ಅಕ್ರಮ ಗಣಿಗಾರಿಕೆ ವಿರುದ್ಧ ರೈತರಿಂದ ಬಾರುಕೋಲು ಬೀಸಿ ವಿಭಿನ್ನ ಪ್ರತಿಭಟನೆ!

ಅಕ್ರಮ ಕಲ್ಲು ಗಣಿಗಾರಿಕೆ ಜಿಲ್ಲೆಯಾದ್ಯಂತ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಬಾರುಕೋಲು ಚಳುವಳಿ ನಡೆಸಿದರು.
ರೈತರ ಪ್ರತಿಭಟನೆ
ರೈತರ ಪ್ರತಿಭಟನೆ

ಚಾಮರಾಜನಗರ: ಅಕ್ರಮ ಕಲ್ಲು ಗಣಿಗಾರಿಕೆ ಜಿಲ್ಲೆಯಾದ್ಯಂತ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಬಾರುಕೋಲು ಚಳುವಳಿ ನಡೆಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ಮಂದಿ ರೈತರು ಪ್ರವಾಸಿಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟರು. ಹೀಗೆ ಹೊರಟ ಮೆರವಣಿಗೆ ಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತದ ಮೂಲಕ ಸಾಗಿ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿದರು. ಈ ವೇಳೆ ಗಣಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರ್​​​​ಟಿಒ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿಯಾಗಿರುವ ಜಿಲ್ಲೆಯ ಅರಣ್ಯ ಪ್ರದೇಶದಂಚಿನಲ್ಲಿ ಅಕ್ರಮ ಗಣಿಗಾರಿಕೆ, ಸ್ಫೋಟ ನಡೆಯುತ್ತಿದ್ದು ಅರಣ್ಯ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ. ಭಾರೀ ವಾಹನಗಳನ್ನು ಬಳಸಿ ಗ್ರಾಮೀಣ ಭಾಗದ ರಸ್ತೆಗಳನ್ನು ಹಾಳುಗೆಡವಲಾಗುತ್ತಿದೆ. ಪರಿಸರಸೂಕ್ಷ್ಮ ವಲಯದಲ್ಲಿ ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳನ್ನು ಕೈಬಿಡುವ ಮೂಲಕ ಗಣಿಗಾರಿಕೆಗೆ ಸರ್ಕಾರವೇ ಕುಮ್ಮಕ್ಕು ನೀಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಹೆಲ್ಮೆಟ್ ಧರಿಸದ ಸವಾರರನ್ನು ಹಿಡಿದು ದಂಡ ಹಾಕುವ ಪೊಲೀಸರು ಗಣಿಗಾರಿಕೆಯ ಲಾರಿಗಳನ್ನು ಮಾತ್ರ ತಡೆಯುತ್ತಿಲ್ಲ. ಸರ್ಕಾರಕ್ಕೆ ರಾಯಲ್ಟಿಯೂ ಸಿಗುತ್ತಿಲ್ಲ. ರೈತರ ಫಲವತ್ತಾದ ಭೂಮಿಗೂ ಕ್ರಷರ್‌ನಿಂದ ಸಂಚಕಾರ ತಂದಿದ್ದಾರೆ.ಹಾಗಾಗಿ ಈ ಕೂಡಲೇ ಜಿಲ್ಲಾಡಳಿತ ಈ ಕುರಿತು ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com