ಬಿಸಿಯೂಟ ತಯಾರಕರಿಂದ ಬೃಹತ್ ಜಾಥಾ; ಬೇಡಿಕೆ ಈಡೇರಿಕೆಗೆ ಒತ್ತಾಯ; 2 ದಿನ ಬಿಸಿಯೂಟ ಬಂದ್

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರು ನಗರದಲ್ಲಿ ಎರಡು ದಿನಗಳ ಧರಣಿ ಹಮ್ಮಿಕೊಂಡಿದ್ದು, ರಾಜ್ಯ ಮೂಲೆ ಮೂಲೆಗಳಿಂದ ಸಾವಿರಾರು ಕಾರ್ಯಕರ್ತರು ಆಗಮಿಸಿ ಫ್ರೀಡಂ ಪಾರ್ಕ್‌ನಲ್ಲಿ ಜಮಾಯಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರು ನಗರದಲ್ಲಿ ಎರಡು ದಿನಗಳ ಧರಣಿ ಹಮ್ಮಿಕೊಂಡಿದ್ದು, ರಾಜ್ಯ ಮೂಲೆ ಮೂಲೆಗಳಿಂದ ಸಾವಿರಾರು ಕಾರ್ಯಕರ್ತರು ಆಗಮಿಸಿ ಫ್ರೀಡಂ ಪಾರ್ಕ್‌ನಲ್ಲಿ ಜಮಾಯಿಸಿದ್ದಾರೆ.

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ ಹಾಗೂ ಸಿಐಟಿಯುಸಿ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿರುವ ಧರಣಿಯಿಂದಾಗಿ ಎರಡು ದಿನ ಮಕ್ಕಳು ಬಿಸಿಯೂಟ ವಂಚಿತರಾಗಲಿದ್ದಾರೆ.

ಇಂದು ಬೆಳಗ್ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ ಮಹಿಳೆಯರು ಅಲ್ಲಿಂದ ಫ್ರೀಡಂ ಪಾರ್ಕ್ ವರೆಗೆ ಜಾಥಾ ನಡೆಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶ ನಡೆಸುತ್ತಿದ್ದಾರೆ. ಜಾಥಾದಿಂದ ಮೆಜೆಸ್ಟಿಕ್, ಕೆ.ಆರ್‌.ವೃತ್ತ, ಆನಂದರಾವ್ ವೃತ್ತಿ ಮುಂತಾದ ಕಡೆ ಸಂಚಾರ ದಟ್ಟಣೆ ಉಂಟಾಗಿತ್ತು.

ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ, ರಾಮನಗರ, ತುಮಕೂರು ಬೀದರ್ ಯಾದಗಿರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಿಳೆಯರು ಆಗಮಿಸಿದ್ದಾರೆ. 

ಎರಡು ದಿನಕ್ಕೆ ಬೇಕಾಗುವ ಉಪಹಾರ ಹಾಗೂ ಹಾಸಿಗೆ ಹೊದಿಕೆಯನ್ನು ಪ್ರತಿಭಟನಕಾರರು ತಂದಿದ್ದಾರೆ. ಕೆಲವು ಮಹಿಳೆಯರು ತಮ್ಮ ಕಂದಮ್ಮಗಳನ್ನು ಜೊತೆಗೆ ಕರೆದುಕೊಂಡು ಬಂದಿರುವ ದೃಶ್ಯ ಕಂಡುಬಂತು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಕಾರರು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ.

ರಾಜ್ಯದಲ್ಲಿ ಒಟ್ಟು 1 ಲಕ್ಷದ 18 ಸಾವಿರ ಬಿಸಿ ಊಟ ತಯಾರಕರಿದ್ದಾರೆ.  ಮುಖ್ಯ ಅಡಿಗೆಯವರಿಗೆ 2700 ರೂಪಾಯಿ, ಸಹಾಯಕ ಅಡುಗೆ ಮಾಡುವವರಿಗೆ 2600 ನೀಡಲಾಗುತ್ತಿದೆ.

ರಾಜ್ಯ ಸರ್ಕಾರ ಶೇ. 75ರಷ್ಟು ಕೇಂದ್ರ ‌ಸರ್ಕಾರ 25 ರಷ್ಟು ಹಣ ಪಾವತಿ ಮಾಡುತ್ತಿದೆ. ಆಳೆದ ಹದಿನೇಳು ವರ್ಷಗಳಿಂದ ಬಿಸಿ ಊಟ ತಯಾರು ಮಾಡುತ್ತಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಿಸಿ ಊಟ ತಯಾರು ಮಾಡುತ್ತಾರೆ. 

ಶಾಲೆಗಳಲ್ಲಿ ಹೆಚ್ಚುವರಿ ಮೆನು ಜಾರಿಗೆ ತಂದಿದ್ದಾರೆ. ಇದರಿಂದ‌ ಕೆಲಸ ಮಾಡಲು ಆಗುತ್ತಿಲ್ಲ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸ್ಕೂಲ್ ಗಳಲ್ಲಿ ಕೆಲಸ ಮಾಡಿಸಲಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಕನಿಷ್ಠ ವೇತನ ಜಾರಿಯಾಗಬೇಕು,  ಬಿಸಿಯೂಟ ಪೂರೈಕೆ ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರ ಕೈ ಬಿಡಬೇಕು,  ಕೆಲಸದ ಭದ್ರತೆ ಕೊಡಬೇಕು,  ಪ್ರತಿ ತಿಂಗಳು ಐದನೇ ದಿನಾಂಕದಂದು ವೇತನ ನೀಡಬೇಕು,  ನಮ್ಮನ್ನು ಕಾರ್ಮಿಕರು ಅಂತ ಪರಿಗಣಿಸಿ ಕಾರ್ಮಿಕ ಕಾಯ್ದೆಅಡಿಯಲ್ಲಿ ಸಿಗುವ ಸೌಲಭ್ಯ ಒದಗಿಸಿಕೊಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com