ನೂತನ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಪ್ರವೀಣ್ ಸೂದ್ ಅಧಿಕಾರ ಸ್ವೀಕಾರ

ಹಿರಿಯ ಐಪಿಎಸ್ ಅಧಿಕಾರಿ, ಸಿಐಡಿಯ ಡಿಜಿಪಿ ಪ್ರವೀಣ್ ಸೂದ್ ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಪ್ರವೀಣ್ ಸೂದ್
ಪ್ರವೀಣ್ ಸೂದ್

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ, ಸಿಐಡಿಯ ಡಿಜಿಪಿ ಪ್ರವೀಣ್ ಸೂದ್ ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ನೇಮಕ ಹೊರಬೀಳುತ್ತಿದ್ದಂತೆ ಪ್ರವೀಣ್ ಸೂದ್ ಅವರು ಡಿಜಿ-ಐಜಿ ಆಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಡಿಜಿ-ಐಜಿ ನೀಲಮಣಿ ಎನ್ ರಾಜು ಅವರು ಅಧಿಕಾರ ಹಸ್ತಾಂತರಿಸಿದರು.

ಇಂದು ನೀಲಮಣಿ ಎನ್ ರಾಜು ನಿವೃತ್ತಿಯಾಗಿದ್ದು, ಬೆಳಗ್ಗೆ ಅವರಿಗೆ ಬೀಳ್ಕೊಡುಗೆ ನೀಡಲಾಗಿತ್ತು. ಡಿಜಿ ಸ್ಥಾನಕ್ಕೆ ಎ.ಎಂ.ಪ್ರಸಾದ್ ಹಾಗೂ ಪ್ರವೀಣ್ ಸೂದ್ ಅವರ ನಡುವೆ ಭಾರೀ ಪೈಪೋಟಿ ನಡೆದಿತ್ತು. ಹಿರಿತನದ ಆಧಾರದಲ್ಲಿ ಎ.ಎಂ.ಪ್ರಸಾದ್ ಅವರೇ ಡಿಜಿ ಹುದ್ದೆಗೆ ಆಯ್ಕೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂತಿಮವಾಗಿ ರಾಜ್ಯ ಸರ್ಕಾರ ಪ್ರವೀಣ್ ಸೂದ್ ಅವರಿಗೆ ಮಣೆ ಹಾಕಿದೆ.

1986ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಪ್ರವೀಣ್ ಸೂದ್  ಅವರಿಗೆ ನಾಲ್ಕು ವರ್ಷಗಳ ಸೇವಾ ಅವಧಿ ಇದೆ. 

ಹಿಮಾಚಲ ಪ್ರದೇಶ ಮೂಲದವರಾದ ಸೂದ್ ಅವರು, ಬಿ. ಟೆಕ್ ಹಾಗೂ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1989 ಮೈಸೂರು ಎಎಸ್‌ಪಿಯಾಗಿ ವೃತ್ತಿ ಆರಂಭಿಸಿದ್ದ ಅವರು, ಬಳ್ಳಾರಿ, ರಾಯಚೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಅದೇ ರೀತಿ 1999 ನಲ್ಲಿ ಮಾರಿಷಸ್ ದೇಶದ ಪೊಲೀಸ್ ಸಲಹೆಗಾರರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. 2004-07 ರಲ್ಲಿ ಮೈಸೂರು ಆಯುಕ್ತರಾಗಿ,  2008ರಲ್ಲಿ ಬೆಂಗಳೂರು ನಗರ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.  1996 ರಲ್ಲಿ ಮುಖ್ಯಮಂತ್ರಿಗಳ ಪದಕ, 2002ರಲ್ಲಿ ಪೊಲೀಸ್ ಪದಕ, 2011 ರಲ್ಲಿ ರಾಷ್ಟ್ರಪತಿ ಪದಕ ಪಡೆದಿದ್ದಾರೆ. 2013-14 ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕರಾಗಿ, 2017 ರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮೂವರು ಐಪಿಎಸ್ ಅಧಿಕಾರಿಗಳನ್ನು ಕೂಡ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ರೈಲ್ವೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌ ಅವರಿಗೆ ಭಡ್ತಿ ನೀಡಿ, ಬಂಧೀಖಾನೆ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿ ವರ್ಗಾವಣೆ ಮಾಡಿದೆ. ಬಂಧೀಖಾನೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ  ಎನ್‌.ಎಸ್. ಮೇಘರಿಕ್ ಅವರಿಗೆ ಭಡ್ತಿ ನೀಡಿ ಸಿಐಡಿಯ ಡಿಜಿಪಿಯಾಗಿ ನೇಮಕ ಮಾಡಿದೆ. 
ಸಂಹವನ ಮತ್ತು ಲಾಜಿಸ್ಟಿಕ್, ಆಧುನೀಕರಣ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಆರ್‌.ಪಿ.ಶರ್ಮಾ ಅವರಿಗೆ ಭಡ್ತಿ ನೀಡಿ ರಾಜ್ಯ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷರಾಗಿ ನೇಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com