ಮೇಡ್ ಇನ್ ಚೀನಾ ಅಲ್ಲ..!: ಕೊಪ್ಪಳದಲ್ಲಿ ಚೀನಾದ ಅತಿದೊಡ್ಡ ಆಟಿಕೆ ತಯಾರಿಕಾ ಸಂಸ್ಥೆ

ಚೀನಾ ವಸ್ತುಗಳು ಎಂದರೆ ಗುಣಮಟ್ಟದ್ದಲ್ಲ, ದೇಶಿ ನಿರ್ಮಿತವಲ್ಲ ಎಂದು ಮೂಗು ಮುರಿಯುವ ಮಂದಿಯ ನಡುವೆಯೇ ಇತ್ತ ಕರ್ನಾಟಕದ ಕೊಪ್ಪಳದಲ್ಲಿ ಚೀನಾದ ಅತೀ ದೊಡ್ಡ ಆಟಿಕೆ ತಯಾರಿಕಾ ಸಂಸ್ಥೆಯೊಂದು ತನ್ನ ಘಟಕ ಪ್ರಾರಂಭಿಸಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚೀನಾ ವಸ್ತುಗಳು ಎಂದರೆ ಗುಣಮಟ್ಟದ್ದಲ್ಲ, ದೇಶಿ ನಿರ್ಮಿತವಲ್ಲ ಎಂದು ಮೂಗು ಮುರಿಯುವ ಮಂದಿಯ ನಡುವೆಯೇ ಇತ್ತ ಕರ್ನಾಟಕದ ಕೊಪ್ಪಳದಲ್ಲಿ ಚೀನಾದ ಅತೀ ದೊಡ್ಡ ಆಟಿಕೆ ತಯಾರಿಕಾ ಸಂಸ್ಥೆಯೊಂದು ತನ್ನ ಘಟಕ ಪ್ರಾರಂಭಿಸಲಿದೆ.

ಹೌದು.. ಕೊಪ್ಪಳದ ಬಾನಾಪುರ ಗ್ರಾಮದ ಸಮೀಪದಲ್ಲಿ ಚೀನಾದ ಅತೀ ದೊಡ್ಡ ಆಟಿಕೆ ಸಂಸ್ಥೆ ತನ್ನ ಘಟಕವನ್ನು ತೆರೆಯಲು ಸಿದ್ಧವಾಗಿದ್ದು, ಶೀಘ್ರದಲ್ಲೇ ತಮ್ಮ ಉತ್ಪಾದನೆ ಆರಂಭಿಸಲಿದೆ. ವಿಶೇಷ ಆರ್ಥಿಕ ವಲಯದಡಿಯಲ್ಲಿ ಸಂಸ್ಥೆಗೆ ಭೂಮಿ ನೀಡಲಾಗಿದ್ದು, ಸುಮಾರು 1,500 ಕೋಟಿ ರೂ ವೆಚ್ಚದಲ್ಲಿ ಆಟಿಕೆ ತಯಾರಿಕಾ ಘಟಕ ನಿರ್ಮಾಣ ಮಾಡಲಾಗುತ್ತಿದೆ. 

ಈ ಕುರಿತಂತೆ ಮಾತನಾಡಿರುವ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು, ಕೊಪ್ಪಳದಲ್ಲಿ ದೇಶದ ಅತೀ ದೊಡ್ಡ ಆಟಿಕೆ ನಿರ್ಮಾಣ ಘಟಕ ಆರಂಭವಾಗಲಿದ್ದು, ವಿಶೇಷ ಆರ್ಥಿಕ ವಲಯ ಯೋಜನೆಯಡಿಯಲ್ಲಿ ಈ ಘಟಕ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಸಂಸ್ಥೆ ಸುಮಾರು 1500 ಕೋಟಿ ರೂ ಬಂಡವಾಳ ಹೂಡಿಕೆಗೆ ಮುಂದಾಗಿದೆ. ಐಕಸ್ ಏರೋಸ್ಪೇಸ್ ಎಂಬ ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಸಂಸ್ಥೆಯೊಂದಿಗೂ ಒಪ್ಪಂದ ಮಾಡಿಕೊಂಡಿದ್ದು, ಈ ಕುರಿತಂತೆ ಈಗಾಗಲೇ ಕೇಂದ್ರ ಸರ್ಕಾರ ನೋಟಿಫಿಕೇಷನ್ ಕೂಡ ನೀಡಲಾಗಿದೆ. ಇನ್ನೊಂದು ವರ್ಷದಲ್ಲಿ ಈ ಸಂಸ್ಥೆ ತನ್ನ ಕಾರ್ಯಾಚರಣೆ ಆರಂಭಿಸಲಿದೆ. ಈಗಾಗಲೇ ಐಕಸ್ ಏರೋಸ್ಪೇಸ್ ಸಂಸ್ಥೆ ಬೆಳಗಾವಿಯಲ್ಲಿ ತನ್ನ ತಯಾರಿಕಾ ಘಟಕವನ್ನು ಹೊಂದಿದೆ  ಎಂದು ಹೇಳಿದರು.

ಐಕಸ್ ಏರೋಸ್ಪೇಸ್ ಸಂಸ್ಥೆ ಭಾರತದಲ್ಲಿ ದೇಶದ ಅತೀ ದೊಡ್ಡ ಆಟಿಕೆ ತಯಾರಿಕಾ ಘಟಕ ಸ್ಥಾಪನೆ ಮಾಡಲಿದೆ. ನೀವು ಯಾವುದೇ ರೀತಿಯ ಆಟಿಕೆಗಳನ್ನು ತೆಗೆದುಕೊಂಡರೂ ಶೇ.80ರಷ್ಚು ಆಟಿಕೆಗಳ ಮೂಲ ಚೀನಾ ದೇಶವೇ ಆಗಿರುತ್ತದೆ. ಈಗ ಉತ್ಪಾದಕರು ಚೀನಾ ಅಲ್ಲದೇ ಭಾರತವನ್ನು ಪರ್ಯಾಯವಾಗಿ ನೋಡುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಅಂತೆಯೇ ಕರ್ನಾಟಕದಲ್ಲಿ ಯಾವುದೇ ಸಂಸ್ಛೆಗಳು ಕೈಗಾರಿಕೆಗಳನ್ನು ನಿರ್ಮಾಣ ಮಾಡುವುದಾದರೆ ಅದಕ್ಕೆ ನಮ್ಮ ಸರ್ಕಾರದ ಸಂಪೂರ್ಣ ಬೆಂಬಲವಿದೆ. 2021ರ ಹೊತ್ತಿಗೆ ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಬೇಕಾದ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಾಗಿ ಶೆಟ್ಟರ್ ಹೇಳಿದರು.

ಚೀನಾ ಮಾತ್ರವಲ್ಲದೇ ವಿಯೆಟ್ನಾಂ ಮೂಲದ ಸಂಸ್ಥೆಗಳೂ ಕೂಡ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಮುಂದಾಗಿವೆ. ಇದಲ್ಲದೆ ಬಳ್ಳಾರಿಯಲ್ಲಿ ಟೆಕ್ಸ್ ಟೈಲ್ ಕೈಗಾರಿಕೆ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿಭಾಗಗಳ ತಯಾರಿಕಾ ಸಂಸ್ಥೆ, ಚಿತ್ರದುರ್ಗದಲ್ಲಿ ಎಲ್ ಇಡಿ ಲೈಟ್ ಗಳ ತಯಾರಿಕಾ ಸಂಸ್ಥೆ, ಬೀದರ್ ನಲ್ಲಿ ಕೃಷಿ ಅಭಿವೃದ್ಧಿ ಸಲಕರಣೆಗಳ ತಯಾರಿಕಾ ಸಂಸ್ಥೆ, ಹಾಸನದಲ್ಲಿ ಟೈಲ್ಸ್ ತಯಾರಿಕಾ ಘಟಕ, ಮೈಸೂರಿನಲ್ಲಿ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಗಳ ತಯಾರಿಕಾ ಘಟಕ ನಿರ್ಮಾಣವಾಗಲಿದೆ ಎಂದು ಶೆಟ್ಟರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com