ಮಾರಣಾಂತಿಕ ಕಾಯಿಲೆ: ಇನ್ನು ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ - ಮುತ್ತಪ್ಪ ರೈ

ಭೂಗತ ಜಗತ್ತಿನ ಕರಾಳ ದುನಿಯಾದಿಂದ ಹೊರಬಂದು ನೆಮ್ಮದಿಯ ಜೀವನ ನಡೆಸುತ್ತಿದ್ದ ಮುತ್ತಪ್ಪ ರೈ ಇದೀಗ ತಾವು ಇನ್ನು ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮುತ್ತಪ್ಪ ರೈ
ಮುತ್ತಪ್ಪ ರೈ

ಬೆಂಗಳೂರು: ಭೂಗತ ಜಗತ್ತಿನ ಕರಾಳ ದುನಿಯಾದಿಂದ ಹೊರಬಂದು ನೆಮ್ಮದಿಯ ಜೀವನ ನಡೆಸುತ್ತಿದ್ದ ಮುತ್ತಪ್ಪ ರೈ ಇದೀಗ ತಾವು ಇನ್ನು ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ ಎಂದು ಹೇಳಿದ್ದಾರೆ. 

ತಮ್ಮ ಅನಾರೋಗ್ಯದ ಕುರಿತು ಎದ್ದಿರುವ ಅನುಮಾನಗಳ ಬಗ್ಗೆ ಸೋಮವಾರ  ಬಿಡದಿ ಬಳಿಯ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಒಂದು ವರ್ಷದ  ಹಿಂದೆ ಕುಕ್ಕೆಗೆ ಹೋಗುವ ಸಂದರ್ಭದಲ್ಲಿ ಬೆನ್ನು ನೋವು ಕಾಣಿಸಿಕೊಂಡಿತು. ನಂತರದಲ್ಲಿ  ಪರೀಕ್ಷೆ ಮಾಡಿದಾಗ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಂತರ ದೆಹಲಿಯ  ಮ್ಯಾಕ್ಸ್, ಚೆನ್ಮೈನ ಅಪೋಲೊ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ  ಪಡೆದಿದ್ದೇನೆ. ಶೇ.90ರಷ್ಟು ಗುಣ ಆಗಿರುವುದಾಗಿ ವೈದ್ಯರು ಹೇಳಿದರು. 

ಆದರೆ ನಂತರದಲ್ಲಿ  ಮಿದುಳಿಗೆ ಕ್ಯಾನ್ಸರ್ ತಗುಲಿತ್ತು. ಕೆಲವು ತಿಂಗಳಷ್ಟೇ ಬದುಕುವುದಾಗಿ ವೈದ್ಯರು  ಹೇಳಿದರು. ಹೀಗಾಗಿ ಬಿಡದಿಗೆ ವಾಪಸ್ ಆಗಿದ್ದೇನೆ. ನನಗೀಗ 68 ವರ್ಷ. ಐದು ಗುಂಡು  ಬಿದ್ದರೂ ಬದುಕಿದವನು. ಸಾವಿಗೆ ಹೆದರುವುದಿಲ್ಲ. ವಿಲ್ ಪವರ್‌ನಿಂದ ಬದುಕುತ್ತಿದ್ದೇನೆ.  ಸಮಾಜ ಸೇವೆ ಮುಂದುವರಿಸುತ್ತೇನೆ ಎಂದು ತಿಳಿಸಿದರು.

‘ವರ್ಷಕ್ಕೆ 20 ರಿಂದ 30 ಕೋಟಿ ರೂ. ತೆರಿಗೆ ಕಟ್ಟುತ್ತಿದ್ದೇನೆ. ಆಸ್ತಿ ಕುರಿತು ಈಗಾಗಲೇ ವಿಲ್ ಮಾಡಿಸಿದ್ದು, ಮಕ್ಕಳಿಗೂ  ತಿಳಿಸಿದ್ದೇನೆ. ಕಳೆದ 15-20 ವರ್ಷಗಳಿಂದ ನನ್ನ ಜೊತೆಗಿರುವವರಿಗೆ ಒಂದೊಂದು ನಿವೇಶನ ಕೊಡುವಂತೆ ತಿಳಿಸಿದ್ದೇನೆ ಎಂದು ವಿವರಿಸಿದರು.

ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಮುತ್ತಪ್ಪ ರೈ ರಾಜೀನಾಮೆ
ಕ್ಯಾನ್ಸರ್ ರೋಗದಿಂದ ಬಳಲುತ್ತಿರುವುದರಿಂದ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ  ರಾಜೀನಾಮೆ ನೀಡಿದ್ದೇನೆ. ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು  ನೇಮಿಸಿದ್ದೇನೆ ಎಂದು ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com