ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಕಾಮೆಡ್ ಕೆ ಪರೀಕ್ಷೆ ದಿನಾಂಕ ಪ್ರಕಟ

ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಮೇ 10ರಂದು ಮಧ್ಯಾಹ್ನ 2ರಿಂದ 5ರವರೆಗೆ ಕಾಮೆಡ್ ಕೆ ಪ್ರವೇಶ ಪರೀಕ್ಷೆ ನಡೆಯಲಿದೆ.
 

Published: 14th January 2020 07:10 PM  |   Last Updated: 16th January 2020 01:37 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : UNI

ಕಾಮೆಡ್ ಕೆ ಪರೀಕ್ಷಾ ಶುಲ್ಕ ಶೇ. 10ರಷ್ಟು ಹೆಚ್ಚಳ

ಬೆಂಗಳೂರು: ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಮೇ 10ರಂದು ಮಧ್ಯಾಹ್ನ 2ರಿಂದ 5ರವರೆಗೆ ಕಾಮೆಡ್ ಕೆ ಪ್ರವೇಶ ಪರೀಕ್ಷೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಾಮೆಡ್ ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್.ಕುಮಾರ್, ಜ. 16ರಿಂದ ವಿದ್ಯಾರ್ಥಿಗಳು ಕಾಮೆಡ್ ಕೆ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಏ. 17 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಮೇ 10 ರಂದು ಪರೀಕ್ಷೆ ನಡೆಯಲಿದ್ದು, ಮೇ. 26ರಂದು ಅಂಕಪಟ್ಟಿ ಪ್ರಕಟಗೊಳ್ಳಲಿದೆ ಎಂದರು.

ಇದೇ ಮೊದಲ ಬಾರಿಗೆ ಕಾಮೆಡ್ ಕೆ ಪರೀಕ್ಷೆಯ ಜೊತೆಗೆ, ವಿದ್ಯಾರ್ಥಿಗಳಿಗೆ ಯೂನಿ-ಗೇಜ್ ಪ್ರವೇಶ ಪರೀಕ್ಷೆಯನ್ನು ಆಯ್ಕೆ ಮಾಡುವ ಅವಕಾಶ ಲಭಿಸಲಿದೆ. ಕಾಮೆಡ್ ಕೆ ಪರೀಕ್ಷೆ ಆಯೋಜಿಸುವ ರೇವಾ ವಿಶ್ವವಿದ್ಯಾನಿಲಯ ಪ್ರಸಕ್ತ ಸಾಲಿನಿಂದ ಯೂನಿ-ಗೇಜ್ ಪರೀಕ್ಷೆ ನಡೆಸಲಿದೆ. ಇದರಿಂದ ವಿದ್ಯಾರ್ಥಿಗಳು ಕೇವಲ ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತದ ಇತರ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಅವಕಾಶ ಪಡೆಯಬಹುದಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಕಾಮೆಡ್ -ಕೆ, ಯೂನಿ-ಗೇಜ್ ಇಲ್ಲವೇ ಎರಡನ್ನೂ ಒಟ್ಟಿಗೆ ಆಯ್ಕೆ ಮಾಡುವ ಅವಕಾಶಗಳಿವೆ. ಈಗಾಗಲೇ ಸುಮಾರು 35 ಕಾಲೇಜುಗಳು ಯೂನಿ-ಗೇಜ್ ನೊಂದಿಗೆ ನೋಂದಾಯಿಸಿಕೊಂಡಿವೆ ಎಂದರು. 

ದೇಶಾದ್ಯಂತ 158 ನಗರಗಳಲ್ಲಿನ 400 ಪರೀಕ್ಷಾ ಕೇಂದ್ರಗಳಲ್ಲಿ ಈ ಆನ್ ಲೈನ್ ಪ್ರವೇಶ ಪರೀಕ್ಷೆಗಳು ನಡೆಯುತ್ತಿವೆ. ದೇಶದ 190 ಸಂಸ್ಥೆಗಳು ಮತ್ತು 31 ವಿಶ್ವವಿದ್ಯಾಲಯಗಳ 1 ಲಕ್ಷಕ್ಕೂ ಅಧಿಕ ಸೀಟುಗಳಲ್ಲಿ ಕಾಮೆಡ್ ಕೆ -ಯೂನಿ-ಗೇಜ್ ಪರೀಕ್ಷೆಗಳು ನಡೆಯಲಿವೆ. ರಾಜ್ಯದಲ್ಲಿ 24 ನಗರಗಳ 100 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 30 ಸಾವಿರ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಬಾರಿ ಕಾಮೆಡ್ ಕೆ ಸೀಟುಗಳ ಸಂಖ್ಯೆ 20 ಸಾವಿರದಿಂದ 22 ಸಾವಿರಕ್ಕೆ ಹೆಚ್ಚಾಗಿದೆ ಎಂದರು. 

ಎರಾ ಫೌಂಡೇಷನ್ ಸಿಇಒ ಪಿ.ಮುರಳೀಧರ್ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ಇಂಜಿನಿಯರಿಂಗ್ ಹುದ್ದೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಿದೆಯಾದರೂ, ವೈದ್ಯಕೀಯ ಕೋರ್ಸ್ ಗಳಿಗೆ ಹೋಲಿಸಿದರೆ ಇಂಜಿನಿಯರಿಂಗ್ ಸೀಟುಗಳಿಗೆ ಬೇಡಿಕೆಯಿದೆ. ಇಡೀ ದೇಶದಲ್ಲಿ ಕರ್ನಾಟಕವೊಂದೇ ಅತಿ ಹೆಚ್ಚು ಬೇಡಿಕೆ ಹೊಂದಿರುವ ರಾಜ್ಯವಾಗಿದೆ ಎಂದರು. 

ಪರೀಕ್ಷೆ ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳು ಸಂಪೂರ್ಣವಾಗಿ ಆನ್ ಲೈನ್ ನಲ್ಲೇ ನಡೆಯಲಿದೆ. ಪ್ರವೇಶ ಪ್ರಕ್ರಿಯೆಗೆ ಹಾಜರಾಗಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ. 45ರಷ್ಟು ಹಾಗೂ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳು ಶೇ. 40ರಷ್ಟು ಅಂಕ ಪಡೆಯುವುದು ಕಡ್ಡಾಯ ಎಂದರು. 

ಅರ್ಜಿ ಪ್ರಕ್ರಿಯೆಗಳು, ಮಾರ್ಗಸೂಚಿಗಳ ಕುರಿತು ಅರಿಯಲು www.comedk.org ಹಾಗೂ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ವಿದ್ಯಾರ್ಥಿಗಳು www.comedk.org ಅಥವಾ www.unigauge.com ಗೆ ಭೇಟಿ ನೀಡಬಹುದು.

ಕಾಮೆಡ್ ಕೆ ಪರೀಕ್ಷಾ ಶುಲ್ಕ ಶೇ. 10ರಷ್ಟು ಹೆಚ್ಚಳ

ಪ್ರಸಕ್ತ ಸಾಲಿನಲ್ಲಿ ಕಾಮೆಡ್ ಕೆ ಪ್ರವೇಶ ಪರೀಕ್ಷೆಯ ಶುಲ್ಕ ಶೇ. 10ರಷ್ಟು ಹೆಚ್ಚಳವಾಗಲಿದೆ. 

ಕಾಮೆಡ್ ಕೆ ಸಿಇಒ ಡಾ. ಎಸ್. ಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕಳೆದ ವರ್ಷ ಸರ್ಕಾರದೊಂದಿಗೆ ನಡೆದ ಒಪ್ಪಂದದಲ್ಲಿಯೇ ಶುಲ್ಕ ಹೆಚ್ಚಳ ನಿರ್ಧಾರವಾಗಿತ್ತು ಎಂದರು. 

ಸರ್ಕಾರದೊಂದಿಗೆ ಒಪ್ಪಂದದಂತೆಯೇ ಶುಲ್ಕ ನಿಗದಿಪಡಿಸಲಾಗಿದೆ. ಕನಿಷ್ಠ ಈ ಬಾರಿಯಾದರೂ ಯಾವುದೇ ಗೊಂದಲಗಳಿಲ್ಲದೆ ಪರೀಕ್ಷೆಗಳು ನಡೆಯಲಿವೆ ಎಂಬ ವಿಶ್ವಾಸವಿದೆ ಎಂದರು. 

ಕಾಮೆಡ್ ಕೆ ಶುಲ್ಕದ ವಿವರ: 

ನಿಯಮದಂತೆ ಒಟ್ಟು ಇಂಜಿನಿಯರಿಂಗ್ ಸೀಟುಗಳ ಪೈಕಿ ಶೇ. 45ರಷ್ಟು ಸೀಟನ್ನು ಸಿಇಟಿ, ಶೇ.  30ರಷ್ಟು ಕಾಮೆಡ್ ಕೆ ಮತ್ತು ಶೇ. 25ರಷ್ಟು ಎನ್ ಆರ್ ಐ ಗೆ ಮೀಸಲಿರಿಸಲಾಗಿದೆ. 

ಸಿಇಟಿಯ ಇಂಜಿನಿಯರಿಂಗ್ ಸೀಟುಗಳಿಗೆ 65,340 ರೂ. ಮತ್ತು  ವಾಸ್ತುಶಿಲ್ಪಕ್ಕೆ 58,806 ರೂ. , ಕಾಮೆಡ್ ಕೆಯಲ್ಲಿ ಇಂಜಿನಿಯರಿಂಗ್ ಸೀಟುಗಳಿಗೆ 1,43,748 ರೂ. ಮತ್ತು  ವಾಸ್ತುಶಿಲ್ಪಕ್ಕೆ 2,01,960 ರೂ.ನಿಗದಿಪಡಿಸಲಾಗಿದೆ. 

ಕಾಲೇಜುಗಳಿಂದ ಶುಲ್ಕ ಕಡಿತ


ಕಾಮೆಡ್ ಕೆ ಶುಲ್ಕ ನಿಗದಿಪಡಿಸದಿರೂ ಖಾಲಿ ಉಳಿದ ಸೀಟುಗಳಿಗೆ ಕಾಲೇಜುಗಳು ಶುಲ್ಕ ಕಡಿತಗೊಳಿಸುತ್ತವೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಸಿಇಟಿ ಶುಲ್ಕದ ಮಾದರಿಯಲ್ಲೇ ಕಾಲೇಜುಗಳಲ್ಲಿ ಸೀಟುಗಳು ದೊರೆಯಲಿವೆ ಎಂದರು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp