ಮಠಾಧೀಶರಲ್ಲದೆ ಕನ್ನಡ ಪರ ಹಾಗೂ ರೈತ ಪರ ಸಂಘಟನೆಗಳ ಮುಖಂಡರು, ಹೋರಾಟಗಾರರು, ಮತ್ತಿತರ ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳನ್ನೂ ಕೂಡ ಸಭೆಗೆ ಆಹ್ವಾನಿಸಲಾಗಿದೆ. ಆದರೆ ಯಾವುದೇ ರಾಜಕೀಯ ಪಕ್ಷಗಳ ನೇತಾರರು ಹಾಗೂ ಪಕ್ಷಗಳ ಜತೆ ಗುರುತಿಸಿಕೊಂಡವರನ್ನು ಸಭೆಗೆ ಆಹ್ವಾನಿಸಿಲ್ಲಎಂದು ನಾಗನೂರು ರುದ್ರಾಕ್ಷಿಮಠದ ಕಾರ್ಯದರ್ಶಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಪದೇಪದೆ ನೆನೆಗುದಿಗೆ ಬೀಳುತ್ತಿದೆ. ಈ ಸಂಬಂಧ ರಚಿಸಿದ್ದ ನ್ಯಾಯಮಂಡಳಿ ತೀರ್ಪು ನೀಡಿ 17 ತಿಂಗಳು ಕಳೆದರೂ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿಲ್ಲ. ಈ ಕುರಿತು ಸರಕಾರದ ಮೇಲೆ ಪಕ್ಷಾತೀತವಾಗಿ ಒತ್ತಡ ಹೇರಬೇಕಿದೆ. ಅಂತೆಯೇ ನ್ಯಾಯಮಂಡಳಿ ತೀರ್ಪು ಕುರಿತಂತೆ ಕೂಡಲೇ ಗೆಜೆಟ್ ನೋಟಿಫಿಕೇಷನ್ ಹೊರಡಿಸಿ, ಕರ್ನಾಟಕ ತನ್ನ ಪಾಲಿನ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಕೋರಲಾಗಿದೆ. 

ಇನ್ನೊಂದೆಡೆ ನೆರೆಯ ಮಹಾರಾಷ್ಟ್ರ ಗಡಿ ವಿವಾದ ಮತ್ತೆಮತ್ತೆ ಕೆದಕುತ್ತಿದ್ದು ಗಡಿ ಭಾಗದ ಕನ್ನಡಿಗರಲ್ಲಿಶಕ್ತಿ ತುಂಬಲು ಸರಕಾರ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳಲು ಒತ್ತಾಯಿಸುವ ನಿಟ್ಟಿನಲ್ಲಿ ಚರ್ಚಿಸಿ ನಿರ್ಣಯಕ್ಕೆ ಬರಲು ಈ ಸಭೆ ಕರೆದಿರುವುದಾಗಿ ಹೇಳಲಾಗಿದೆ.

ಈ ವಿಚಾರವಾಗಿ ಮಾತನಾಡಿರುವ ಗೋವಾ ಮಾಜಿ ಸಿಎಂ ದಿಗಂಬಕ ಕಾಮತ್ ಅವರು, ಮಹದಾಯಿ ಗೋವಾ ರಾಜ್ಯದ ಕುಡಿಯುವ ನೀರಿನ ಮೂಲವಾಗಿದ್ದು, ಅದರ ಮಾರ್ಗ ಬದಲಾವಣೆ ಸರಿಯಲ್ಲ. ಇದನ್ನು ಜನ ವಿರೋಧಿಸುತ್ತಾರೆ. ಮಹದಾಯಿ ಸಂಬಂಧ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ಗೋವಾ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ಗೋವಾ ನಿಲುವಿಗೆ ತೀವ್ರ ಕಿಡಿಕಾರಿರುವ ಸಾಮಾಜಿಕ ಕಾರ್ಯಕರ್ತ ಅಶೋಕ್ ಚಂದರಗಿ ಅವರು, ಕರ್ನಾಟಕ ರಾಜಕೀಯ ಮುಖಂಡರು ಮಹದಾಯಿಯ ಸಮಸ್ಯೆ ಬಗೆಹರಿಸುವ ಬದಲಾಗಿ, ತಮ್ಮ ರಾಜಕೀಯ ಸ್ವ ಹಿತಾಸಕ್ತಿಗಾಗಿ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ರಾಜಕೀಯ ಮುಖಂಡರನ್ನು ಹೊರಗಿಟ್ಟು ಮಠಾಧೀಶರು ನಡೆಸುತ್ತಿರುವ ಸಭೆಗೆ ತಮ್ಮ ಬೆಂಬಲವಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com