ಜನಪ್ರತಿನಿಧಿಗಳ ಇಚ್ಛಾಶಕ್ತಿ ಫಲ: ಬದಲಾವಣೆ ಹಾದಿಯತ್ತ ಬಾಗಲಕೋಟೆ

ಜನಪ್ರತಿನಿಧಿಗಳ ಇಚ್ಛಾಶಕ್ತಿ ಫಲ: ಬದಲಾವಣೆ ಹಾದಿಯತ್ತ ಬಾಗಲಕೋಟೆ
ಜನಪ್ರತಿನಿಧಿಗಳ ಇಚ್ಛಾಶಕ್ತಿ ಫಲ: ಬದಲಾವಣೆ ಹಾದಿಯತ್ತ ಬಾಗಲಕೋಟೆ

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆ ಹೊಂದಿ ಭಾಗಶಃ ಉಳಿದುಕೊಂಡಿರುವ ಬಾಗಲಕೋಟೆ ಸಂಪೂರ್ಣ ಸ್ಥಳಾಂತರಗೊಳ್ಳಬೇಕು ಎನ್ನುವ ಕೂಗಿನ ಮಧ್ಯೆ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಬದಲಾವಣೆಗೆ ಸಜ್ಜಾಗುತ್ತಿದೆ.

ನಗರಸಭೆ ಮಹಾ ನಗರ ಪಾಲಿಕೆಯಾಗಿ, ನಗರ ಯೋಜನಾ ಪ್ರಾಧಿಕಾರ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರವಾಗಿ ಮತ್ತು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಇನ್ನು ಮುಂದೆ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಸೇರದಬೇಕು ಎನ್ನುವ ಕುರಿತಂತೆ ಉಪಮುಖ್ಯಮಂತ್ರಿ ಗೋವಿಂದ ಕಾಜರಜೋಳರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆ ಮತ್ತು ಬಾಗಲಕೋಟೆ ನಗರಾಭಿವೃದ್ಧಿ ಸಭೆಗಳು ಸುದೀರ್ಘ ಚರ್ಚಿಸಿ ಈ ನಿರ್ಧಾರಗಳನ್ನು ಕೈಗೊಂಡಿವೆ.

ಇಲಾಖೆ ಬದಲಾವಣೆ :
ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು, ಸ್ಥಳಾಂತರ ಪುನರ್ ವಸತಿ, ಭೂಸ್ವಾದೀನ, ಅಗತ್ಯ ಮೂಲ ಸೌಕರ್ಯ ಕಲ್ಪಿಸಲೆಂದೇ ಇರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನಿರ್ವಹಣೆ ಇಲಾಖೆ ಬದಲಾಗುತ್ತಿದೆ. 

ಕಂದಾಯ ಇಲಾಖೆಯ ಅಧೀನದಲ್ಲಿ ಬಿಟಿಡಿಗೆ ಹೆಚ್ಚಿನ ಸಂಪನ್ಮೂಲ ನಿರೀಕ್ಷೆಯೊಂದಿಗೆ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರ ಸಜ್ಜಾಗಿದೆ. ಸರ್ಕಾರದ ತಾಂತ್ರಿಕ ಒಪ್ಪಿಗೆ ಮಾತ್ರ ಬಾಕಿ ಇದೆ.
ಬಿಟಿಡಿಎ ಸ್ವಾಯತ್ತ ಸಂಸ್ಥೆ ಆಗಿದ್ದು, ಇದಕ್ಕೊಂದು ಆಡಳಿತ ಮಂಡಳಿ ಇದೆ. ಆಡಳಿತ ನಿರ್ವಹಣೆ ಪ್ರತ್ಯೇಕ ಕಚೇರಿ ಮತ್ತು ಸಿಬ್ಬಂದಿ ಇದೆ. ಈಗಾಗಲೇ ಎರಡು ನವನಗರ ಪುನರ್ ವಸತಿ ಕೇಂದ್ರಗಳನ್ನು ನಿರ್ಮಿಸುವ ಮೂಲಕ ಮುಳುಗಡೆ ಸಂತ್ರಸ್ತರನ್ನು ಸ್ಥಳಾಂರಿಸಲು ಸಕಲ ವ್ಯವಸ್ಥೆ ಮಾಡಿರುವ ಬಿಟಿಡಿಎದಿಂದ ಇಂದಿಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಮತ್ತು ಸಮರ್ಪಕ ನಿರ್ವಹಣೆಯಲ್ಲಿ ಸಮಾಧಾನಕರ ಕೆಲಸ ಆಗುತ್ತಿಲ್ಲ. ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಒಳ ಪಟ್ಟ ಮೇಲಾದರೂ ಇದರ ಕಾರ್ಯನಿರ್ವಹಣೆ ಬದಲಾಗಬೇಕಿದೆ. ಮುಳುಗಡೆ ಸಂತ್ರಸ್ತರು ಸಮಸ್ಯೆಗಳ ಪರಿಹಾರಕ್ಕಾಗಿ ಅಲೆಯುವುದನ್ನು ತಪ್ಪಿಸುವ ಕೆಲಸ ಆಗಬೇಕಿದೆ.

ಮಹಾನಗರ ಪಾಲಿಕೆ:
ಜಿಲ್ಲಾ ಕೇಂದ್ರವಾಗಿರುವ ಬಾಗಲಕೋಟೆ ನಗರ ಸದ್ಯದ ಜನಸಂಖ್ಯೆಗೆ ಅನುಸಾರವಾಗಿ ನಗರಸಭೆಯನ್ನು ಹೊಂದಿದೆ. ಜಿಲ್ಲಾ ಕೇಂದ್ರವಾಗಿರುವ ಬಾಗಲಕೋಟೆ ನಗರದ ಅಭಿವೃದ್ಧಿ ವೇಗವನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ಇಲ್ಲಿಯ ಜನಪ್ರತಿನಿಧಿಗಳು ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. 

ಈ ಕುರಿತಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಿದೆ. ನಗರಸಭೆ ಮಹಾನಗರ ಪಾಲಿಕೆ ಆಗಲು ನವನಗರದ ಎರಡು(ಯುನಿಟ್ -1 ಮತ್ತು 2) ಪುನರ್‌ವಸತಿ ಕೇಂದ್ರಗಳು ಸೇರಿದಂತೆ ನಗರ ಹೊರವಲಯದಲ್ಲಿನ ಗ್ರಾಮಗಳನ್ನು ಸೇರಿಸಿಕೊಳ್ಳಬೇಕಿದೆ. ಪಾಲಿಕೆ ವ್ಯಾಪ್ತಿಗೆ ಬರುವ ಗ್ರಾಮಗಳು ಗ್ರಾಮ ಪಂಚಾಯಿತಿ ವ್ಯವಸ್ಥೆಯ ಅಸ್ತಿತ್ವ ಕಳೆದುಕೊಳ್ಳಲಿವೆ. ಇದು ಸ್ವಲ್ಪ ಕಷ್ಟದ ಕೆಲಸವಾಗಿದ್ದರೂ ಜನಪ್ರತಿನಿಧಿಗಳು ಸುತ್ತಲಿನ ಗ್ರಾಮಗಳ ಗ್ರಾಮಸ್ಥರ ಮನವೊಲಿಕೆ ಮಾಡಿ ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳುವ ಕೆಲಸ ಆಗಬೇಕಿದೆ. ಇಂದಿನ ಆಡಳಿತ ವ್ಯವಸ್ಥೆಯಲ್ಲಿ ಜನ ಗ್ರಾಪಂ ವ್ಯವಸ್ಥೆಯಿಂದ ಹೊರ ಬರುವುದು ಅಂದುಕೊಂಡಷ್ಟು ಸುಲಭವಲ್ಲ. 

ರಾಜಕೀಯ ಅಧಿಕಾರ ಮತ್ತು ತೆರಿಗೆ ವ್ಯವಸ್ಥೆಯ ನೆಪ ಮುಂದು ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಜನಪ್ರತಿನಿಧಿಗಳ ಪಾಲಿಗೆ ಜನರ ಮನವೊಲಿಕೆಯೊಂದು ಸವಾಲಿನ ಪ್ರಶ್ನೆಯೆ ಸರಿ. ಜನಪ್ರತಿನಿಧಿಗಳು ಇಚ್ಛಾಶಕ್ತಿ ಮೆರೆದಲ್ಲಿ ಅದೇನೂ ಅಂತಹ ಕಷ್ಟದ ಕೆಲಸವೂ ಅಲ್ಲ. ಒಂದೊಮ್ಮೆ ನಗರಪಾಲಿಕೆ ಮಹಾ ನಗರ ಪಾಲಿಕೆಯಾಗಿ ಮಾರ್ಪಟ್ಟಿ ಅಭಿವೃದ್ಧಿ ವೇಗ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿದೆ.

ಪ್ರಾಧಿಕಾರ ರಚನೆ:
ಬಾಗಲಕೋಟೆ ನಗರ ಯೋಜನಾ ಪ್ರಾಧಿಕಾರವನ್ನು ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರವನ್ನಾಗಿ ಮಾರ್ಪಡಿಸುವುದರಿಂದ ಬಾಗಲಕೋಟೆ ಅಭಿವೃದ್ಧಿಯ ಹೆಬ್ಬಾಗಿಲು ತೆರೆದಂತೆ ಆಗಲಿದೆ. ನಗರದ ಸುತ್ತಲೂ ಹೊಸ ಬಡಾವಣೆಗಳ ನಿರ್ಮಾಣ ಸಾಧ್ಯವಾಗಲಿದೆ. ಸಂತ್ರಸ್ತರಲ್ಲದವರ ಪಾಲಿಗೆ ಸಾಕಷ್ಟು ಅನುಕೂಲವಾಗಲಿದೆ. ಪ್ರಾಧಿಕಾರದಿಂದ ನಗರ ಬೆಳವಣಿಗೆ ಸಾಧ್ಯವಾಗಲಿದೆ. ಜನ ಸಾಮಾನ್ಯರ ಬದುಕಿಗೆ ಹೊಸ ದಿಕ್ಕನ್ನು ತೋರಿಸಿದಂತಾಗಲಿದೆ. 

ಜನಸಾಮಾನ್ಯರು ಸ್ವಂತ ಮನೆಗಳ ಕನಸು ನನಸಾಗಲು ಸಾಧ್ಯವಾಗಲಿದೆ. ಇದೊಂದು ಮಹತ್ತರ ಕಾರ್ಯವಾಗಿರುವುದರಿಂದ ಬಾಗಕೋಟೆ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಾಧಿಕಾರ ರಚನೆ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕೈಗೊಂಡಿರುವ ನಿರ್ಧಾರ ಈಗಾಗಲೇ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ.

ಸ್ಥಳೀಯ ಜನಪ್ರತಿನಿಧಿಗಳು ಬಾಗಲಕೋಟೆ ಬದಲಾವಣೆಗೆ ಮನಸ್ಸು ಮಾಡಿದ್ದು, ಆ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೊಳರು ರಾಜಧಾನಿ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದ್ದಾರೆ. ಏತನ್ಮಧ್ಯೆ ಎದುರಾಗಲಿರುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊAಡಲ್ಲಿ  ನಗರಪಾಲಿಕೆ ಮಹಾನಗರ ಪಾಲಿಕೆ, ನಗರ ಯೋಜನಾ ಪ್ರಾಧಿಕಾರ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರವಾಗುವ ದಿನಗಳು ದೂರೆನಿಲ್ಲ ಎನ್ನುವ ಆಶಯ ಜನತೆಯಲ್ಲಿ ಮೂಡಿದೆ. ಆಶಯ ಸಾಕಾರಗೊಳ್ಳಲು ಜನಪ್ರತಿನಿಧಿಗಳ ನಿರಂತರ ಪ್ರಯತ್ನ ಬೇಕಷ್ಟೆ !

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com