1.12 ಕೋಟಿ ಅಂಕಪಟ್ಟಿ ಡಿಜಿಟಲ್ ಲಾಕರ್ ನಲ್ಲಿ: ಸುರೇಶ್ ಕುಮಾರ್

ಕಳೆದ 2003 ರಿಂದ 2019ರವರೆಗೆ ಉತ್ತೀರ್ಣರಾದ ಒಟ್ಟು ಸುಮಾರು 1.12 ಕೋಟಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿಲಾಕರ್ ತಂತ್ರಾಂಶದಲ್ಲಿ ಅಳವಡಿಸಿ ಪೋಷಕರು ಮತ್ತು ವಿದ್ಯಾರ್ಥಿಗಳ‌ ಉಪಯೋಗಕ್ಕೆ ಮೊದಲಬಾರಿಗೆ ನೀಡಲಾಗಿದ್ದು,

Published: 20th January 2020 07:52 PM  |   Last Updated: 20th January 2020 07:52 PM   |  A+A-


Suresh kumar

ಸುರೇಶ್ ಕುಮಾರ್

Posted By : Manjula VN
Source : UNI

ಬೆಂಗಳೂರು: ಕಳೆದ 2003 ರಿಂದ 2019ರವರೆಗೆ ಉತ್ತೀರ್ಣರಾದ ಒಟ್ಟು ಸುಮಾರು 1.12 ಕೋಟಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿಲಾಕರ್ ತಂತ್ರಾಂಶದಲ್ಲಿ ಅಳವಡಿಸಿ ಪೋಷಕರು ಮತ್ತು ವಿದ್ಯಾರ್ಥಿಗಳ‌ ಉಪಯೋಗಕ್ಕೆ ಮೊದಲಬಾರಿಗೆ ನೀಡಲಾಗಿದ್ದು, ಸೂಕ್ತ ರೀತಿಯಲ್ಲಿ ಅಪ್ ಡೇಟ್ ಮಾಡಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಎಸ್.ಎಸ್ ಎಲ್ ಸಿ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಾರ್ಚ್ 27 ರಿಂದ ಏಪ್ರಿಲ್  9ರ ವರೆಗೆ ನಡೆಯಲಿರುವ ಎಸ್ ಎಸ್‌ಎಲ್‌ಸಿ ಪರೀಕ್ಷೆಗೆ ಈ ಬಾರಿ 8,47,192 ವಿದ್ಯಾರ್ಥಿಗಳು ಹಾಜರಾಗುತ್ತಿದ್ದು, ಅಂತಿಮ ಪ್ರವೇಶ ಪತ್ರಗಳನ್ನು ಫೆಬ್ರುವರಿ ಎರಡನೇ ವಾರದಲ್ಲಿ ಬಿಡುಗಡೆ ಮಾಡಲಾಗುವುದು. 228 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ನೆರವೇರಿಸಲಾಗುವುದು ಎಂದು ವಿವರಿಸಿದರು.

ಇದೇ ಮೊದಲಬಾರಿಗೆ ಮೌಲ್ಯಮಾಪಕರಿಗೆ ಆನ್ ಲೈನ್ ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ 79,670 ಮೌಲ್ಯಮಾಪಕರು ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಲು ಆಸಕ್ತಿ ತೋರಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. 
ವಲಸೆ ಪ್ರಮಾಣ ಪತ್ರಗಳನ್ನು ಈ ಹಿಂದೆ ಭೌತಿಕವಾಗಿ ಅರ್ಜಿ ಪಡೆದು ಚಲನ್ ಮೂಲಕ ಶುಲ್ಕ ಪಡೆದು ವಿತರಿಸಲಾಗುತ್ತಿತ್ತು. ಈಗ ಅನ್ ಲೈನ್‌ನಲ್ಲಿ ಅರ್ಜಿ ಹಾಗೂ ಶುಲ್ಕ‌ಪಡೆದು ಹತ್ತು ದಿನಗಳ‌ ಒಳಗೆ ಸೇವೆಯನ್ನು ನೀಡಲಾಗುತ್ತಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು. 

ಈ ಸಂದರ್ಭದಲ್ಲಿ ಸಾರ್ವಜನಿಕ‌‌ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್ ಹಾಗೂ ಕರ್ನಾಟಕ‌ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಸುಮಂಗಲಾ ಉಪಸ್ಥಿತರಿದ್ದರು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp