ಮಂಗಳೂರು ಘಟನೆ: ಸದನ ಸಮಿತಿ ರಚನೆಗೆ ಎಚ್.ಡಿ. ಕುಮಾರಸ್ವಾಮಿ ಒತ್ತಾಯ

ತೋಳಚಂದ್ರ ಗ್ರಹಣಕ್ಕಿಂತಲೂ ರಾಜಕೀಯಕ್ಕೆ‌ ಹಿಡಿದಿರುವ ಗ್ರಹಣ ಮತ್ತು ರಾಜಕೀಯದಲ್ಲಿ ಬಲಿತಿರುವ ತೋಳಗಳು ಬಹಳ ಅಪಾಯಕಾರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

Published: 10th January 2020 01:04 PM  |   Last Updated: 10th January 2020 01:29 PM   |  A+A-


HD Kumaraswamy

ಎಚ್.ಡಿ ಕುಮಾರಸ್ವಾಮಿ

Posted By : Shilpa D
Source : UNI

ಬೆಂಗಳೂರು: ತೋಳಚಂದ್ರ ಗ್ರಹಣಕ್ಕಿಂತಲೂ ರಾಜಕೀಯಕ್ಕೆ‌ ಹಿಡಿದಿರುವ ಗ್ರಹಣ ಮತ್ತು ರಾಜಕೀಯದಲ್ಲಿ ಬಲಿತಿರುವ ತೋಳಗಳು ಬಹಳ ಅಪಾಯಕಾರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಜೆಪಿ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ‌.19ರಂದು ಹುಬ್ಬಳ್ಳಿಗೆ ಕೇಂದ್ರ ಗೃಹಸಚಿವ  ಅಮಿತ್ ಷಾ  ಆಗಮಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಬೇಕಾಗಿರುವುದು ಮಹಾದಾಯಿ  ಸಮಸ್ಯೆಗೆ ಪರಿಹಾರವೇ ಹೊರತು ಸಿಎಎ ಅಲ್ಲ. ಬಿಜೆಪಿ ತನ್ನ ಸಿಎಎ ಕಟ್ಟಿ ಪಕ್ಕಕ್ಕಿಟ್ಟು ಜನರ  ಸಮಸ್ಯೆಗೆ ಪರಿಹಾರ ನೀಡಬೇಕು‌. 

ಅಮಿತ್ ಷಾ ಹುಬ್ಬಳ್ಳಿಗೆ ಬರುತ್ತಿರುವುದು ಸಿಎಎಗೆ  ಅಲ್ಲ, ಬೆಂಕಿ ಹಚ್ಚಲು. ಯಡಿಯೂರಪ್ಪ ಅವರು ನರೇಂದ್ರ ಮೋದಿಗೆ ಮಾತ್ರ ಮುಖ್ಯಮಂತ್ರಿಯಲ್ಲ. ಇಡೀ  ರಾಜ್ಯದ ಮುಖ್ಯಮಂತ್ರಿ. ರಾಜ್ಯದ ಸಮಸ್ಯೆಗಳ ಪರಿಹಾರಕ್ಕಾಗಿ ದೆಹಲಿಗೆ ಭೇಟಿ ನೀಡಬೇಕೇ  ಹೊರತು ಮಂತ್ರಿಮಂಡಲಕ್ಕಾಗಿ, ಅಧಿಕಾರಕ್ಕಾಗಿ ಅಲ್ಲ ಎಂದು ಕುಮಾರಸ್ವಾಮಿ ಕುಟುಕಿದರು.

ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಮುಖ್ಯಮಂತ್ರಿಗಳ  ಫೋಟೋ ದಾಖಲೆಯಲ್ಲಿ ನಾನೂ ಇದ್ದೇನೆ. ವಿಧಾನಸೌಧ ಇರುವವರೆಗೂ ನನ್ನ ಫೋಟೋ ಇರುತ್ತದೆ. ನಾಳೆ  ಯಡಿಯೂರಪ್ಪ ಫೋಟೋ ಸಹ ಕೆಳಗಿಳಿಯಲಿದೆ. ರಾಜ್ಯದ ಜನರು ನನ್ನನ್ನು ಉಳಿಸುವುದು  ಬೇಡ.

ರಾಜ್ಯವನ್ನು ಉಳಿಸಲಿ ಸಾಕು. ವಾಮಮಾರ್ಗದ ರಾಜಕಾರಣದಿಂದ ನಾನು ಈಗ ಮುಖ್ಯಮಂತ್ರಿ  ಸ್ಥಾನದಿಂದ‌ ಕೆಳಗಿಳಿದಿದ್ದೇನೆ. ರಾಜ್ಯಕ್ಕೆ ಯಾವುದೇ ದರಿದ್ರ‌ಇಲ್ಲ. ನಾನು  ಮುಖ್ಯಮಂತ್ರಿಯಾಗಿಯೇ ಉಳಿದಿದ್ದರೆ ಅನುದಾನಕ್ಕಾಗಿ ಕೇಂದ್ರದ ಬಾಗಿಲು  ಬಡಿಯುತ್ತಿರಲಿಲ್ಲ. ಸಿದ್ದರಾಮಯ್ಯ ಹೇಳುವಂತೆ ನರೇಂದ್ರ ಮೋದಿ ಮನೆ ಮುಂದೆ ಧರಣಿಯನ್ನೂ  ಕೂರುತ್ತಿರಲಿಲ್ಲ. ನನ್ನದೇ ಇತಿಮಿತಿಯೊಳಗೆ ರಾಜ್ಯದ ಸಮಸ್ಯೆಗಳಿಗೆ ಪರಿಹಾರ  ಹುಡುಕುತ್ತಿದ್ದೆ ಎಂದರು.

ಹೆಬ್ಬೆಟ್ಟು  ಒತ್ತುವ ಅಧಿಕಾರಿ‌ ಬೇಡ. ನಾನು ಅಧಿಕಾರ ನಡೆಸಿದವನೇ. ಅಧಿಕಾರಿಗಳು ಹೇಗಿರುತ್ತಾರೆ‌ ಎಂದು  ನನಗೂ ಗೊತ್ತು. ಮಂಗಳೂರಿನಲ್ಲಿ ನಡೆದ ದುರ್ಘಟನೆ ಹಾಗೂ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾ.ಗೋಪಾಲಗೌಡ ಅವರು ಸೇರಿದಂತೆ  ರಾಜ್ಯದ ಜನರ ಹಕ್ಕನ್ನು ಕಿತ್ತುಕೊಳ್ಳುತ್ತಿರುವ ಬಗ್ಗೆ ಸರ್ಕಾರ ಎಲ್ಲಾ ಪಕ್ಷಗಳ  ಶಾಸಕರನ್ನೊಳಗೊಂಡ ಸದನ ಸಮಿತಿ ರಚಿಸಲಿ ಎಂದು ಆಗ್ರಹಿಸಿದರು.

ಬಿಜೆಪಿಯ  ಸಿಡಿಗಳು ಬಹಳ ಇವೆ. ಬಿಜೆಪಿ ನಾಯಕರು ಸಿಡಿ ಎಂದ ತಕ್ಷಣ ಭಯ ಪಡುವುದು ಬೇಡ, ಸರಿಯಾದ  ಸಂದರ್ಭ ಬಂದಾಗ ಸಿಡಿಗಳನ್ನು ಬಿಡುಗಡೆ ಮಾಡುತ್ತೇನೆ. ನಾನು‌ ಬಿಡುಗಡೆ ಮಾಡಿದಷ್ಟು  ದಾಖಲೆಗಳನ್ನು ಇದೂವರೆಗೂ ಯಾರೂ ಬಿಡುಗಡೆ ಮಾಡಿಲ್ಲ. ಕುಮಾರಸ್ವಾಮಿ ಹಿಟ್ ಎಂಡ್ ರಾಜಕಾರಣಿ  ಅಲ್ಲ. ವಿಧಾನಸಭೆ ಕಲಾಪದಲ್ಲಿ‌ ನಾನು ಸುಮ್ಮನಿರುವವನಲ್ಲ ಎಂದು ಕುಮಾರಸ್ವಾಮಿ ಎಚ್ಚರಿಕೆ  ನೀಡಿದರು.

ಬ್ರಿಟೀಷರ ಆಳ್ವಿಕೆಯನ್ನೂ ಸಹ ಕೇಂದ್ರ ಹಾಗೂ ರಾಜ್ಯ ಬಿಜೆಪಿ ದೇಶದಲ್ಲಿ ಮೀರಿಸಿದೆ. ಸುಪ್ರೀಂಕೋರ್ಟ್‌ನಲ್ಲಿ  ಹಾವು ಸಾಯಬಾರದು ಕೋಲು ಮುರಿಯಬಾರದು ಎನ್ನುವ ರೀತಿಯಲ್ಲಿ ತೀರ್ಪು ಬರುತ್ತಿವೆ. ಅಸ್ಸಾಂ  ನಲ್ಲಿ 19 ಲಕ್ಷ ಅಕ್ರಮ ಎಂದು ಕೇಂದ್ರವೇ ಹೇಳಿದೆ. 15, 600ಕೋಟಿ ಹಣ ಡಿಟೆನ್ಷನ್ ಸೆಂಟರ್  ಮಾಡಲು ಬೇಕು. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿರುವಾಗ ಸಿಎಎ ಬೇಕಾಗಿತ್ತಾ ? ಎಂದು ಪ್ರಶ್ನಿಸಿದರು.

ನಾವು ಬೆಂಕಿ ಹಚ್ಚುವವರಲ್ಲ. ನಾವು ಬೆಂಕಿಯನ್ನು  ಆರಿಸುವವರು. ಬೆಂಕಿ ಹಚ್ಚುವುದು ಯಡಿಯೂರಪ್ಪ ಹಾಗೂ ಬಿಜೆಪಿಯ ಕೆಲಸ. ನನಗೆ ಸೀಟುಗಳನ್ನು  ಕೊಡಲಿ ಎಂದು ಮಂಗಳೂರಿಗೆ ಹೋಗಲಿಲ್ಲ. ಮತಕ್ಕಾಗಿ ರಾಜಕಾರಣ‌ ಮಾಡುತ್ತಿಲ್ಲ. ಮಾನವೀಯತೆ  ದೃಷ್ಟಿಯಿಂದ ಸ್ಪಂದಿಸಿ ಕರ್ತವ್ಯ ನಿಭಾಯಿಸುತ್ತಿದ್ದೇನೆ‌. ಇದರಲ್ಲಿ  ರಾಜಕಾರಣ‌ ಮಾಡುತ್ತಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ವಿದ್ಯಾರ್ಥಿಗಳನ್ನು  ರಾಜಕೀಯಕ್ಕೆ ಬಳಸಿಕೊಳ್ಳುವುದಾಗಲೀ ವಿದ್ಯಾರ್ಥಿಗಳಿಗಾಗಿ ಜೆಡಿಎಸ್  ಪಕ್ಷದಲ್ಲಿ  ಯಾವುದೇ ವಿಂಗ್ ಇಲ್ಲ. ಇಂದು ಜೆಎನ್‌ಯು ಹಾಗೂ ಕರ್ನಾಟಕದ ಜ್ಯೋತಿ ನಿವಾಸ್ ಕಾಲೇಜಿನ  ಸ್ಥಿತಿ ಏನಾಗಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Stay up to date on all the latest ರಾಜ್ಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp