ಬಾಗಲಕೋಟೆ: ಉಚಿತ ಲ್ಯಾಪ್‌ಟಾಪ್‌ಗಾಗಿ ಡಿಸಿಎಂಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು

ಜಿಲ್ಲಾಡಳಿತ ಭವನದಲ್ಲಿನ ನ್ಯೂ ಅಡಿಟೋರಿಯಂನಲ್ಲಿ ಭಾನುವಾರ ನಡೆದ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸಪ್ತಾಹ ಕಾರ್ಯಕ್ರಮದಲ್ಲಿ ವೇಳೆ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್‌ಗಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ

ಬಾಗಲಕೋಟೆ: ಜಿಲ್ಲಾಡಳಿತ ಭವನದಲ್ಲಿನ ನ್ಯೂ ಅಡಿಟೋರಿಯಂನಲ್ಲಿ ಭಾನುವಾರ ನಡೆದ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸಪ್ತಾಹ ಕಾರ್ಯಕ್ರಮದಲ್ಲಿ ವೇಳೆ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್‌ಗಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಡಿಸಿಎಂ ಕಾರಜೋಳ ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದಾಗಿ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಪೊಲೀಸರು ವಿದ್ಯಾರ್ಥಿಗಳನ್ನು ಕಾರ್ಯಕ್ರಮದಿಂದ ಹೊರಕ್ಕೆ ಕಳುಹಿಸಿದರು. ಇದರಿಂದ ಮತ್ತಷ್ಟು ಕುಪಿತರಾದ ವಿದ್ಯಾರ್ಥಿಗಳು ಸಭಾ ಭವನದ ಮುಂದೆ ತಮಗೆ ನ್ಯಾಯ ಕಲ್ಪಿಸಬೇಕು ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು.

ಕಾರ್ಯಕ್ರಮದ ಬಳಿಕ ಡಿಸಿಎಂ ಕಾರಜೋಳ ಅವರು ವಿದ್ಯಾರ್ಥಿಗಳ ಮನವಿ ಆಲಿಸಿದರು. ಸಿದ್ದರಾಮಯ್ಯ ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೊಡುತ್ತೇವೆ ಎಂದಿದ್ದರು. ಈಗ ನಮ್ಮ ವಿರುದ್ಧ ಏಕೆ ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಆ ವೇಳೆ ವಿದ್ಯಾರ್ಥಿಗಳು ಸಿದ್ದರಾಮಯ್ಯ ಲ್ಯಾಪ್‌ಟಾಪ್ ಕೊಟ್ಟಿಲ್ಲ, ನೀವಾದರೂ ಕೊಡಿ. ಈಗ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಷ್ಟೆ ಲ್ಯಾಪ್‌ಟಾಪ್ ಕೊಡಲಾಗತ್ತಿದೆ. ಎರಡನೇ ,ಮೂರನೇ ವರ್ಷದ ವಿದ್ಯಾರ್ಥಿಗಳಿಗೂ ಕೊಡಿ ಎಂದು ಒತ್ತಾಯಿಸಿದರು. ಈ ವೇಳೆ ಮತ್ತೇ ಉಭಯತರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸರ್ಕಾರಿ, ಅನುದಾನಿತ ಕಾಲೇಜ್‌ಗಳಲ್ಲಿ, ಕಲೆ,ವಾಣಿಜ್ಯ, ವಿಜ್ಞಾನ ಪದವಿ ಹಾಗೂ ಎಂಜಿನಿಯರಿಂಗ್, ಮೆಡಿಕಲ್, ಪಾಲಿಟೆಕ್ನಿಕ್ ಡಿಪ್ಲೋಮಾ ಓದುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲು ನಿರ್ಧರಿಸಲಾಗಿದೆ. ರಾಜ್ಯಾದ್ಯಂತ ೩೧೧ ಕೋಟಿ ರೂ. ವೆಚ್ಚದಲ್ಲಿ ೧.೦೯,೯೧೬ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಅವರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com