ಪೌರತ್ವ ಕಾಯ್ದೆಯನ್ನು ಸಂಪೂರ್ಣ ಓದಿ ಚರ್ಚೆಗೆ ಬನ್ನಿ: ರಾಹುಲ್ ಗೆ ಅಮಿತ್ ಶಾ ಸವಾಲು

 ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾರದೇ ನಾಗರೀಕತೆ ಕಿತ್ತುಕೊಳ್ಳುವ ಪ್ರಸ್ತಾಪವಿಲ್ಲ ಎಂದು ಮತ್ತೊಮ್ಮೆ ಪ್ರತಿಪಾದಿಸಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಹುಲ್ ಗಾಂಧಿ ಒಮ್ಮೆ ಕಾಯ್ದೆಯನ್ನು ಪೂರ್ತಿಯಾಗಿ ಓದಲಿ ಎಂದು ಸವಾಲು ಹಾಕಿದ್ದಾರೆ. 
ಪೌರತ್ವ ಕಾಯ್ದೆಯನ್ನು ಸಂಪೂರ್ಣ ಓದಿ ಚರ್ಚೆಗೆ ಬನ್ನಿ: ರಾಹುಲ್ ಗೆ ಅಮಿತ್ ಶಾ ಸವಾಲು
ಪೌರತ್ವ ಕಾಯ್ದೆಯನ್ನು ಸಂಪೂರ್ಣ ಓದಿ ಚರ್ಚೆಗೆ ಬನ್ನಿ: ರಾಹುಲ್ ಗೆ ಅಮಿತ್ ಶಾ ಸವಾಲು

ಹುಬ್ಬಳ್ಳಿ:  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾರದೇ ನಾಗರೀಕತೆ ಕಿತ್ತುಕೊಳ್ಳುವ ಪ್ರಸ್ತಾಪವಿಲ್ಲ ಎಂದು ಮತ್ತೊಮ್ಮೆ ಪ್ರತಿಪಾದಿಸಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಹುಲ್ ಗಾಂಧಿ ಒಮ್ಮೆ ಕಾಯ್ದೆಯನ್ನು ಪೂರ್ತಿಯಾಗಿ ಓದಲಿ ಎಂದು ಸವಾಲು ಹಾಕಿದ್ದಾರೆ. 
  
ಹುಬ್ಬಳ್ಳಿಯಲ್ಲಿ ಬಿಜೆಪಿ ಆಯೋಜಿಸಿರುವ ಸಿಎಎ ಪರ ಜನಜಾಗೃತಿ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿದ ಅವರು,  ಸಿಎಎ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ನಾನೊಂದು ಬಹಿರಂಗ ಸವಾಲು ಹಾಕುತ್ತಿದ್ದೇನೆ. ಅವರು ಪೌರತ್ವ ಕಾಯ್ದೆಯನ್ನು ಸಂಪೂರ್ಣವಾಗಿ ಓದಲಿ. ಅದಲ್ಲಿ ಯಾವುದಾದರೊಂದು ಸಾಲುಗಳಲ್ಲಾದರೂ ದೇಶದ ಜನರ ನಾಗರಿಕತೆ ಕಿತ್ತುಕೊಳ್ಳುವ ಪ್ರಸ್ತಾಪವಿದ್ದರೆ, ಸ್ಥಳ ಹಾಗೂ ಸಮಯ ನಿಗದಿಪಡಿಸಲಿ. ಕೇಂದ್ರ ಕಾನೂನು ಸಚಿವ ಪ್ರಹ್ಲಾದ್ ಜೋಷಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಗುಡುಗಿದ್ದಾರೆ.  
  
ಸಿಎಎ ಯಾರದೇ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಬದಲಿಗೆ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿ ಭಾರತಕ್ಕೆ ಶರಣು ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತದೆ.  ಧಾರ್ಮಿಕ ಅಲ್ಪಸಂಖ್ಯಾತರಿಗೆ ಭರವಸೆ ನೀಡುವ ಕುರಿತು ಪ್ರಪ್ರಥಮ ಬಾರಿಗೆ ಪಾಕಿಸ್ತಾನದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ  ಮಾಜಿ ಪ್ರಧಾನಿ ಜವಹರ್ ಲಾಲು ಅವರು ಎಂಬುದನ್ನು ರಾಹುಲ್ ಗಾಂಧಿ ಮರೆಯುತ್ತಿರುವುದೇಕೆ ಎಂದರು. 
  
ದೇಶದ ಮೊದಲ ಗೃಹ ಮಂತ್ರಿ ಸರ್ದಾರ್ ಪಟೇಲ್ , ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಕೂಡ ಇದೇ ಭರವಸೆ ನೀಡಿದ್ದರು. ಇವರೆಲ್ಲರೂ ಕಾಂಗ್ರೆಸ್ಸಿಗರೇ. ಇಷ್ಟು ವರ್ಷ ಅಧಿಕಾರದಲ್ಲಿದ್ದರೂ, ತಮ್ಮದೇ ನಾಯಕನ ಮಾತನ್ನು ಪಾಲಿಸಲು ಕಾಂಗ್ರೆಸ್ ಗೆ ಸಾಧ್ಯವಾಗಲಿಲ್ಲ. ಬಿಜೆಪಿ ಆ ಕೆಲಸವನ್ನು ಮಾಡಿದೆ ಎಂದು ಟೀಕಿಸಿದರು. 
  
ಅಷ್ಟೇಕೆ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕೂಡ ಎರಡೂ ದೇಶಗಳಲ್ಲಿ ಜನರು ಧರ್ಮದಿಂದ ಅಭದ್ರತೆ ಅನುಭವಿಸಿದರೆ ಅವರಿಗೆ ರಕ್ಷಣೆ ನೀಡುವುದು ಆಯಾ ದೇಶದ ಕರ್ತವ್ಯ ಎಂದು ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಗಾಂಧೀಜಿ ಮಾತಿಗೂ ಬೆಲೆ ಕೊಡುವುದಿಲ್ಲವೇ? ಎಂದು ಕಿಡಿಕಾರಿದರು. 
  
ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ಇದರಿಂದ ಎರಡೂ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಉಳಿದುಕೊಳ್ಳುವಂತಾಯಿತು. ಭಾರತ ಎಂದಿಗೂ ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದವರನ್ನು ತನ್ನ ಬಾಹುಗಳಿಂದ ಬಂಧಿಸಿದೆ. ಆದರೆ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ವಿಭಜನೆಯ ಸಂದರ್ಭದಲ್ಲಿದ್ದ ಶೇ. 30ರಷ್ಟು ಧಾರ್ಮಿಕ ಅಲ್ಪಸಂಖ್ಯಾತರ ಸಂಖ್ಯೆ ಶೇ. 3ಕ್ಕಿಳಿದಿದೆ. ಹಾಗಿದ್ದರೆ ಅವರೆಲ್ಲರೂ ಎಲ್ಲಿಗೆ ಹೋದರು. ಅವರನ್ನು ಹತ್ಯೆ ಮಾಡಲಾಗಿದೆ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಲಾಗಿದೆ. ಇದರಿಂದ ಬೇಸತ್ತ ಜನರು ಭಾರತಕ್ಕೆ ಶರಣು ಬಂದಿದ್ದಾರೆ. ಇದಕ್ಕೆ ಕಾಂಗ್ರೆಸ್ ಬಳಿ ಉತ್ತರವಿದೆಯೇ ಎಂದು ಪ್ರಶ್ನಿಸಿದರು. 
  
ಮಾನವ ಹಕ್ಕು ಕಾರ್ಯಕರ್ತರೇಕೆ ಪ್ರಶ್ನಿಸುತ್ತಿಲ್ಲ?
  
ನೆರೆ ರಾಜ್ಯದಲ್ಲಿ ಇಷ್ಟೆಲ್ಲಾ ಅನ್ಯಾಯ ನಡೆಯುತ್ತಿದ್ದರೂ ಮಾನವ ಹಕ್ಕುಗಳ ಕಾರ್ಯಕರ್ತರು ಏಕೆ ಪ್ರಶ್ನೆ ಎತ್ತಲಿಲ್ಲ. ಅವರ ರಕ್ಷಣೆಗೇಕೆ ಮುಂದಾಗಲಿಲ್ಲ. ಈಗ ಸಿಎಎ ಜಾರಿಗೊಳಿಸುತ್ತಿದ್ದಂತೆ ಅನವಶ್ಯಕ ಕಾರಣಗಳನ್ನು ನೀಡಿ ಹೋರಾಟ ನಡೆಸುತ್ತಿರುವುದೇಕೆ ಎಂದು ಶಾ ಪ್ರಶ್ನಿಸಿದರು. 
  
ಅಫ್ಗಾನಿಸ್ತಾನದ ಸರ್ಕಾರ ಅಲ್ಲಿನ ಬುದ್ಧನ ಪ್ರತಿಮೆ ಧ್ವಂಸಗೊಳಿಸಿದೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ ಶಿಕ್ಷಣ, ಆರೋಗ್ಯ ಮತ್ತು ಮತದಾನದಂತಹ ಮೂಲಭೂತ ಹಕ್ಕುಗಳಿಂದ ವಂಚಿತವಾಗಿಸಿದೆ. ಅಂತಹವರಿಗೆ  ನಾಗರಿಕತೆ ನೀಡುವುದು ತಪ್ಪೇ. ಸಂತ್ರಸ್ತರ ನೆರವಿಗಾಗಿ ಪ್ರಧಾನಿ ಮೋದಿ ಈ ಕಾನೂನು ತಂದಿದ್ದಾರೆ.  ಆದರೆ, ಇದರಿಂದ ಕಾಂಗ್ರೆಸ್, ಕಮ್ಯುನಿಸ್ಟ್, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರೀವಾಲ್, ಜೆಡಿಎಸ್ ನಾಯಕರಿಗೆ ಹೊಟ್ಟೆ ನೋವಾಗುತ್ತಿರುವುದೇಕೆ? ಅವರಿಗೆ ಏನು ತೊಂದರೆಯಾಗಿದೆ ಎಂದು ಪ್ರಶ್ನಿಸಿದರು. 
  
ಇದಕ್ಕೆ ಕಾರಣವೆಂದರೆ ಧಾರ್ಮಿಕ ಅಲ್ಪಸಂಖ್ಯಾತರ ಹೆಸರಿನಲ್ಲಿ ಈ ಪಕ್ಷಗಳು ಮತಬ್ಯಾಂಕ್ ರಾಜಕಾರಣ ನಡೆಸುತ್ತಿದ್ದವು. ಅದಕ್ಕೆ ಈಗ ಕತ್ತರಿ ಬಿದ್ದಿದೆ. ಬಂಗಾಳದಲ್ಲಿರುವ ವಲಸಿಗರಲ್ಲಿ ಶೇ. 70ಕ್ಕಿಂತ ಹೆಚ್ಚಿನವರು ದಲಿತರಾಗಿದ್ದಾರೆ. ಅವರನ್ನು ವಿರೋಧಿಸಿ ನೀವೇನು ಪಡೆಯುತ್ತೀರಿ. ಸಿಎಎ ವಿರೋಧಿಗಳು ದಲಿತ ವಿರೋಧಿಗಳು ಎಂದು ಅಮಿತ್ ಶಾ, ಮುಂಬರುವ ಚುನಾವಣೆಗಳಲ್ಲಿ  ದಲಿತ ಸಮಾಜ, ಬುದ್ಧನ ಪ್ರತಿಮೆಗೆ ಗುಂಡು ಹಾರಿಸಿದವರಿಗೆ ಪ್ರಶ್ನೆ ಕೇಳುತ್ತಾರೆ. ಅದಕ್ಕೇನು ಉತ್ತರ ಹೇಳುತ್ತಾರೆ ಎಂದರು.  
  
ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ. ಕಳೆದ ವರ್ಷ ನಡೆದ ರಾಜಸ್ತಾನ ಮತ್ತಿತರರ ರಾಜ್ಯಗಳ ಚುನಾವಣಾ ಪ್ರಣಾಳಿಕೆಯಲ್ಲಿ ಜೈನರು, ಸಿಖ್ಖರು ಮತ್ತಿತರರ ಧಾರ್ಮಿಕ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಭರವಸೆ ನೀಡಿತ್ತು. ಈಗ ಅದಕ್ಕೆ ವಿರುದ್ಧವಾಗಿ ಮಾತನಾಡುತ್ತಿದೆ. ಸಿಎಎ ಕುರಿತು ರಾಹುಲ್ ಗಾಂಧಿ ಜನರಲ್ಲಿ ಭ್ರಮೆ ಹುಟ್ಟಿಸುತ್ತಿದ್ದಾರೆ. ಆದರೆ, ಜನರು ಅದನ್ನು ನಂಬುತ್ತಾರೆ ಎಂದುಕೊಂಡಿದ್ದಾಋೆ. ಮುಸ್ಲಿಮರನ್ನು ಹೆದರಿಸಿ, ಜನರನ್ನು ಬೀದಿಗಿಳಿಯಲು ಪ್ರೇರೇಪಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಪ್ರತಿಭಟನೆ  ಹಿಂಸಾಚಾರಕ್ಕೆ ತಿರುಗಿದೆ ಎಂದರು. 
  
ಕಾಂಗ್ರೆಸ್ ಜಮ್ಮು ಕಾಶ್ಮೀರದ ಸಿಎಎ ವಿಧಿ ರದ್ದು, ಸಿಎಎ ಜಾರಿ, ತ್ರಿವಳಿ ತಲಾಕ್ ನಂತಹ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸುತ್ತಿದೆ. ಇನ್ನೊಂದೆಡೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಕೂಡ ಇದೇ ಮಾತುಗಳನ್ನು ಹೇಳುತ್ತಿದ್ದಾರೆ. ಇಮ್ರಾನ್ ಖಾನ್ ಹಾಗೂ ಕಾಂಗ್ರೆಸ್ ಗೆ ಏನು ಸಂಬಂಧ ಎಂದು ಅರಿವಾಗುತ್ತಿಲ್ಲ. ಕಾಂಗ್ರೆಸ್ ವಿಶ್ವಸಂಸ್ಥೆ ಮುಂದೆ ದೇಶದ ನೀತಿ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿತ್ತು.  ಇಂತಹ ಕೆಲಸ ಮಾಡಿರುವ ಕಾಂಗ್ರೆಸ್ ನಾಚಿಕೆಯಿಂದ ಕೊರೆಯುವ ತಣ್ಣಗಿನ ನೀರಿನಲ್ಲಿ ಮುಳುಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. 
  
ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಸಂಬಂಧಿಸಿದಂತೆ ಕೇಂದ್ರ ಸುಪ್ರೀಂಕೋರ್ಟ್ ನಲ್ಲಿ ಪ್ರಬಲ ವಾದ ಮಂಡಿಸಿದೆ. ಇದರ ಪರಿಣಾಮವಾಗಿ ಸುಪ್ರೀಂ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದೆ. ಇದಕ್ಕೂ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com