ಸರ್ಕಾರಕ್ಕಿಂತ ಮನು ಬಳಿಗಾರ್ ನೇತೃತ್ವದ ಸಾಹಿತ್ಯ ಪರಿಷತ್ ಬಲು ಅಪಾಯಕಾರಿ; ಕುಂ.ವೀ.

ಸರ್ಕಾರಕ್ಕಿಂತ ಮನು ಬಳಿಗಾರ್ ನೇತೃತ್ವದ ಸಾಹಿತ್ಯ ಪರಿಷತ್ ಬಲು ಅಪಾಯಕಾರಿ ಎಂದು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

Published: 10th January 2020 12:36 PM  |   Last Updated: 10th January 2020 12:36 PM   |  A+A-


kum veerabhadrappa slams manu baligar

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ಚಿಕ್ಕಮಗಳೂರು: ಸರ್ಕಾರಕ್ಕಿಂತ ಮನು ಬಳಿಗಾರ್ ನೇತೃತ್ವದ ಸಾಹಿತ್ಯ ಪರಿಷತ್ ಬಲು ಅಪಾಯಕಾರಿ ಎಂದು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿ ಸರ್ವಾಧ್ಯಕ್ಷ ವಿಠಲ್ ಹೆಗ್ಗಡೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ನಾಡೋಜ ಮನುಬಳಿಗಾರ್ ಸರ್ಕಾರದ ಎದುರು ಮಂಡಿಯೂರಿ ಸಮ್ಮೇಳನಕ್ಕಾಗಿ ಅಂಗಲಾಚುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಹಿತ್ಯಕ್ಕೂ ರಾಜಕಾರಣಕ್ಕೂ ಇರುವ ಗುಪ್ತಮುಖವನ್ನು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಅನಾವರಣಗೊಳಿಸಿದೆ. ಭಜರಂಗದಳ, ಹಿಂದುತ್ವವಾದಿಗಳು, ಆರ್‌ಎಸ್‌ಎಸ್ ಕಪಿಮುಷ್ಠಿಯಲ್ಲಿ ಸರ್ಕಾರ ಸಿಲುಕಿಕೊಂಡಿರುವುದು,‌ ಅವರು ಹೇಳಿದ್ದನ್ನೇ ಮಾಡಬೇಕು, ಉಣ್ಣಬೇಕು, ಉಡಬೇಕು ಇಂತಹವರನ್ನೇ ಆಯ್ಕೆ ಮಾಡಬೇಕು ಎನ್ನವುದು ಅಪಾಯಕಾರಿ ಸನ್ನಿವೇಶ ಎಂದು ಕುಂವೀ ಆತಂಕ ವ್ಯಕ್ತಪಡಿಸಿದರು. 

ಹಿಟ್ಲರ್‌ನ ನಾಜಿ ಸಂಸ್ಕೃತಿಯನ್ನು ಭಾರತದಲ್ಲಿ ಹಿಂದೂತ್ವವಾದಿಗಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾರತ ಎನ್ನುವುದು ಸರ್ವಜನಾಂಗದ ಶಾಂತಿಯ ದೋಟ. ಸಂವಿಧಾನ ವಿರೋಧಿಯಾಗಿ ಸರ್ಕಾರ ನಡೆಯುತ್ತಿರುವುದನ್ನು ಸಾಹಿತಿಗಳು ವಿರೋಧಿಸುತ್ತಿದ್ದಾರೆ. ರಾಜಕಾರಣ ಸಾಹಿತ್ಯದ ಚಟುವಟಿಕೆಯಲ್ಲಿ ಮೂಗು ತೂರಿಸದೇ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಬೇಕು. ಯದುರಾಜಮಾರ್ಗದಿಂದ ಇಲ್ಲಿಯವರೆಗೆ ಪ್ರತಿಭಟನೆ ಪ್ರತಿರೋಧ ಸಾಹಿತ್ಯದ ಮೂಲದ್ರವ್ಯ. ಅದಿಲ್ಲದೇ ಸಾಹಿತ್ಯ ಬದುಕಲು ಸಾಧ್ಯವಿಲ್ಲ. ಹಣ ತೆಗೆದುಕೊಂಡು ಆಶೀರ್ವಾದ ಮಾಡದಿರುವ ದೇವರನ್ನು ನಂಬುವುದಿಲ್ಲ ಎನ್ನುವುದು ನಕ್ಸಲಿಸಂ ಅಲ್ಲ‌. ಸಾಮಾಜಿಕ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸದ ಲೇಖಕ ಲೇಖಕನೇ ಅಲ್ಲ ಎಂದು ಕುವೆಂಪು ಲಂಕೇಶ್ ಅವರೇ ಹೇಳಿದ್ದಾರೆ ಎಂದರು.

ಕುವೆಂಪು, ತೇಜಸ್ವಿ ನೋಡದೇ ಇರುವ ನೋಟವನ್ನು ವಿಠಲ್ ಹೆಗ್ಗಡೆ ತಮ್ಮ ಕೃತಿಯಲ್ಲಿ ತೋರಿಸಿದ್ದಾರೆ. ಚಿಕ್ಕಮಗಳೂರು  ಸಾಹಿತ್ಯ ಸಮ್ಮೇಳನ ಹಲವು ಪ್ರಥಮಗಳಿಗೆ ಕಾರಣವಾಗಿದೆ. ಸಮ್ಮೇಳನಕ್ಕೆ ನಿಯೋಜಿಸಿರುವ ಪೊಲೀಸರ ವೆಚ್ಚವನ್ನು ಸರ್ಕಾರ ಹಿಂದೂತ್ವಾದಿಗಳಿಂದಲೇ ವಸೂಲಿ ಮಾಡಬೇಕು. ಜನರ ತೆರಿಗೆಯಿಂದಲ್ಲ. ಸಮ್ಮೇಳನಕ್ಕೆ ಜಿಲ್ಲಾಡಳಿತ ಸರ್ಕಾರ ಅನುದಾನ ನೀಡಿಲ್ಲ. ಸರ್ಕಾರ ಅನುದಾನ ನೀಡುವುದು ಅವರಪ್ಪನ ಮನೆಯಿಂದಲ್ಲ. ಜನರ ಹಣವನ್ನು. ಇಷ್ಟೆಲ್ಲ ತೊಂದರೆ ಸಮಸ್ಯೆಗಳ ನಡುವೆಯೂ ಅಶೋಕ್ ಕುಂದೂರು ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಶ್ಲಾಘನೀಯ ಎಂದರು. ರಾಜ್ಯದಲ್ಲಿರುವುದು ಅಪ್ರಜಾಸತಾತ್ಮಕ ಸರ್ಕಾರ. ಎಲ್ಲಾ ಸಮ್ಮೇಳನಕ್ಕೆ ನೀಡಿದಂತೆ ಇದಕ್ಕೂ  ಅನುದಾನ ನೀಡಬೇಕು ಎಂದು ಕುಂವೀ ಆಗ್ರಹಿಸಿದರು.

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp