ಗೊಡ್ಡು ಬೆದರಿಕೆ ಹಾಕುವುದು ನಾಚಿಕೆಗೇಡು: ಯತ್ನಾಳ್; ಕ್ಷಮೆ ಕೋರಿದ ಸ್ವಾಮೀಜಿ

ಸಿಎಂಗೆ ಗೊಡ್ಡು ಬೆದರಿಕೆ ಹಾಕುವುದನ್ನು ಸ್ವಾಮೀಜಿ ನಿಲ್ಲಿಸಬೇಕು, ಈ ರೀತಿ ಮಾಡುವುದು ಸಮುದಾಯಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮುಖ್ಯಮಂತ್ರಿಗೆ ಶ್ರೀಗಳ ಬೆದರಿಕೆ
ಮುಖ್ಯಮಂತ್ರಿಗೆ ಶ್ರೀಗಳ ಬೆದರಿಕೆ

ಬಾಗಲಕೋಟೆ:  ಸಿಎಂಗೆ ಗೊಡ್ಡು ಬೆದರಿಕೆ ಹಾಕುವುದನ್ನು ಸ್ವಾಮೀಜಿ ನಿಲ್ಲಿಸಬೇಕು, ಈ ರೀತಿ ಮಾಡುವುದು ಸಮುದಾಯಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಹರಿಹರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮತ್ತು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಮಾತಿನ ಚಕಮಕಿ ಬಗ್ಗೆ ಮಾತನಾಡಿರುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸ್ವಾಮೀಜಿಗಳಿಗೆ ಬೇಕಾದ್ದನ್ನೆಲ್ಲಾ ಮಾತನಾಡಲು ಜನರಲ್ ಪವರ್ ಆಫ್ ಅಟಾರ್ನಿ ಕೊಟ್ಟಿಲ್ಲ. ಒಬ್ಬ ಮಠಾಧೀಶರಾಗಿ ಗೌರವಯುತವಾಗಿ ಇರಬೇಕು,” ಎಂದು ವಚನಾನಂದ ಸ್ವಾಮೀಜಿ ವಿರುದ್ದ ಹರಿಹಾಯ್ದರು. ಮುಖ್ಯಮಂತ್ರಿ ಅಂದ್ರೆ ರಾಜ‌ ಇದ್ದಂತೆ. ರಾಜನಿಗೆ ಯಾರೂ ಮಠಾಧೀಶರು ಬೆದರಿಕೆ ಹಾಕಬಾರದು ಎಂದರು.

ನಿರಾಣಿಯನ್ನು ಬಿಜೆಪಿಗೆ ತಂದವರು ನಾನು ಹಾಗೂ ಶ್ರೀಕಾಂತ ಕುಲಕರ್ಣಿ. ಅವರನ್ನು ಬೃಹತ್ ಕೈಗಾರಿಕೆ ಮಂತ್ರಿ ಮಾಡಿದ್ದು ಯಡಿಯೂರಪ್ಪ. ಅದು ನೆನಪಲ್ಲಿ ಇರಬೇಕು ಎಂದು ನಿರಾಣಿ ವಿರುದ್ಧವೂ ಹರಿಹಾಯ್ದರು.

ನಿನ್ನೆ ಸ್ವಾಮೀಜಿ ಜೊತೆ ಸೇರಿ ನಿರಾಣಿ ಅವರು ಮಾಡಿದ್ದನ್ನು ನಮ್ಮ ಸಮಾಜ ಒಪ್ಪುವುದಿಲ್ಲ. ನಿರಾಣಿ‌ ಅವರು ಎಲ್ಲಿ (ಯಾವ ಪೀಠದಲ್ಲಿ) ಜೋರಾಗುತ್ತೋ ಅಲ್ಲಿ ಹೊಂದಾಣಿಕೆ ಮಾಡುತ್ತಾರೆ. 

ನಿರಾಣಿ ಅವರು ಎರಡು ಪೀಠಗಳನ್ನು ಹೊಂದಿಸಿಕೊಂಡು ಹೋಗುತ್ತಿದ್ದಾರೆ. ಕೂಡಲಸಂಗಮದಲ್ಲಿ ಅಣ್ಣ-ತಮ್ಮ, ಹರಿಹರದಲ್ಲಿ ನಿರಾಣಿ ಮೆಂಟೇನ್‌ ಮಾಡುತ್ತಿದ್ದಾರೆ. ನಾವು ಉಳಿದ ಶಾಸಕರೇನು ಕತ್ತೆ ಕಾಯ್ತಿದ್ದೇವಾ? ಎಲ್ಲವೂ ಅವರ (ನಿರಾಣಿ) ಮನೆಗೇ ಬೇಕಾ? ಎಂಎಲ್‌ಎ, ಎಂ‌ಎಲ್‌ಸಿ, ಎಂಪಿ, ರಾಜ್ಯಸಭಾ ಎಲ್ಲಾ ಅವರ ಮನೆಯಲ್ಲಿನ‌ ಬೆಕ್ಕು, ನಾಯಿಗೆ, ಅವರಿಗೇ ಬೇಕು,” ಎಂದು ಕಿಡಿಕಾರಿದರು. 

ನಾನು ನಿನ್ನೆ ಅಥವಾ ಇವತ್ತು ಆಡಿದ ಮಾತುಗಳಲ್ಲಿ ತಪ್ಪಿದ್ದರೆ, ನಿಮ್ಮ ಮಗ ಆಡಿದ ಮಾತು ಎಂದು ಹೊಟ್ಟೆಗೆ ಹಾಕಿಕೊಳ್ಳಿ’ ಎಂದು ಹೇಳುವ ಮೂಲಕ ವಚನಾನಂದ ಸ್ವಾಮೀಜಿ ಬುಧವಾರ ಪರೋಕ್ಷವಾಗಿ ಕ್ಷಮೆಯಾಚಿಸಿದರು.

ಹರಜಾತ್ರೆಯ ಎರಡನೇ ದಿನ ಬುಧವಾರ ನಡೆದ ಮಹಿಳಾ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಂಗಳವಾರ ’ಪಂಚಮಸಾಲಿಯ ಮೂವರನ್ನು ಸಚಿವರನ್ನಾಗಿ ಮಾಡದೇ ಇದ್ದರೆ ಸಮುದಾಯವೇ ಕೈಬಿಡಲಿದೆ' ಎಂದು ಬೆದರಿಕೆಯ ಧಾಟಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಎಚ್ಚರಿಸಿದ್ದರು. ಆಗ ಮುಖ್ಯಮಂತ್ರಿ ಅಸಮಾಧಾನಗೊಂಡು ಸಮಾರಂಭದ ನಡುವೆಯೇ ಹೊರಡಲು ಅನುವಾಗಿದ್ದರು.

ಆಮೇಲೆ ಅವರು ಭಾವುಕರಾಗಿ ಮಾತನಾಡಿ, ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು. ಈ ಕುರಿತು ಅನೇಕ ರಾಜಕಾರಣಿಗಳು, ಸ್ವಾಮೀಜಿಗಳು ವಚನಾನಂದಶ್ರೀ ನಡೆಯನ್ನು ಖಂಡಿಸಿದರು. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಕ್ಷಮೆ ಕೋರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com