ಅಗಲಿದ ಹಿರಿಯ ಸಾಹಿತಿ ಡಾ.ಎಂ ಚಿದಾನಂದ ಮೂರ್ತಿಯವರ ಹುಟ್ಟು, ವೃತ್ತಿ, ಸಾಧನೆಯ ಕಿರು ಪರಿಚಯ 

ಡಾ ಎಂ ಚಿದಾನಂದ ಮೂರ್ತಿಯವರು ಕನ್ನಡ ನಾಡು ಕಂಡ ಅಪ್ಪಟ ವಿದ್ವಾಂಸ, ಕನ್ನಡ ಬರಹಗಾರರಾಗಿ, ಸಂಶೋಧಕರಾಗಿ, ಇತಿಹಾಸಕಾರರಾಗಿ ಅವರು ಮಾಡಿದ ಕೆಲಸ ಕರ್ನಾಟಕದಲ್ಲಿ ಅಚ್ಚಳಿಯದಂಥದ್ದು. 
ಡಾ ಎಂ ಚಿದಾನಂದ ಮೂರ್ತಿ
ಡಾ ಎಂ ಚಿದಾನಂದ ಮೂರ್ತಿ

ಬೆಂಗಳೂರು: ಡಾ ಎಂ ಚಿದಾನಂದ ಮೂರ್ತಿಯವರು ಕನ್ನಡ ನಾಡು ಕಂಡ ಅಪ್ಪಟ ವಿದ್ವಾಂಸ, ಕನ್ನಡ ಬರಹಗಾರರಾಗಿ, ಸಂಶೋಧಕರಾಗಿ, ಇತಿಹಾಸಕಾರರಾಗಿ ಅವರು ಮಾಡಿದ ಕೆಲಸ ಕರ್ನಾಟಕದಲ್ಲಿ ಅಚ್ಚಳಿಯದಂಥದ್ದು. 


ಕನ್ನಡ ಭಾಷೆ ಮತ್ತು ಕರ್ನಾಟಕದ ಇತಿಹಾಸದಲ್ಲಿ ವಿಶೇಷ ಅಧ್ಯಯನ ಮತ್ತು ಕೆಲಸ ಮಾಡಿದ್ದ ಚಿದಾನಂದ ಮೂರ್ತಿಯವರು ಹಂಪಿ ಸ್ಮಾರಕ ಸಂರಕ್ಷಣೆಗೆ ಮತ್ತು ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲು ತಮ್ಮ ಇಳಿವಯಸ್ಸಿನಲ್ಲಿ ಮಾಡಿದ್ದ ನಿರಂತರ ಹೋರಾಟ ಎಂತವರಿಗೂ ಸ್ಪೂರ್ತಿ ನೀಡುವಂತಹದ್ದು. 


ಭಾರತ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಮತ್ತು ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರಬೇಕೆಂದು, ಟಿಪ್ಪು ಸುಲ್ತಾಲ್ ವಿಶ್ವ ವಿದ್ಯಾಲಯ ಸ್ಥಾಪಿಸಬಾರದೆಂದು ಹೋರಾಟ ನಡೆಸಿಕೊಂಡು ಬಂದಿದ್ದರು. ಈ ವಿಷಯದಲ್ಲಿ ಕೆಲವರ ವಿರೋಧವನ್ನು ಸಹ ಕಟ್ಟಿಕೊಂಡಿದ್ದರು. 


ಹುಟ್ಟು,ವಿದ್ಯಾಭ್ಯಾಸ: ಚಿದಾನಂದ ಮೂರ್ತಿಯವರು ಹುಟ್ಟಿದ್ದು 1931ರ ಮೇ 10ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೆಕೊಗಲೂರಿನಲ್ಲಿ. 1953ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ ಎ ಪದವಿಯನ್ನು ಪಡೆದರು. ನಂತರ 1957ರಲ್ಲಿ ಅದೇ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆದರು. ಸ್ನಾತಕೋತ್ತರ ಓದುತ್ತಿರುವಾಗ ಪಂಪ ಕವಿ ಮತ್ತು ಮೌಲ್ಯ ಪ್ರಸಾರ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದ್ದರು. ಅಂದು ಕನ್ನಡದ ಪ್ರಾಧ್ಯಾಪಕರು, ಸಾಹಿತಿಗಳೂ ಆಗಿದ್ದ ಕುವೆಂಪು, ಪು.ತಿ.ನ, ರಾಘವಾಚಾರ್, ಇತಿಹಾಸತಜ್ಞ ಎಸ್ ಶ್ರೀಕಾಂತ್ ಶಾಸ್ತ್ರಿಯಂತವರ ಪ್ರಭಾವಕ್ಕೆ ಒಳಗಾಗಿ ಸಾಹಿತ್ಯ ಪ್ರೇಮ, ಹೋರಾಟ ಅವರಲ್ಲಿ ಯುವ ವಯಸ್ಸಿನಲ್ಲಿಯೇ ಬೇರೂರಿತ್ತು.


ಕನ್ನಡ ಶಾಸನಗಳ ಮೇಲೆ ಚಿಮೂ ಅವರ ಆಸಕ್ತಿ ಹೊಳೆಯಿತು.ತಿ.ನಂ.ಶ್ರೀಯವರ ಮಾರ್ಗದರ್ಶನದಲ್ಲಿ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನದಲ್ಲಿ ಗೌರವ ಡಾಕ್ಟರೇಟ್ ಸಹ ಪಡೆದರು. 1964ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪಡೆದರು.


ವೃತ್ತಿ: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಡಾ ಎಂ ಚಿಮೂ ಅವರು ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರಲ್ಲದೆ ಕನ್ನಡ ಭಾಷೆಯ ಅಧ್ಯಯನ, ಬೆಳವಣಿಗೆಗೆ ಹೋರಾಟ ಮುಂದುವರಿಸಿದ್ದರು. ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರೂ ಆದರು. ಅವರ ನೇತೃತ್ವದಲ್ಲಿ ಕನ್ನಡ ಶಕ್ತಿ ಕೇಂದ್ರ ಚೆನ್ನಾಗಿ ಮುಂದುವರಿಯಿತು. ಕನ್ನಡ ಶಾಸನಗಳನ್ನು ವೈಜ್ಞಾನಿಕವಾಗಿ ಅಭ್ಯಸಿಸುತ್ತಿದ್ದರು. ಕನ್ನಡ ಭಾಷೆ ಮತ್ತು ಕರ್ನಾಟಕದ ಬಗ್ಗೆ ಹಲವು ಪುಸ್ತಕಗಳನ್ನು ಬರೆದರು. ಹಂಪಿಯ ಬಗ್ಗೆ, ಬಸವಣ್ಣನವರ ಬಗ್ಗೆ ಹಲವು ಕೃತಿಗಳನ್ನು ರಚಿಸಿದ್ದಾರೆ.


ಪ್ರಶಸ್ತಿಗಳು: ಚಿಮೂ ಅವರ ಸಾಧನೆ, ಪಾಂಡಿತ್ಯ ಗುರುತಿಸಿ ಅವರಿಗೆ ಹತ್ತು ಹಲವು ಪ್ರಶಸ್ತಿಗಳು ಒಲಿದು ಬಂದಿವೆ. ಅವುಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಪ್ರಮುಖ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com