ಕಂಡಲೆಲ್ಲಾ ಜನರೋ ಜನ, ಶ್ರೀ ಗವಿ ಸಿದ್ದೇಶ್ವರ ಮಹಾರಥೋತ್ಸವದಲ್ಲಿ ಭಕ್ತ ಸಾಗರ!

ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ...
ಮಹಾರಥೋತ್ಸವದಲ್ಲಿ ನೆರದಿದ್ದ ಭಕ್ತ ಸಮೂಹ
ಮಹಾರಥೋತ್ಸವದಲ್ಲಿ ನೆರದಿದ್ದ ಭಕ್ತ ಸಮೂಹ

ಕೊಪ್ಪಳ: ಒಂದೆಡೆ ಲಕ್ಷ ಲಕ್ಷ ಭಕ್ತರ ಜನಸಾಗರದ ಮಧ್ಯೆ ರಥೋತ್ಸವಕ್ಕೆ ಚಾಲನೆ ನೀಡುತ್ತಿರುವ ಅಂತರಾಷ್ಟ್ರೀಯ ಕ್ರೀಡಾಪಟು ಡಾ.ಮಾಲತಿ ಹೊಳ್ಳ..  ಇನ್ನೊಂದಡೆ ರಥೋತ್ಸವದಲ್ಲಿ ಪಾಲ್ಗೊಂಡ ರಾಜಕೀಯ ನಾಯಕರು.. ಮತ್ತೊಂದಡೆ ಜಾತ್ರೆಗೆ ಬಂದ ಭಕ್ತರ ಹಸಿವು ನಿಗಿಸಲು ಸಿದ್ದವಾದ ತರಹೇವಾರಿ ಭೋಜನದ ದೃಶ್ಯ. ಇವೆಲ್ಲ ದೃಶ್ಯಗಳು ಕಂಡು ಬಂದದ್ದು ಕೊಪ್ಪಳದಲ್ಲಿ. ಹೌದು ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಇಂದು ನೆರವೆರಿತು. 

ರವಿವಾರ ಸಂಜೆ 6 ಗಂಟೆಗೆ ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಮಾಲತಿ ಹೊಳ್ಳ ಧ್ವಜಾರೋಹಣ ನೆರವೇರಿಸುವ ಮೂಲಕ ಗವಿಸಿದ್ದೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿದರು. ಇನ್ನು ಜಾತ್ರಾ ಮಹೋತ್ಸವದಲ್ಲಿ ನಾಡಿನ ಹಲವಾರು ಮಠಾಧೀಶರು ಸಹ ಪಾಲ್ಗೊಂಡಿದ್ದರು. ಇನ್ನೂ ಕಣ್ಣು ಹಾಯಿಸಿದಷ್ಟು ಸಮುದ್ರದಂತೆ ಜನಸಾಗರವೇ ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದು, ಭಕ್ತರ ಹರ್ಷೋಧ್ವಾರ ಇಡೀ ಕೊಪ್ಪಳದ್ಯಾಂತ ಮೊಳಗಿತ್ತು.. ಈ ವೇಳೆ ಮಾತನಾಡಿದ ಡಾ ಮಾಲತಿ ಹೊಳ್ಳ ಅವರು, ಗವಿಸಿದ್ದೇಶ್ವರ ಜಾತ್ರೆಯ ಧ್ವಜಾರೋಹಣ ನೆರವೇರಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಸೌಭಾಗ್ಯವೇ ಸರಿ. ನನಗೆ ಅನೇಕ ಪ್ರಶಸ್ತಿಗಳು ಬಂದಿರಬಹುದು. ಆದರೆ ಈ ಲಕ್ಷಾಂತರ ಜನಸಾಗರದ ತೇರನೆಳೆಯುವ ಜಾತ್ರೆಗೆ ಅವಕಾಶ ಸಿಕ್ಕಿದ್ದು ಶ್ರೇಷ್ಠ ಪ್ರಶಸ್ತಿ, ಶ್ರೇಷ್ಢ ಸಾಧನೆ ಎಂದು ಸಂತಸ ವ್ಯಕ್ತಪಡಿಸಿದರು.
 
ಭಕ್ತಗಣವನ್ನು ಉದ್ದೇಶಿಸಿ ಮಾತನಾಡಿದ ಗವಿಮಢದ ಗವಿಶ್ರೀಗಳು, ಇದು ಬರೀ ಗವಿಸಿದ್ದಪ್ಪನ ತೇರಲ್ಲ, ಜನರ ತೇರು. ಪ್ರತಿಯೊಬ್ಬನಲ್ಲೂ ಗವಿಸಿದ್ಧ ನೆಲೆಸಿದ್ದಾನೆ. ಅಂತೆಯೇ ಜಾತ್ರೆಗೆ ಕ್ವಿಂಟಾಲ್‌ಗಟ್ಟಲೇ ದವಸ ಧಾನ್ಯ ಹರಿದು ಬರುತ್ತೆ. ಅದು ಮತ್ತೆ ಜನರಿಗೆ ಸಮರ್ಪಣೆಯಾಗುತ್ತೆ. ಮತ್ತೇ ಮುಂದಿನ ಜಾತ್ರೆಗೂ ಬನ್ನಿ ಎಂದು ಆಹ್ವಾನ ನೋಡಿದರು.

ಇನ್ನು ಕೇವಲ ಭಕ್ತ ಜನಸಾಗರ ಮಾತ್ರ ಹರಿದು ಬಂದಿದ್ದಿಲ್ಲ. ಪ್ರಬಲ ರಾಜಕೀಯ ನಾಯಕರ ದಂಡೇ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಹರಿದು ಬಂದಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ, ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಸಿ ಟಿ ರವಿ ಸೇರಿದಂತೆ ಜಿಲ್ಲೆಯ ಹಾಲಿ-ಮಾಜಿ ಶಾಸಕರು ಗವಿಸಿದ್ದೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಲಕ್ಷ್ಮಣ ಸವದಿ, ಸಿಎಂ ಪುತ್ರ ವಿಜಯೇಂದ್ರ ಅಕ್ಕ-ಪಕ್ಕ ಆಸೀನರಾದದ್ದು ವಿಶೇಷವಾಗಿತ್ತು.
 
ಮಹಾ ಜಾತ್ರೆಗೆ ಬಂದ ಭಕ್ತರಿಗಾಗಿ ದಾಸೋಹ ಭವನದಲ್ಲಿ ಭಾರೀ ಭೋಜನ ಸಿದ್ದಪಡಿಸಲಾಗಿತ್ತು. ಮಾದಲಿ, ಹಾಲು,ತುಪ್ಪ, ರೊಟ್ಟಿ, ಪಲ್ಲೆ,ಅನ್ನ ಸಾಂಬಾರ್ ಸೇರಿದಂತೆ ವಿವಿಧ ಖಾದ್ಯಗಳನ್ನು ಸಿದ್ದಪಡಿಸಲಾಗಿತ್ತು. ಮತ್ತೊಂದಡೆ ಜಾತ್ರೆಯ ಹಿನ್ನಲೆಯಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಪಾದಯಾತ್ರೆಯ ಮೂಲಕ ಗವಿಮಠಕ್ಕೆ ಆಗಮಿಸಿದ್ದರು. ಒಟ್ನಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ವರ್ಷದಿಂದ ಸಾಗರೋಪಾದಿಯಲ್ಲಿ ಹೆಚ್ಚಾಗುತ್ತಿದ್ದು, ಎರಡನೇ ಕುಂಭಮೇಳ ಎಂದೇ ಪ್ರಸಿದ್ದಿಯಾಗಿದೆ.

- ಬಸವರಾಜ ಕರುಗಲ್, ಕೊಪ್ಪಳ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com