ಸಂಚಾರ ನಿಯಮ ಪಾಲನೆ ನಮ್ಮ ಸಂಸ್ಕೃತಿ, ಜೀವನವಿಧಾನವಾಗಲಿ: ಬಿ.ಎಸ್.ಯಡಿಯೂರಪ್ಪ

ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದರಿಂದ ಅಪಘಾತಗಳು ಕೂಡ ಹೆಚ್ಚಾಗಿವೆ. ಆದ್ದರಿಂದ ಸಂಚಾರ ನಿಯಮಗಳ ಕಡ್ಡಾಯ ಪಾಲನೆಯಾಗಬೇಕು. ಸಂಚಾರ ನಿಯಮಗಳು ನಮ್ಮ ಸಂಸ್ಕೃತಿ ಮತ್ತು ಜೀವನವಿಧಾನವಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

Published: 14th January 2020 03:36 PM  |   Last Updated: 14th January 2020 03:36 PM   |  A+A-


ಮುಖ್ಯಮಂತ್ರಿ ಯಡಿಯೂರಪ್ಪ ವರು, ಸಾರಿಗೆ ಇಲಾಖೆ ಹಾಗೂ ಸಂಚಾರಿ ಪೊಲೀಸ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಉದ್ಘಾಟಿಸಿದರು.

Posted By : Raghavendra Adiga
Source : UNI

ಬೆಂಗಳೂರು: ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದರಿಂದ ಅಪಘಾತಗಳು ಕೂಡ ಹೆಚ್ಚಾಗಿವೆ. ಆದ್ದರಿಂದ ಸಂಚಾರ ನಿಯಮಗಳ ಕಡ್ಡಾಯ ಪಾಲನೆಯಾಗಬೇಕು. ಸಂಚಾರ ನಿಯಮಗಳು ನಮ್ಮ ಸಂಸ್ಕೃತಿ ಮತ್ತು ಜೀವನವಿಧಾನವಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ನಗರದ ಕಂಠೀರವ ಕ್ರೀಡಾಂಗಣದಲ್ಲಿಂದು ಏರ್ಪಡಿಸಿದ್ದ 31ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2020 ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಪ್ರತಿ ವರ್ಷ ಒಂದೂವರೆ ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ವರ್ಷಕ್ಕೆ 10,317 ಮಂದಿ ಸಾವನ್ನಪ್ಪಿ, 49,571 ಮಂದಿ ಗಾಯಗೊಳ್ಳುತ್ತಿದ್ದಾರೆ. ಇದು ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು, ಇದನ್ನು ಸಂಚಾರ ನಿಯಮಗಳ ಕಡ್ಡಾಯ ಪಾಲನೆ, ತಂತ್ರಜ್ಞಾನಗಳ ಅಳವಡಿಕೆ ಮೂಲಕ ಕಡಿಮೆ ಮಾಡಬಹುದು. ಸಂಚಾರ ನಿಯಮ ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಚಾಲನೆ ವೇಳೆ ಮೊಬೈಲ್ ಬಳಕೆ ಮುಂತಾದ ಪ್ರವೃತ್ತಿಗಳನ್ನು ಬಿಡಬೇಕು. ಇವುಗಳು ಅಪಘಾತಕ್ಕೆ ಕಾರಣವಾಗುತ್ತವೆ ಎಂದು ಯಡಿಯೂರಪ್ಪ ಹೇಳಿದರು.

ಜೀವನೋಪಾಯ ಹುಡುಕಿ ಬೆಂಗಳೂರಿಗೆ ವಿವಿಧ ಕಡೆಗಳಿಂದ ಜನರು ಬರುತ್ತಿರುವುದರಿಂದ ಇಲ್ಲಿನ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಬೇಕು ಎಂದು ಮನವಿ ಮಾಡಿದ ಅವರು, ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬ ಗಾದೆಯಂತೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿದರೆ ಭವಿಷ್ಯದಲ್ಲಿ ಅವರು ಸಂಚಾರ ನಿಯಮ ಪಾಲಿಸುವವರಾಗುತ್ತಾರೆ. ಮಾತ್ರವಲ್ಲ ಅವರು ತಮ್ಮ ಪೋಷಕರಿಗೂ ತಿಳಿಹೇಳುತ್ತಾರೆ. ಆದ್ದರಿಂದ ಇಂದಿನ ಕಾರ್ಯಕ್ರಮದಲ್ಲಿ 30 ಸಾವಿರ ಮಕ್ಕಳನ್ನು ಇಲ್ಲಿಗೆ ಕರೆಸಲಾಗಿದೆ. ಇದೇ ರೀತಿಯ ಕಾರ್ಯಕ್ರಮ ರಾಜ್ಯದ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿಯೂ ನಡೆಯುತ್ತಿವೆ ಎಂದು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ವರ್ಷ ಪೂರ್ತಿ ನಡೆಸಲು ಉದ್ದೇಶಿಸಲಾಗಿದೆ. ತಿಂಗಳಲ್ಲಿ ಒಂದು ವಾರ ಕಾಲ, ಪ್ರತಿ ಶಾಲೆ, ಮೊಹಲ್ಲಾ, ಏರಿಯಾ ಸೇರಿ ಬೇರೆ ಬೇರೆ ಪ್ರದೇಶಗಳಲ್ಲಿ ನಿರಂತರವಾಗಿ ಈ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಅಪಘಾತ ಸಾವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿಗೆ ರಾಜ್ಯ ಸರ್ಕಾರ 88 ಹೆಚ್ಚುವರಿ ಹೆದ್ದಾರಿ ಪೆಟ್ರೋಲಿಂಗ್ ವಾಹನವನ್ನು ಒದಗಿಸಿದೆ. ಇದಕ್ಕೂಮೊದಲು 180 ಇಂತಹ ವಾಹನಗಳು ಕಾರ್ಯನಿರ್ವಹಿಸುತ್ತಿದ್ದವು. ಇದರೊಂದಿಗೆ ಆಂಬುಲೆನ್ಸ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಪಘಾತ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಈ ವರ್ಷದ ಕಾರ್ಯಕ್ರಮದ ಧ್ಯೇಯವಾಕ್ಯ "ಯುವಶಕ್ತಿಯಿಂದಲೇ ಬದಲಾವಣೆ" ಎಂಬುದಾಗಿದೆ. ಮುಂದಿನ ಯುವ ಪೀಳಿಗೆಯನ್ನು ಗುರಿಯಾಗಿಟ್ಟು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಸಂಚಾರ ನಿಯಮ ಪಾಲನೆ ಪ್ರತಿಯೊಬ್ಬರ ಕರ್ತವ್ಯ. ವಾಹನ ಚಲಾಯಿಸುವವನು ಅವರ ಜೀವ ಮಾತ್ರವಲ್ಲ ಇತರರ ಜೀವವನ್ನೂ ರಕ್ಷಿಸಬೇಕಾಗಿದೆ. ಆದ್ದರಿಂದ ಸಂಚಾರ ನಿಯಮ ಪಾಲನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಇದೇ ವೇಳೆ ಬೆಂಗಳೂರು ಸಂಚಾರ ಪೊಲೀಸರ ಸಾಧನೆಗಳ ಕೈಪಿಡಿ,ರಸ್ತೆ ಸುರಕ್ಷತೆ ತಿಳುವಳಿಕೆ ಕೈಪಿಡಿ, ಸಾರಿಗೆ ಇಲಾಖೆಯ ಕೈಪಿಡಿ, ರಸ್ತೆ ಸುರಕ್ಷತೆ ಜಾಗೃತಿ ಕೈಪಿಡಿ "ಮೊಳಕೆಯಲ್ಲೇ ತಿದ್ದಿರಿ" ಬಿಡುಗಡೆ ಮಾಡಲಾಯಿತು.
ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಂಚಾರ ವಿಆಭಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು ಬಳಿಕ ರಸ್ತೆ ಸುರಕ್ಷತೆ ಬಗ್ಗೆ ಏರ್ಪಡಿಸಿದ್ದ ವಸ್ತುಪ್ರದರ್ಶನವನ್ನು ಮುಖ್ಯಮಂತ್ರಿ ಉದ್ಘಾಟಿಸಿದರು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp