ಮಂಗಳೂರು ಗೋಲಿಬಾರ್: ಎಲ್ಲೆ ಮೀರಿದ ಪೊಲೀಸರು, ನ್ಯಾಯಾಂಗ ತನಿಖೆ ಕೋರಿದ ಪೀಪಲ್ಸ್ ಟ್ರಿಬ್ಯುನಲ್

ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಎಲ್ಲೆ ಮೀರಿ ನಡೆದುಕೊಂಡಿದ್ದು, ಈ ಕುರಿತು ನ್ಯಾಯಾಂಗ ತನಿಖೆಯ ಅಗತ್ಯ ಇದೆ...
ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ದೃಶ್ಯ
ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ದೃಶ್ಯ

ಮಂಗಳೂರು: ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಎಲ್ಲೆ ಮೀರಿ ನಡೆದುಕೊಂಡಿದ್ದು, ಈ ಕುರಿತು ನ್ಯಾಯಾಂಗ ತನಿಖೆಯ ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ನೇತೃತ್ವದ 'ಪೀಪಲ್ಸ್‌ ಟ್ರಿಬ್ಯುನಲ್‌' ವರದಿ ಹೇಳಿದೆ.

'ಪೀಪಲ್ಸ್‌ ಟ್ರಿಬ್ಯುನಲ್‌'ನಲ್ಲಿ ಹಿರಿಯ ವಕೀಲ ಬಿ.ಟಿ. ವೆಂಕಟೇಶ್‌ ಮತ್ತು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಸದಸ್ಯರಾಗಿದ್ದು, ಡಿಸೆಂಬರ್ 19ರಂದು ನಡೆದ ಗೋಲಿಬಾರ್ ನಲ್ಲಿ ಮೃತಪಟ್ಟ, ಗಾಯಗೊಂಡವರ ಹಾಗೂ ಹಲವು ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸಿ ವರದಿ ಸಿದ್ಧಪಡಿಸಿದೆ.

ಸಿಎಎ ವಿರುದ್ಧ ಪ್ರತಿಭಟನೆಗೆ ಅನುಮತಿ ನೀಡುವ ವಿಷಯದಲ್ಲಿ ಆರಂಭದಿಂದಲೂ ಕಣ್ಣಾಮುಚ್ಚಾಲೆ ಆಡಿದ ನಗರ ಪೊಲೀಸರು, ಡಿಸೆಂಬರ್‌ 19ರಂದು ದುರುದ್ದೇಶದಿಂದಲೇ ಗುಂಡುಹಾರಿಸಿ ಇಬ್ಬರನ್ನು ಹತ್ಯೆ ಮಾಡಿದ್ದಾರೆ' ಎಂಬ ಆರೋಪ ಪೀಪಲ್ಸ್ ಟ್ರಿಬ್ಯುನಲ್('ಜನತಾ ಅದಾಲತ್‌)ನಲ್ಲಿ ವ್ಯಕ್ತವಾಗಿದೆ.

ಮಂಗಳೂರು ಪೊಲೀಸರು, ಕರ್ನಾಟಕ ಪೊಲೀಸ್ ಕೈಪಿಡಿಯಲ್ಲಿ ನೀಡಲಾಗಿರುವ ಅಧಿಕಾರದ ವ್ಯಾಪ್ತಿಯನ್ನು ಮೀರಿ ವರ್ತಿಸಿದ್ದಾರೆ. ಇಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಅಗತ್ಯವೇ ಇರಲಿಲ್ಲ ಮತ್ತು ನಿಷೇಧಾಜ್ಞೆ ಜಾರಿಗೊಳಿಸುವ ಬಗ್ಗೆ ಡಿಸೆಂಬರ್ 18ರಂದು ಸಂಜೆ ಆ ಪ್ರದೇಶದ ನಿವಾಸಿಗಳಿಗೆ ಪೊಲೀಸರು ಸರಿಯಾಗಿ ಮಾಹಿತಿ ನೀಡಲಿಲ್ಲ ಎಂಬ ಸಂಗತಿ ವಿಚಾರಣೆ ವೇಳೆ ಬಹಿರಂಗವಾಗಿದೆ.

ನಿಷೇಧಾಜ್ಞೆ ಜಾರಿಗೊಳಿಸಿದ ನಂತರವೂ ಅದನ್ನು ಯಾವಾಗ ಹಿಂಪಡೆಯಲಾಗುವುದು ಎಂಬ ಮಾಹಿತಿ ನೀಡಲಿಲ್ಲ. ಒಟ್ಟಿನಲ್ಲಿ ಸಂವಹನದ ಸಂಪೂರ್ಣ ಕೊರತೆಯ ಪರಿಣಾಮ, ಪ್ರತಿಭಟನೆಯೊಂದಿಗೆ ಯಾವುದೇ ಸಂಬಂಧವಿಲ್ಲದ ನಾಗರಿಕರ ಮೇಲೆ ವಿವೇಚನೆಯಿಲ್ಲದೆ ಲಾಠಿಚಾರ್ಜ್ ಮಾಡಿ, ಅವರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದರು ಎಂದು ವರದಿ ತಿಳಿಸಿದೆ.

ನ್ಯಾಯಮಂಡಳಿಯ ಮುಂದೆ ಹಾಜರಾದ ಗೋಲಿಬಾರ್ ಸಂತ್ರಸ್ತರು, ಸಾಕ್ಷಿಗಳು, ಹಿಂಸಾಚಾರದ ಸ್ಥಳದಲ್ಲಿ ಹಾಜರಿದ್ದ ಪೊಲೀಸರು ಬೇಜವಾಬ್ದಾರಿಯನ್ನು ಎತ್ತಿ ತೋರಿಸಿದ್ದಾರೆ.

ಅದಾಲತ್‌ ಕಲಾಪಕ್ಕೆ ಹಾಜರಾಗಿ ಅಹವಾಲು ಹೇಳಿಕೊಂಡ ಘಟನೆಯ ಪ್ರತ್ಯಕ್ಷದರ್ಶಿಗಳು, ಪೆಟ್ಟು ತಿಂದು ಗಾಯಗೊಂಡವರು, ಮೃತರ ಕುಟುಂಬದ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಪೊಲೀಸರ ವಿರುದ್ಧ ನೇರ ಆರೋಪಗಳನ್ನು ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com