ಜ. 17 ರಿಂದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ, ಸ್ವಾಮಿ ವಿವೇಕಾನಂದರ ಕಲಾಕೃತಿ ಆಕರ್ಷಣೆ

ಗಣರಾಜ್ಯೋತ್ಸವದ ಅಂಗವಾಗಿ ನಗರದ ಲಾಲ್ ಬಾಗ್ ನಲ್ಲಿ ಜ.17 ರಿಂದ 27 ದಿನಗಳ ವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, 3.2 ಲಕ್ಷ ಹೂವುಗಳಿಂದ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಸ್ಮರಣಾರ್ಥ...

Published: 14th January 2020 06:44 PM  |   Last Updated: 14th January 2020 06:44 PM   |  A+A-


vivek1

ವಿವೇಕಾನಂದ

Posted By : Lingaraj Badiger
Source : UNI

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ನಗರದ ಲಾಲ್ ಬಾಗ್ ನಲ್ಲಿ ಜ.17 ರಿಂದ 27 ದಿನಗಳ ವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, 3.2 ಲಕ್ಷ ಹೂವುಗಳಿಂದ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಸ್ಮರಣಾರ್ಥ ಕನ್ಯಾಕುಮಾರಿಯ ಸ್ಮಾರಕ ಶಿಲಾ ಬಂಡೆಯ ಮೇಲೆ ನಿಂತಿರುವ ವಿವೇಕಾನಂದರ ಪ್ರತಿಮೆಯನ್ನು ಲಾಲ್ ಬಾಗ್ ಗಾಜಿನ ಮನೆಯಲ್ಲಿ ನಿರ್ಮಿಸಲಾಗಿದೆ. ಇದು ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಲಾಲ್ ಬಾಗ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಾ. ಎಂ.ವಿ. ವೆಂಕಟೇಶ್, ಜ.17 ರಂದು ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ 211ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಇದು ರಾಷ್ಟ್ರ ಮಟ್ಟದಲ್ಲಷ್ಟೇ ಅಲ್ಲದೇ ಅಂತರಾಷ್ಟ್ರೀಯವಾಗಿಯೂ ಖ್ಯಾತಿ ಗಳಿಸಿದೆ. ಗಾಜಿನ ಮನೆಯ ಮಧ್ಯಭಾಗದಲ್ಲಿ ಜ್ಞಾನ ಕೇಂದ್ರ ಪ್ರತಿಕೃತಿ ಕೂಡ ನಿರ್ಮಾಣವಾಗುತ್ತಿದ್ದು, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಹಾಗೂ ಅವರ ಆದರ್ಶವನ್ನು ಫಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು ಎಂದು ವಿವರಿಸಿದರು. 

ಅಮೆರಿಕಾದ ಚಿಕಾಗೋದಲ್ಲಿ 1892 ರಲ್ಲಿ ವಿಶ್ವ ಧರ್ಮ ಸಂಸತ್ ನಲ್ಲಿ ವಿವೇಕಾನಂದರ ಭಾಷಣದ ವೇದಿಕೆ, ಭಾಷಣವನ್ನು ಆಲಿಸಲು ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ್ದ ಧರ್ಮ ಗುರುಗಳು ಭಾಗಿಯಾಗಿರುವುದನ್ನು ಫಲಪುಷ್ಪಗಳ ಮೂಲಕ ಪ್ರತಿಬಿಂಬಿಸಲಾಗಿದೆ. 

ಒಟ್ಟು 98ಕ್ಕೂ ಹೆಚ್ಚು ಬಗೆಯ ವೈವಿದ್ಯಮಯ ವಾರ್ಷಿಕ ಹೂಗಳಿಂದ ಕೂಡಿದ ಈ ಪ್ರದರ್ಶನದಲ್ಲಿ ವಿಶೇಷವಾಗಿ 10 ದೇಶಗಳ, 37 ಬಗೆಯ ವಿಶೇಷ ಹೂಗಳು, ಶೀತವಲಯದ ಹೂಗಳು ಹಾಗೂ ಹೂ ಬಿಡುವ ವಿವಿಧ ವರ್ಣಗಳ ಪಾಯಿನ್ ಸಿಟಿಯಾ, ಗ್ಲಾಕ್ಸಿನಿಯಾ, ಸೇವಂತಿಗೆ, ಡಾರ್ಕ್ ಇಕ್ಸೋರಾ, ಪೆರಿನಿಯಲ್ ಸನ್ ಫ್ಲವರ್, ಆಂಥೋರಿಯಂ, ಸಿಂಬಿಡಿಯಂ ಆಕ್ಸಿಡ್, ಡೇಲಿಯಾ, ದಾಸವಾಳ  ಸೇರಿದಂತೆ ನಾನಾ ಬಗೆಯ ಹೂಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದರ ಸಂಪೂರ್ಣ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಂದೇಶಗಳನ್ನು ಪ್ರದರ್ಶಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಸಂಪೂರ್ಣ ಇತಿಹಾಸ ಹಿಂದೂ ಧರ್ಮದ ಪ್ರಚಾರವನ್ನು ಫಲಪುಷ್ಪ ಪ್ರದರ್ಶನದ ಮೂಲಕ ಅನಾವರಣಗೊಳಿಸಲಾಗುತ್ತಿದೆ.

ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 1.9 ಕೋಟಿ ರೂ. ವೆಚ್ಚಮಾಡಲಾಗುತ್ತಿದ್ದು, ಊಟಿ, ಡಾರ್ಜಿಲಿಂಗ್ ಮತ್ತು ಕೇರಳ ರಾಜ್ಯಗಳಿಂದ ಸುಮಾರು 6 ಲಕ್ಷಕ್ಕೂ ಹೆಚ್ಚು ಗುಲಾಬಿ ಹೂವುಗಳನ್ನು ತರಿಸಿಕೊಳ್ಳಲಾಗಿದೆ. ಸ್ವಾಮಿ ವಿವೇಕಾನಂದರು ಉಲ್ಲೇಖಿಸಿರುವ ನೀತಿ ಕಥೆಗಳ ದೃಶ್ಯ, ಪ್ರಾತ್ಯಕ್ಷಿಕೆ, ವಿವೇಕಾನಂದರ ಘೋಷಣೆ, ಸೂಕ್ತಿಗಳು, ವಿವೇಕಾ ವೃಕ್ಷ, ಪಂಚವಟಿಯಲ್ಲಿ ರಾಮಕೃಷ್ಣ ಪರಮಹಂಸರು, ವಿವೇಕಾನಂದರು ಶಿಷ್ಯಂದಿರಿಗೆ ಉಪದೇಶ ಮಾಡುತ್ತಿದ್ದ ಸನ್ನಿವೇಶವನ್ನು ಹೂಗಳ ಮೂಲಕ ಮರು ಸೃಷ್ಟಿಸಲಾಗಿದೆ ಎಂದು ಹೇಳಿದರು.

ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 40 ಸಾವಿರ ಜಾತಿಯ ಹೂವುಗಳನ್ನು ಬಳಕೆ ಮಾಡಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ವಯಸ್ಕರಿಗೆ 70 ರೂ. ಹಾಗೂ 12 ವರ್ಷದೊಳಗಿನ ಮಕ್ಕಳಿಗೆ 20 ರೂ.ಗಳನ್ನು ನಿಗದಿಪಡಿಸಲಾಗಿದೆ. ಫಲಪುಷ್ಪ ಪ್ರದರ್ಶನ ನಿರ್ಮಾಣದಲ್ಲಿ ಈ ಬಾರಿ ಗಾಜಿನ ಮನೆಯಲ್ಲಿ 475 ಮಂದಿ ಕಾರ್ಯ ನಿರ್ವಹಿಸಿದ್ದಾರೆ ಎಂದು ವಿವರಿಸಿದರು. 

ಫಲಪುಷ್ಪ ಪ್ರದರ್ಶನದ ಅಂಗವಾಗಿ ಜ.16 ರಂದು ಡಾ.ಎಚ್.ಎಂ ಮರೀಗೌಡ ಸ್ಮಾರಕ ಭವನದಲ್ಲಿ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನದ ಅಂಗವಾಗಿ 1ನೇ ತರಗತಿಯಿಂದ 10ನೇ ತರಗತಿ ವರೆಗೆ 1300 ಮಕ್ಕಳಿಗೆ ಮಾಧ್ಯಮಿಕ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರದರ್ಶನಕ್ಕೆ ಪೊಲೀಸ್ ಕಣ್ಗಾವಲು ಹಾಕಿದ್ದು, ಲಾಲ್ ಬಾಗ್ ಸುತ್ತ ಮುತ್ತ 108 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಹಾಗೂ ಲಾಲ್ ಬಾಗ್ ನ 60 ಜನ ಭದ್ರತಾ ಸಿಬ್ಬಂದಿ ಸೇರಿದಂತೆ ಭಾಷ್ ಮತ್ತು ಹಸಿರು ದಳದಿಂದ ಉದ್ಯಾನವನದ ಸುತ್ತಮುತ್ತ ಬಿಗಿ ಬಂದೋಬಸ್ತ್ ಅಳವಡಿಸಲಾಗಿದೆ ಎಂದರು.
 
ಪ್ರದರ್ಶನದ ಉದ್ಘಾಟನಾ ದಿನದಂದು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ, ವಸತಿ ಸಚಿವ ವಿ.ಸೋಮಣ್ಣ, ಶಾಸಕರಾದ ಉದಯ್ ಗರುಡಾಚಾರ್, ಬಿಬಿಎಂಪಿ ಮೇಯರ್ ಗೌತಮ್,  ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 5 ರಿಂದ 6 ಲಕ್ಷ ವೀಕ್ಷಕರು ಆಗಮಿಸುವ ನಿರೀಕ್ಷೆ ಇದೆ ಎಂದು ನಿರ್ದೇಶಕರು ತಿಳಿಸಿದರು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp