ಫೆ.17ರಿಂದ ಅಧಿವೇಶನ ಆರಂಭ: 7 ವಿಧೇಯಕ, 2 ಸುಗ್ರೀವಾಜ್ಞೆ ಮಂಡನೆಗೆ ಸರ್ಕಾರ ನಿರ್ಧಾರ

ಸಾರ್ವಜನಿಕ ಟ್ರಸ್ಟ್ ವಿಧೇಯಕ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಸೇರಿ 7-8 ವಿಧೇಯಕಗಳು ಹಾಗೂ 2 ಸುಗ್ರೀವಾಜ್ಞೆಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ. 
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ

ಬೆಂಗಳೂರು: ಸಾರ್ವಜನಿಕ ಟ್ರಸ್ಟ್ ವಿಧೇಯಕ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಸೇರಿ 7-8 ವಿಧೇಯಕಗಳು ಹಾಗೂ 2 ಸುಗ್ರೀವಾಜ್ಞೆಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ. 

2011ರಲ್ಲಿ ಅಂದಿನ ಬಿಜೆಪಿ ಸರ್ಕಾರವು ಕರ್ನಾಟಕ ಸಾರ್ವಜನಿಕ ಟ್ರಸ್ಟ್ ವಿಧೇಯಕವನ್ನು ವಿಧಾನಮಂಡಲದಲ್ಲಿ ಅಂಗೀಕರಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು. ಆದರೆ, ಆಡಳಿತ ಮತ್ತು ಪ್ರತಿ ಪಕ್ಷದ ತೀವ್ರ ವಿರೋಧದಿಂದಾಗಿ ನಂತರ ವಾಪಸ್ ಪಡೆಯಲಾಯಿತು. ಇದೀಗ ಮತ್ತೊಮ್ಮೆ ಟ್ರಸ್ಟ್ ವಿಧೇಯಕವನ್ನು ಮಂಡಿಸಲು ನಿರ್ಧರಿಸಿದೆ. 

ಟ್ರಸ್ಟ್ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಲುವ ಸಂಬಂಧ ಕರ್ನಾಟಕ ಸಾರ್ವಜನಿಕ ಟ್ರಸ್ಟ್ ಕಾಯ್ದೆ ಮಂಡನೆ ಮಾಡಲು ನಿರ್ಧರಿಸಲಾಗಿದೆ. ಟ್ರಸ್ಟಿ ಹೆಸರಲ್ಲಿ ಅಕ್ರಮ ಜಮೀನು ಮಾರಾಟ ತಡೆಯಲು ಕಾಯ್ದೆ ಸಹಕಾರಿಯಾಗಲಿದೆ. 

ಸೂಕ್ತ ನಿಯಮಾವಳಿಗಳು ಇಲ್ಲದ ಕಾರಣ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಕಾಯ್ದೆ ಮಂಡನೆಗೆ ಮುಂದಾಗಿದ್ದೇವೆಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿಯವರು ಹೇಳಿದ್ದಾರೆ. 

ಫೆ.17ರಂದು ಜಂಟಿ ಅಧಿವೇಶನ ಕರೆಯಲಾಗಿದ್ದು, ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 18 ರಂದು ವಿಧೇಯಕಗಳು ಹಾಗೂ ಸುಗ್ರೀವಾಜ್ಞೆಗಳನ್ನು ಮಂಡಿಸಲಾಗುವುದು. ನಂತರ ಅವುಗಳ ಸಾಧಕ-ಬಾಧಕಗಳ ಕುರಿತು ಚರ್ಚೆಗೆ ಅವಕಾಶ ನೀಡಲಾಗುವುದು. ಮಾ.5 ರಂದು ಬಜೆಟ್ ಮಂಡನೆಯಾಗಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಒಟ್ಟು 21 ದಿನಗಳ ಕಾಲ ಕಾರ್ಯಕಲಾಪ ನಡೆಯಲಿರುವ ಬಜೆಟ್ ಅಧಿವೇಶನವು ಮಾ.31ರಂದು ಕೊನೆಗೊಳ್ಳಲಿದೆ ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com