ಮ್ಯಾನ್ ವರ್ಸಸ್ ವೈಲ್ಡ್ ಚಿತ್ರೀಕರಣ ವೇಳೆ ರಜನಿಕಾಂತ್ ಗೆ ಗಾಯವಾಗಿಲ್ಲ, ಪರಚಿದ್ದಷ್ಟೇ: ಅರಣ್ಯಾಧಿಕಾರಿಗಳ ಸ್ಪಷ್ಟನೆ
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸೂಕ್ಷ್ಮ ಪ್ರದೇಶಗಳಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಚಿತ್ರೀಕರಣದ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಗೆ ಸಣ್ಣಪುಟ್ಟ ಪರಚಿದ ಗಾಯಗಳಾಗಿವೆಯಷ್ಟೇ, ಬೇರೇನೂ ತೊಂದರೆಯಾಗಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
Published: 29th January 2020 01:13 PM | Last Updated: 29th January 2020 01:13 PM | A+A A-

ಬಂಡೀಪುರ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸೂಪರ್ ಸ್ಟಾರ್ ರಜನಿಕಾಂತ್
ಮೈಸೂರು/ಬೆಂಗಳೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸೂಕ್ಷ್ಮ ಪ್ರದೇಶಗಳಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಚಿತ್ರೀಕರಣದ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಗೆ ಸಣ್ಣಪುಟ್ಟ ಪರಚಿದ ಗಾಯಗಳಾಗಿವೆಯಷ್ಟೇ, ಬೇರೇನೂ ತೊಂದರೆಯಾಗಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಚಿತ್ರೀಕರಣದ ವೇಳೆ ರಜನಿಕಾಂತ್ ಅವರು ಮುಳ್ಳೆಹೊಳೆ, ಚಮ್ಮನಾಲ್ ಪ್ರದೇಶಗಳಲ್ಲಿ ಲಾಂಟಾನಾ ಕಳೆಗಳಿಂದ ಕೈ, ತೋಳುಗಳ ಮೇಲೆ ಪರಚಿದ ಗಾಯಗಳಾಗಿದೆ, ಇದರಿಂದ ಶೂಟಿಂಗ್ ಸಮಯವನ್ನು ಸ್ವಲ್ಪ ಕಡಿಮೆ ಮಾಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ರಜನಿಕಾಂತ್ ಅವರು ಒಂದೇ ದಿನಕ್ಕೆ ಶೂಟಿಂಗ್ ಮಾಡಲು ಅನುಮತಿ ಹೊಂದಿದ್ದರಿಂದ ಇನ್ನೊಂದು ದಿನ ಶೂಟಿಂಗ್ ಗೆ ಬರುವುದಿಲ್ಲ. ಅವರಿಗೇನು ಗಂಭೀರ ಗಾಯಗಳಾಗಿಲ್ಲ. ಸಣ್ಣಪುಟ್ಟ ಪರಚಿದ ಗಾಯಗಳಾಗಿದ್ದು ಕೂಡಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎಂದು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾನ್ ವರ್ಸಸ್ ವೈಲ್ಡ್ ಸರಣಿ ಸಾಕ್ಷ್ಯಚಿತ್ರ ತಯಾರಕ, ಇಂಗ್ಲೆಂಡ್ ಮೂಲದ ಸಾಹಸಿಗ ಬೇರ್ ಗ್ರಿಲ್ಸ್ ಮತ್ತು ಅವರ ತಂಡದ ಜೊತೆ ರಜನಿಕಾಂತ್ ಅವರು ಸಾಕ್ಷ್ಯಚಿತ್ರ ಶೂಟಿಂಗ್ ನಲ್ಲಿ ನಿರತರಾಗಿದ್ದರು.
ಈ ಹಿಂದೆ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು.