ನಕಲಿ ದಾಖಲೆ ಸೃಷ್ಟಿಸಿದ ಜಾಗದಲ್ಲಿ ಏಸು ಪ್ರತಿಮೆ ನಿರ್ಮಾಣ: ಆರ್.ಅಶೋಕ್

ನಕಲಿ ದಾಖಲೆ ಸೃಷ್ಟಿಸಿ ಕನಕಪುರದ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದು, ಈ ಕುರಿತು ತನಿಖೆ ನಡೆಸಿ ವರದಿ ಬಂದ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಆರ್ ಅಶೋಕ್ ಮತ್ತು ಡಿಕೆ ಶಿವಕುಮಾರ್
ಆರ್ ಅಶೋಕ್ ಮತ್ತು ಡಿಕೆ ಶಿವಕುಮಾರ್

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಕನಕಪುರದ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದು, ಈ ಕುರಿತು ತನಿಖೆ ನಡೆಸಿ ವರದಿ ಬಂದ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಪದ್ಮನಾಭ ನಗರದಲ್ಲಿ ಮಂಗಳವಾರ ನಡೆಯಲಿರುವ ಜಾನಪದ ಜಾತ್ರೆಯ ಕುರಿತು ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕಪುರದ ಹಾರೋಹಳ್ಳಿ ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆಗೆ ಸಂಘಟನೆಯವರಾಗಲಿ, ಟ್ರಸ್ಟ್ ನಿಂದಾಗಲೀ ಯಾವುದೇ ಅನುಮತಿ ಪಡೆದಿಲ್ಲ. ಡಿಸೆಂಬರ್ ನಲ್ಲಿ ಗ್ರಾಮ ಪಂಚಾಯಿತಿಗೆ ಅರ್ಜಿಕೊಟ್ಟಿದ್ದಾರೆ. ಏಸು ಪ್ರತಿಮೆ ನಿರ್ಮಾಣದ ಕೆಲಸ ಮಾತ್ರ ಕಳೆದ 6 ವರ್ಷಗಳಿಂದ ನಡೆಯುತ್ತಿದ್ದು, ಕೃತಕವಾಗಿ ಅಲ್ಲಿ ಆರೇಳು ಪ್ರತಿಮೆ ಇಟ್ಟಿದ್ದಾರೆ. ಅದಕ್ಕೂ ಯಾವುದೇ ಅನುಮತಿ ಪಡೆದಿಲ್ಲ. ಬೆಟ್ಟಕ್ಕೆ ಬೆಸ್ಕಾಂ ಅನುಮತಿ ಪಡೆಯದೆ ದೂರದಿಂದ ವಿದ್ಯುತ್ ಕಂಬ ಎಳೆಯಲಾಗಿದೆ. ಮೇಲಾಗಿ ಅಲ್ಲಿನ ಟ್ರಸ್ಟ್ ಡೀಡ್ ನ ಬೆಟ್ಟದಲ್ಲಿ ಆಸ್ಪತ್ರೆ, ಶಾಲೆ ನಿರ್ಮಿಸುವುದಾಗಿ ತಿಳಿಸಿ, ಈಗ ಅಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಏಸು ಪ್ರತಿಮೆ ಸ್ಥಾಪಿಸಿದ್ದಾರೆ ಎಂದರು.

ಮೆಲ್ನೋಟಕ್ಕೆ ಎಲ್ಲವೂ ಕಾನೂನು ಬಾಹಿರವಾಗಿ ಕಾಣುತ್ತಿದ್ದು, ಅಲ್ಲಿನ ಜಿಲ್ಲಾಧಿಕಾರಿ ಮಾತ್ರ ಮೌಖಿಕವಾಗಿ ವರದಿ ನೀಡಿದ್ದಾರೆ.  ಈ ಕುರಿತು ಜಿಲ್ಲಾಧಿಕಾರಿಗಳಿಂದ ಸಂಪೂರ್ಣ ವರದಿ ಕೇಳಿದ್ದೇನೆ. ಆದರೆ ವರದಿ ನೀಡಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ಆದರೂ ನಿಖರ ಮತ್ತು ವಸ್ತುಸ್ಥಿತಿ ವರದಿ ಕೊಡಬೇಕು ಎಂದು ಆದೇಶಿಸಲಾಗಿದೆ. ಸಂಪೂರ್ಣ ವರದಿ ಬಂದ ಬಳಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು. ಡಿಕೆಶಿ ಈ ಕುರಿತು ಗಲಾಟೆ ಬೇಡ ಎಂದು ಮನವಿ ಮಾಡಿದ್ದಾರೆ. ಆದರೆ ಅವರು ಗಲಾಟೆ ಬೇಡ ಅಂದರೆ ಗಲಾಟೆ ಮಾಡಿಸುವ ಪ್ರವೃತ್ತಿ ಹೊಂದಿದ್ದಾರೆ ಎಂದರ್ಥ. ಶಿವಕುಮಾರ್ ಗಲಾಟೆಗೆ ಪ್ರಚೋದಿಸುವುದು ಬೇಡ. ನಿಮಗೆ ರಾಮನಗರದವರೇ ಆದ ಶಿವಕುಮಾರಸ್ವಾಮಿ,  ಬಾಲಗಂಗಾಧರನಾಥ ಸ್ವಾಮೀಜಿ ಅವರು ಮರೆತು ಹೋದಂತಿದೆ. ಮೊದಲಿಗೆ ನಮ್ಮ ಹೆತ್ತ ತಾಯಿಯನ್ನು ಆದರಿಸಿ, ಬಳಿಕ ಪಕ್ಕದಮನೆ ತಾಯಿಯ ಕಡೆ ಗಮನ ಹರಿಸಿ. ನಮಗೆ ಊಟ ಆಗಿ ಮಿಕ್ಕರೆ ಬೇರೆಯವರಿಗೆ ಹಂಚಬಹುದು ಎಂದು ಪರೋಕ್ಷವಾಗಿ ಏಸು ಪ್ರತಿಮೆ ವ್ಯಂಗ್ಯವಾಡಿದರು. 

ಹಾಗೆಂದು ನಮಗೆ ಯಾವ ಧರ್ಮವೂ ವಿರೋಧಿಯಲ್ಲ. ಮೊದಲಿಗೆ ನಮ್ಮ ಧರ್ಮವನ್ನು ಪೂಜಿಸಿ ಬಳಿಕ ಅನ್ಯ ಧರ್ಮವನ್ನು ಆಧರಿಸೋಣ.   ರಾಮನಗರದಲ್ಲಿ ಕೂಡ ಇದೇ ರೀತಿಯ ಪ್ರಕರಣ ನಡೆದಿದ್ದು, ಸರ್ಕಾರದ ಸೂಚನೆ ಧಿಕ್ಕರಿಸಿ ತಮಿಳುನಾಡಿನಿಂದ ಬಂದು ಮುನೇಶ್ವರ ಬೆಟ್ಟವನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡು ಶಿಲುಬೆ ನೆಟ್ಟಿದ್ದಾರೆ. ಅವರ ವಿರುದ್ದವೂ ಕ್ರಮ ಜರುಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಡಿಕೆಶಿ ಕನಕಪುರ ಎಂಎಲ್‍ಎ ಅಷ್ಟೇ
ಗಲಾಟೆ ಮಾಡಬೇಡಿ ಅಂತಾ ಡಿಕೆಶಿವಕುಮಾರ್ ಅವರ ಕಾರ್ಯಕರ್ತರಿಗೆ ಹೇಳಿದರೆ ಗಲಾಟೆ ಮಾಡಿ ಅಂತಾ ಅರ್ಥ. ನಮ್ಮ ಸರ್ಕಾರ ಗಲಾಟೆ ಮಾಡಿಸಲ್ಲ, ಗಲಾಟೆ ಮಾಡಿಸಲು ಡಿಕೆಶಿಯಿಂದ ಸಾಧ್ಯ ಅಂತಾ ಟಾಂಗ್ ಕೊಟ್ಟರು. ಡಿಕೆಶಿ ಪ್ರಚೋದಿಸುವ ಹೇಳಿಕೆ ಕೊಡಬಾರದು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ಸ್ವಾಮೀಜಿ ರಾಮನಗರ ಜಿಲ್ಲೆಯವರು. ಶಿವಕುಮಾರ್ ಅವರಿಗೆ ಇವರು ಯಾರೂ ನೆನಪಾಗಿಲ್ವಾ? ಮೊದಲು ಹೆತ್ತ ತಾಯಿಯನ್ನು ಪೂಜಿಸೋಣ, ನಂತರ ಪಕ್ಕದ ಮನೆ ತಾಯಿಯನ್ನು ಪೂಜಿಸೋಣ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com