ಗುತ್ತಿಗೆ ಕೃಷಿ ಕಾನೂನುಬದ್ಧ: ಅಕ್ರಮ-ಸಕ್ರಮ ಯೋಜನೆಯಡಿ 10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ

ಕೃಷಿ ಉತ್ಪಾದನೆ ಹಾಗೂ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಒಪ್ಪಂದ ಕೃಷಿಗೆ ಆದ್ಯತೆ ದೊರೆಯುತ್ತಿದ್ದು, ಅದನ್ನು ಕಾನೂನು ಬದ್ಧಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. 
ಆರ್.ಅಶೋಕ್
ಆರ್.ಅಶೋಕ್

ಬೆಂಗಳೂರು: ಕೃಷಿ ಉತ್ಪಾದನೆ ಹಾಗೂ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಒಪ್ಪಂದ ಕೃಷಿಗೆ ಆದ್ಯತೆ ದೊರೆಯುತ್ತಿದ್ದು, ಅದನ್ನು ಕಾನೂನು ಬದ್ಧಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿದ ಅವರು,  ಬೇಸಾಯ ಮಾಡದ ಜಮೀನು ಪಾಳು ಬಿಡುವುದನ್ನು ತಪ್ಪಿಸಲು ಸಾಮೂಹಿಕವಾಗಿ ರೈತರೇ ಮುಂದೆ ಬಂದು ಗುತ್ತಿಗೆ ನೀಡುವುದಾದರೆ ಅದನ್ನು ಕಾನೂನು ಬದ್ಧಗೊಳಿಸಲು ಉದ್ದೇಶಿಸಲಾಗಿದೆ. 

ಜಮೀನು ಗುತ್ತಿಗೆ ಕೊಡುವವರು ಮತ್ತು ತೆಗೆದುಕೊಳ್ಳುವವರು ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ಕಳೆದ 30 ವರ್ಷಗಳಿಂದ ಆತಂಕದಲ್ಲಿದ್ದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಜನರಿಗೆ ಹಕ್ಕುಪತ್ರ ವಿತರಣೆಗೆ ಈಗ ಕಾಲ ಕೂಡಿ ಬಂದಿದೆ. 

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳು ಹಲವು ಸಭೆ ನಡೆಸಿ ಹಕ್ಕುಪತ್ರ ವಿತರಣೆಗೆ ಸಿದ್ಧತೆ ನಡೆಸಿದ್ದಾರೆ. 

ಈ ಅರ್ಜಿಗಳು 30 ವರ್ಷದಿಂದ ವಿಲೇವಾರಿಯಾಗಿರಲಿಲ್ಲ. ಈಗ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಪತಿ ಮತ್ತು ಪತ್ನಿ ಹೆಸರಿಗೆ ಜಂಟಿ ಖಾತೆ ಮಾಡಿಕೊಡಲಾಗುವುದು. 

ನೋಂದಣಿ ಮಾಡಿಸಿಕೊಳ್ಳಲು ಬರುವ ಫಲಾನುಭವಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಸರ್ಕಾರ ಮಾಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಂಕೇತಿಕವಾಗಿ ಹಕ್ಕುಪತ್ರ ವಿತರಣೆ ಮಾಡಿದ ಬಳಿಕ ನೋಂದಣಿ ಶುರುವಾಗಲಿದೆ ಎಂದು ಅಶೋಕ್ ಹೇಳಿದ್ದಾರೆ. 

ಅಕ್ರಮ ಸಕ್ರಮ ಯೋಜನೆಯಡಿ ಬೆಂಗಳೂರಿನ 10 ಸಾವಿರ ಫಲಾನುಭವಿಗಳಿಗೆ ಮನೆಯ ಹಕ್ಕುಪತ್ರ ಕೊಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. 

ಹಕ್ಕುಪತ್ರದ ಜೊತೆಗೆ ಫಲಾನುಭವಿಗಳ ಹೆಸರಿಗೆ ನೋಂದಣಿ ಮಾಡಲು ಸಿದ್ಧತೆಗಳನ್ನು ಕಂದಾಯ ಇಲಾಖೆ ಮಾಡಿಕೊಂಡಿದ್ದು, ನಾಳೆ ಏಕಕಾಲಕ್ಕೆ ರಾಜ್ಯಾದ್ಯಂತ ಯೋಜನೆ ಜಾರಿಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com