ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ

ಜೂನ್ 30 ರಂದು ರಾಜ್ಯದ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಸ್ಥಾನದ ಅವಧಿ ಮುಕ್ತಾಯಗೊಳ್ಳಲಿದ್ದು ಸಧ್ಯದಲ್ಲೇ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಲಿದೆ. ಅಷ್ಟರಲ್ಲಿ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿಕೊಳ್ಳುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮನವಿ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು:  ಜೂನ್ 30 ರಂದು ರಾಜ್ಯದ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಸ್ಥಾನದ ಅವಧಿ ಮುಕ್ತಾಯಗೊಳ್ಳಲಿದ್ದು ಸಧ್ಯದಲ್ಲೇ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಲಿದೆ. ಅಷ್ಟರಲ್ಲಿ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿಕೊಳ್ಳುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‌ ಧಾರವಾಡ, ಹಾವೇರಿ,ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರ, ಚಿತ್ರದುರ್ಗ, ದಾವಣಗೆರೆ, ತುಮಕೂರು,ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರ, ಬೀದರ್, ಗುಲ್ಬರ್ಗ, ಯಾದಗಿರಿ,ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳನ್ನು ಒಳಗೊಂಡ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅವಧಿ ಜೂನ್ 30 ಕ್ಕೆ ಮುಕ್ತಾಯವಾಗಲಿದೆ,ಈ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಸಧ್ಯದಲ್ಲೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಿದೆ ಎಂದರು.

2020 ರ ಜನವರಿ 16 ಕ್ಕೆ ಅನ್ವಯವಾಗುವಂತೆ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 68,049 ಮತದಾರರು, ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ 1,02,287 ಮತದಾರರು, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 24,941 ಮತದಾರರು ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 17,610 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. 2014 ರ ಮತದಾರರ ಪಟ್ಟಿಗೆ ಹೋಲಿಸಿದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಮಾತ್ರ ಹೆಚ್ಚು ಮತದಾರರು ಹೆಸರು ನೋಂದಾಯಿಸಿಕೊಂಡಿದ್ದು ಉಳಿದ ಮೂರು ಕ್ಷೇತ್ರದಲ್ಲಿ ಮತದಾರರ ನೋಂದಣಿಯಲ್ಲಿ  ಭಾರೀ ಇಳಿಕೆಯಾಗಿದೆ ಇದು ಅಸಂತೋಷದ ಬೆಳವಣಿಗೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಅವರು ಬೇಸರ ವ್ಯಕ್ತಪಡಿಸಿದರು.

ಇನ್ನೂ ಕೂಡ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ, ಇದಕ್ಕಾಗಿ ಜೂನ್ ವರೆಗೆ ಸಮಯವಿದೆ ಎಂದು ಕಾಯದೇ ಈಗಲೇ ಅರ್ಜಿ ಸಲ್ಲಿಸಿ, ಏಳು‌ ದಿನ ಅರ್ಜಿ ಪರಿಶೀಲನೆಗೆ ಸಮಯ ಬೇಕಾಗಲಿದೆ, ಹಾಗಾಗಿ ಕಡೆಯ ದಿನಕ್ಕೆ ಕಾಯದೇ ಈಗಲೇ ಹೆಸರು ನೋಂದಾಯಿಸಿಕೊಳ್ಳಿ ಎಂದರು. 

ಪದವೀಧರರ ಕ್ಷೇತ್ರದ ಚುನಾವಣಾ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಯಾವುದೇ ಪದವಿಯ ಫಲಿತಾಂಶ ಪ್ರಕಟಗೊಂಡು ಮೂರು ವರ್ಷ ಆಗಿರುವ ಪ್ರೌಢಶಾಲೆ ಅಥವಾ ಸಮಾನಾರ್ಥಕ ಶಿಕ್ಷಣದಲ್ಲಿ ಕಳೆದ ಆರು ವರ್ಷದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದವರು ಮತದಾರರಾಗಲು ಅರ್ಹರಾಗಿದ್ದು, ಅಂತಹವರು, ಪದವಿ ಪ್ರಮಾಣ ಪತ್ರ, ಶಿಕ್ಷಕರ ಪ್ರಮಾಣ ಪತ್ರ ಹಾಗೂ ನಿವಾಸದ ದೃಢೀಕರಣ ಪತ್ರ ನೀಡಿ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸುವಂತೆ ಸಲಹೆ ಮಾಡಿದರು. 

ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬೆಳಗಾವಿ ಪ್ರಾದೇಶಿಕ ಆಯುಕ್ತರು, ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬೆಂಗಳೂರು ಪ್ರಾದೇಶಿಕ ಆಯುಕ್ತರು, ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಗುಲ್ಬರ್ಗ ಪ್ರಾದೇಶಿಕ ಆಯುಕ್ತರು ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಬೆಂಗಳೂರು ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಲಿದ್ದಾರೆ‌ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com