ತೋವಿವಿ ಆರೋಗ್ಯದತ್ತಲೂ ಡಿಸಿಎಂ ಕಾರಜೋಳ ಕಾಳಜಿ ವಹಿಸಲಿ

ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಸೋಮವಾರ ನಡೆದ  ಫಲಪುಷ್ಪ ಪ್ರದರ್ಶನ ವೇಳೆ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತೋವಿವಿ ಆರೋಗ್ಯದ ಕಡೆಗೂ ಗಮನ ಹರಿಸಬೇಕಿದೆ.
ಗೋವಿಂದ ಕಾರಜೋಳ ಆರೋಗ್ಯ ತಪಾಸಣೆ
ಗೋವಿಂದ ಕಾರಜೋಳ ಆರೋಗ್ಯ ತಪಾಸಣೆ

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಸೋಮವಾರ ನಡೆದ  ಫಲಪುಷ್ಪ ಪ್ರದರ್ಶನ ವೇಳೆ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತೋವಿವಿ ಆರೋಗ್ಯದ ಕಡೆಗೂ ಗಮನ ಹರಿಸಬೇಕಿದೆ.

ಡಿಸಿಎಂ ಅವರ ದೇಹದ ಎತ್ತರ ೧೭೧ ಸೆಂಟಿ ಮೀಟರ್, ದೇಹದ ತೂಕ ೬೭ ಕೆಜಿಯಂತೆ. ಆರೋಗ್ಯಕ್ಕೆ ತಕ್ಕಂತೆ ಅವರ ತೂಕ ಇನ್ನೂ ಮೂರು ಕೆಜಿ ಕಡಿಮೆ ಇರಬೇಕಂತೆ. ಈಗಾಗಲೇ ೨ ಕೆಜಿ ದೇಹದ ತೂಕ ಇಳಿಸಿಕೊಂಡಿರುವ ಅವರು ಇನ್ನೂ ೩ ಕೆಜಿ ಇಳಿಸಬೇಕಾ ಎಂದು ತಪಾಸಣಾ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಪ್ರಸಂಗ ನಡೆಯಿತು.

ಡಿಸಿಎಂ ಅವರು ರಾಜಕಾರಣದ ಜಂಜಾಟದ ಮಧ್ಯೆ ಆರೋಗ್ಯದ ಬಗೆಗೂ ಕಾಳಜಿ ವಹಿಸಿದ್ದು ನಿಜಕ್ಕೂ ಶ್ಲಾಘನಿಯ. ಯಾವ ವಿವಿಯಲ್ಲಿ ಅವರು ದೇಹದ ಎತ್ತರ ಮತ್ತು ತೂಕದ ಬಗ್ಗೆ ತಪಾಸಣೆ ಮಾಡಿಸಿಕೊಂಡರೋ ಆ ತೋವಿವಿಯ ಆರೋಗ್ಯದ ಬಗೆಗೂ ಕಾಳಜಿ ವಹಿಸಬೇಕಿದೆ.

ಒಂದು ವರ್ಷದ ಮೇಲಾಯಿತು. ತೋಟಗಾರಿಕೆ ವಿಜ್ಞಾನಗಳ ವಿವಿಯ ಕುಲಪತಿ ನೇಮಕ ಆಗಿಲ್ಲ. ಡಾ. ಮಹೇಶ್ವರಯ್ಯ ನಿವೃತ್ತಿ ಬಳಿಕ ಡಾ. ಕೆ.ಎಂ. ಇಂದಿರೇಶ್ ಪ್ರಭಾರ ಕುಲಪತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರಿ ಸುಮಾರು ೧೧ ಬಾರಿ ಇವರ ಪ್ರಭಾರ ಕುಲಪತಿ ಅಧಿಕಾರಾವಧಿ ವಿಸ್ತರಿಸಲಾಗಿದೆ.

ಅದೇನು ಶಾಪವೋ ಗೊತ್ತಾಗುತ್ತಿಲ್ಲ. ತೋಟಗಾರಿಕೆ ಬೆಳೆಗಾರರಿಗೆ ಅನುಕೂಲವಾಗಲಿ ಎನ್ನುವ ಮಹದುದ್ದೇಶದಿಂದ ಆರಂಭಿಸಲಾಗಿರುವ ವಿವಿಗೆ ಸರ್ಕಾರ ಕುಲಪತಿ ನೇಮಕ ವಿಷಯದಲ್ಲಿ ಅಷ್ಟಾಗಿ ಕಾಳಜಿ ವಹಿಸುತ್ತಿಲ್ಲ. ರೈತರಿಗಾಗಿ ಇರುವ ಈ ವಿವಿಗೆ ಕುಲಪತಿ ಆಗುವ ಅರ್ಹರು ಸಿಕ್ಕುತ್ತಿಲ್ಲವೋ ಏನೋ ಎನ್ನುವ ಪ್ರಶ್ನೆ ತೋಟಗಾರಿಕೆ ಬೆಳೆಗಾರರನ್ನು ಕಾಡಲಾರಂಭಿಸಿದೆ.

ಪ್ರಭಾರ ಕುಲಪತಿಗಳ ಮೇಲೆ ವಿವಿ ನಡೆದಕೊಂಡು ಹೋಗುತ್ತಿದೆ. ಪೂರ್ಣಾವಧಿ ಕುಲಪತಿ ಇಲ್ಲದೇ ಇರುವುದು ವಿವಿಯ ಆಡಳಿತದ ಮೇಲೆ, ತೋಟಗಾರಿಕೆ ವಿವಿಯಲ್ಲಿ ನಡೆಯುವ ಅಧ್ಯಯನ, ಸಂಶೋಧನೆ ಮತ್ತು ಮೇಲಾಗಿ ತೋಟಗಾರಿಕೆ ಬೆಳೆಗಾರರ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಗುರುವಿನಂತಿರುವ ಮಠಕ್ಕೂ, ಗುರುವಿರುವ ಮಠಕ್ಕೂ ವ್ಯತ್ಯಾಸ ಇರುವಂತೆ, ಪೂರ್ಣಾವಧಿ ಕುಲಪತಿಗಳು ಇಲ್ಲದೆ ಇರುವುದು ಸಾಕಷ್ಟು ತೊಂದರೆಗಳನ್ನು ಎದುರಿಸವಂತಾಗಿದೆ.

ರಾಜ್ಯದ ಏಕೈಕ ತೋಟಗಾರಿಕೆ ವಿಜ್ಞಾನಗಳ ವಿವಿ ಎನ್ನುವ ಹೆಗ್ಗಳಿಕೆ ಹೊಂದಿರುವ ಈ ವಿವಿಗೆ ರಾಜ್ಯದಲ್ಲಿನ ಎಲ್ಲ ತೋಟಗಾರಿಕೆ ಮಹಾವಿದ್ಯಾಲಯಗಳ ಜವಾಬ್ದಾರಿ ಇದೆ. ಇಂತಹ ಸನ್ನಿವೇಶದಲ್ಲಿ ವರ್ಷಾನುಗಟ್ಟಲೇ ಓರ್ವ ಅರ್ಹ ಕುಲಪತಿ ಸಿಕ್ಕುತ್ತಿಲ್ಲ ಎನ್ನುವುದು ಸಾಕಷ್ಟು ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ.

ವಿವಿಯ ಅವಸ್ಥೆ ಕಂಡು ಸಾಕಷ್ಟು ಜನ ಪ್ರಗತಿಪರ ತೋಟಗಾರಿಕೆ ಬೆಳೆಗಾರರು ರಾಜ್ಯದಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಗತಿ ಪರ ರೈತರಿದ್ದಾರೆ. ಅಂತಹ ಸಾಧಕರಲ್ಲಿ ಯಾರದಾರೂ ಒಬ್ಬರನ್ನು ಅರ್ಹರು ಸಿಗುವವರೆಗೂ ಕುಲಪತಿ ಮಾಡಿ ಎನ್ನುವ ಮಟ್ಟಿಗೆ ವಿವಿ ವ್ಯವಸ್ಥೆ ಬಂದು ನಿಂತಿದೆ.

ಈ ಭಾಗದ ತೋಟಗಾರಿಕೆ ಬೆಳವಣಿಗೆಗೆ ಅನುಕೂಲವಾಗಲಿ ಎಂದು ಆಲಮಟ್ಟಿ ಜಲಾಶಯ ಹಿನ್ನೀರು ಬಾಧಿತ ಸಂತ್ರಸ್ತರ ಸ್ಥಳಾಂತರ ಮತ್ತು ಪುನರ್ ವಸತಿಗಾಗಿ ಸ್ವಾದೀನ ಪಡಿಸಿಕೊಂಡು ಭೂಮಿಯನ್ನು ಬಿಟ್ಟುಕೊಟ್ಟಿದೆ. ನಿರೀಕ್ಷಿತ ಪ್ರಮಾಣದಲ್ಲಿ ವಿವಿ ಬೆಳೆದಿದೆ. ಆದರೆ ಅದೇಕೋ ಕಳೆದ ಒಂದು ವರ್ಷದಿಂದ ಪ್ರಭಾರ ಕುಲಪತಿಗಳ ಆಡಳಿತದಲ್ಲಿಯೇ ವಿವಿ ಮುಂದುವರಿದಿದೆ. ಇಷ್ಟಾದರೂ ಜನಪ್ರತಿನಿಧಿಗಳು ಕುಲಪತಿಗಳ ನೇಮಕದ ಬಗ್ಗೆ ಕಾಳಜಿ ವಹಿಸುತ್ತಿಲ್ಲ.

ಜಿಲ್ಲೆಯವರೇ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ತಮ್ಮ ಪ್ರಭಾವವನ್ನು ಬಳಸಿಕೊಳ್ಳುವ ಮೂಲಕ ಸರ್ಕಾರದಲ್ಲ ಸಂಬಂಧಿಸಿದವರ ಮೇಲೆ ಒತ್ತಡ ತಂದು ರೈತರ ಹಾಗೂ ರೈತರ ಮಕ್ಕಳ ಅನುಕೂಲಕ್ಕಾಗಿ ಇರುವ ತೋವಿವಿಗೆ ಶೀಘ್ರ ಕುಲಪತಿ ನೇಮಕಕ್ಕೆ ಮನಸ್ಸು ಮಾಡಬೇಕಿದೆ. 

ಡಿಸಿಎಂ ಕಾರಜೋಳ ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಂತೆ ತೋವಿವಿ ಆರೋಗ್ಯದ ಬಗೆಗೆ ಕಾಳಜಿ ವಹಿಸುವರೋ ಹೇಗೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ !
-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com