ಬೆಂಗಳೂರು: ನಗರದಲ್ಲಿ ಅಡಗಿ ಕುಳಿತಿದ್ದ ಮೂವರು ಶಂಕಿತ ಉಗ್ರರ ಬಂಧನ

ತಮಿಳುನಾಡು ರಾಜ್ಯದಲ್ಲಿ ಹಿಂದೂ ಸಂಘಟನೆಯ ಮುಖಂಡನ ಹತ್ಯೆಗೈದು ನಗರದ ಪಿ,ಜಿಯೊಂದರಲ್ಲಿ ಆಶ್ರಯ ಪಡೆದಿದ್ದ ಮೂವರು ಶಂಕಿತ ಉಗ್ರರನ್ನು ಬಂಧನಕ್ಕೊಳಪಡಿಸಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತಮಿಳುನಾಡು ರಾಜ್ಯದಲ್ಲಿ ಹಿಂದೂ ಸಂಘಟನೆಯ ಮುಖಂಡನ ಹತ್ಯೆಗೈದು ನಗರದ ಪಿ,ಜಿಯೊಂದರಲ್ಲಿ ಆಶ್ರಯ ಪಡೆದಿದ್ದ ಮೂವರು ಶಂಕಿತ ಉಗ್ರರನ್ನು ಬಂಧನಕ್ಕೊಳಪಡಿಸಲಾಗಿದೆ. 

ತಿಂಗಳ ಹಿಂದಷ್ಟೇ ತಮಿಶಳುನಾಡಿನ ಹಿಂದೂ ಸಂಘಟನೆಯ ಮುಖಂಡನನ್ನು ಹತ್ಯೆಗೈದ ಬಳಿಕ ಈ ಸಂಘಟನೆಯ ಆರು ಮಂದಿ ಶಂಕಿತರು ಬೆಂಗಳೂರಿನ ವಿವೇಕನಗರ ಸಮೀಪದ ಪಿಜಿಯೊಂದರಲ್ಲಿ ನೆಲೆಸಿದ್ದರು. ಅವರಲ್ಲಿ ಮೂವರು ಮಂದಿ ಬೆಂಗಳೂರಿನಲ್ಲಿ ಹಾಗೂ ಉಳಿದವರು ದೆಹಲಿಯಲ್ಲಿ ಸೆರೆಯಾಗಿದ್ದಾರೆ.

ಶಂಕಿತ ಉಗ್ರರನ್ನು ವಿಚಾರಣೆಗೊಳಪಡಿಸಲಾಗಿದ್ದು, ವಿಚಾರಣೆ ವೇಳೆ ಸಂಘಟನೆಗಳ ನಂಟು ಇರುವ ಕುರಿತು ಈ ವರೆಗೂ ಯಾವುದೇ ಸುಳಿವುಗಳು ಪತ್ತೆಯಾಗಿಲ್ಲ ಎಂದು ಎನ್ಐಎ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಬಂಧಿತ ಶಂಕಿತನ್ನು ಹನೀಫ್ ಖಾನ್, ಇಮ್ರಾನ್ ಖಾನ್, ಮೊಹಮ್ಮೆದ್ ಜೈದ್, ಅಬ್ದುಲ್ ಶಾಮಿಮ್, ಸಯ್ಯದ್ ಅಲಿ ನವಾಸ್ ಹಾಗೂ ಸಿ.ಖಾಜಾ ಮೊಯ್ದೀನ್ ಎಂದು ಗುರ್ತಿಸಲಾಗಿದೆ. ನಕಲಿ ದಾಖಲೆಗಳನ್ನು ಬಳಸಿ ಆರೋಪಿಗಳು ಓಡಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. 

ಬಂಧಿತ ಶಂಕಿತರು ದಾಳಿಗೆ ದೊಡ್ಡ ಸಂಚನ್ನೇ ರೂಪಿಸಿದ್ದರು. ಶಂಕಿತರಿಗೆ ಇಸಿಸ್ ನಂಟು ಇರುವ ಸಾಧ್ಯತೆಗಳಿದ್ದು, ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿರುವ ಮೂವರು ಶಂಕಿತರ ಓರ್ವ ತಮ್ಮ ದಾಳಿಗೆ ಸಂಚು ರೂಪಿಸಲು ಯುವಕರನ್ನು ನೇಮಕ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದ ಎಂದು ಎನ್ಐಎ ಮೂಲಗಳು ಮಾಹಿತಿ ನೀಡಿವೆ. 

ಇದಕ್ಕಾಗಿ ಶಂಕಿತರು 15 ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡಿದ್ದು, ಅವುಗಳನ್ನು ಟ್ರೇಸ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 

ವಿಚಾರಣೆ ವೇಳೆ ಮತ್ತೋರ್ವ ಆರೋಪಿ ಏಜಾಜ್ ಬಾಷಾ ಎಂಬ ವ್ಯಕ್ತಿಯ ಹೆಸರು ಕೇಳಿ ಬಂದಿದ್ದು, ಈತ ಬೆಂಗಳೂರಿನಲ್ಲಿ ಖಾಸಗಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಿಂದ ಮುಂಬೈಗೆ ಈತ ಬಸ್ ಚಲಾಯಿಸುತ್ತಿರುತ್ತಾರೆ. ಈಗಾಗಲೇ ಈ ಬಗ್ಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರಿಗೂ ಎನ್ಐಎ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ. 

ವಾಹನ ಸಂಖ್ಯೆ ಮೂಲಕ ಈಗಾಗಲೇ ಏಜಾಜ್ ಪಾಷಾನನ್ನು ಎನ್ಐಎ ತಂಡ ಗುರ್ತಿಸಿದ್ದು, ಈ ಕುರಿತು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದೆ. ಪ್ರಸ್ತುತ ಏಜಾಜ್ ನಗರದ ಗುರಪ್ಪನಪಾಳ್ಯದಲ್ಲಿರುವ ಮನೆಯೊಂದರಲ್ಲಿ ಅಡಗಿ ಕುಳಿತಿದ್ದಾನೆಂದು ತಿಳಿದುಬಂದಿದೆ. ತಮ್ಮ ಸಂಚಿಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುವ ಕಾರ್ಯದಲ್ಲಿ ಆತ ತೊಡಗಿಕೊಂಡಿದ್ದಾನೆಂದು ಹೇಳಲಾಗುತ್ತಿದೆ. ಯಾವ ದಾಳಿಗೆ ಎಂಬುದರ ಬಗ್ಗೆ ಈ ವರೆಗೂ ಮಾಹಿತಿಗಳು ತಿಳಿದುಬಂದಿಲ್ಲ. ಈ ನಡುವೆ ಖಚಿತ ಮಾಹಿತಿ ಮೇರೆಗೆ ನಗರದಲ್ಲಿ ಮೊಹಮ್ಮದ್ ಹನೀಫ್ ಖಾನ್, ಇಮ್ರಾನ್ ಖಾನ್, ಮೊಹಮ್ಮದ್ ಜೈದ್ ನನ್ನು ಬಂಧನಕ್ಕೊಳಪಡಿಸಲಾಗಿದ್ದು, ತಮಿಳುನಾಡಿಗೆ ಸ್ಥಳಾಂತರಿಸಲಾಗಿದೆ. ಬಂಧಿತರಿಂದ 89 ಸುತ್ತಿನ ಗುಂಡುಗಳು, 3 ಪಿಸ್ತೂಲ್ ಗಳು, ಬಾಂಬ್ ತಯಾರಿಸಲು ಅಗತ್ಯವಿರುವ ವಸ್ತುಗಳು ಹಾಗೂ ಇನ್ನಿತರೆ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ. 

ಜನವರಿ 26ರಂದು ದೊಡ್ಡ ದಾಳಿಗೆ ರೂಪಿಸಲಾಗಿದ್ದು, ಬಂಧಿತ ಶಂಕಿತರಿಂದ ಮತ್ತಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಉಗ್ರ ಶಿಬಿರಗಳಿಗೆ ನೇಮಕಾತಿ ಪ್ರಕ್ರಿಯೆಗಳು ನಡೆಯುತಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಕಣ್ಗಾವಲಿರಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com