ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ: ಕೊರೋನಾ ರೋಗಿಗಳ ಕಷ್ಟ ಕೇಳುವವರಿಲ್ಲ!

ಕೊರೋನಾ ಲಾಕ್ ಡೌನ್ ಜನರಿಗೆ ತಂದೊಡ್ಡಿದ ಸಂಕಷ್ಟಗಳಲ್ಲಿ ಆರ್ಥಿಕ ಸಂಕಷ್ಟ ಮುಖ್ಯವಾದದ್ದು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚಗಳನ್ನು ಭರಿಸಲು ಸಾಧ್ಯವಾಗದೆ ರೋಗಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ, ಇನ್ಷೂರೆನ್ಸ್ ಸಿಗುತ್ತದೆ ಎಂಬ ಖಚಿತತೆ ಇದ್ದರೂ ಕೂಡ ಎಷ್ಟು ಸಿಗುತ್ತದೆ, ಎಷ್ಟು ಹಣ ತಾವು ಭರಿಸಬೇಕು ಎಂಬ ಗೊಂದಲದಲ್ಲಿ ರೋಗಿಗಳ ಮನೆಯವರಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಲಾಕ್ ಡೌನ್ ಜನರಿಗೆ ತಂದೊಡ್ಡಿದ ಸಂಕಷ್ಟಗಳಲ್ಲಿ ಆರ್ಥಿಕ ಸಂಕಷ್ಟ ಮುಖ್ಯವಾದದ್ದು. ಕೊರೋನಾ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚಗಳನ್ನು ಭರಿಸಲು ಸಾಧ್ಯವಾಗದೆ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಇನ್ಷೂರೆನ್ಸ್ ಸಿಗುತ್ತದೆ ಎಂಬ ಖಚಿತತೆ ಇದ್ದರೂ ಕೂಡ ಎಷ್ಟು ಸಿಗುತ್ತದೆ, ಎಷ್ಟು ಹಣ ತಾವು ಭರಿಸಬೇಕು ಎಂಬ ಗೊಂದಲದಲ್ಲಿ ರೋಗಿಗಳ ಮನೆಯವರಿದ್ದಾರೆ.

ನರ್ಸರಿ ಶಾಲೆ ನಡೆಸುತ್ತಿದ್ದ ರಾಜಿ(ಹೆಸರು ಬದಲಿಸಲಾಗಿದೆ) ಎನ್ನುವವರ ಉದ್ಯಮ ಲಾಕ್ ಡೌನ್ ನಿಂದಾಗಿ ತೀವ್ರ ಕಷ್ಟಕ್ಕೆ ಸಿಲುಕಿದೆ. ಸೈಕಲ್ ಅಂಗಡಿ ಮಾಲೀಕರಾಗಿರುವ ಅವರ ಪತಿಗೆ ಕೊರೋನಾ ಸೋಂಕು ತಗಲಿದ್ದು ಅವರ ಕುಟುಂಬಕ್ಕೆ ಇನ್ನಷ್ಟು ಆಘಾತವನ್ನುಂಟುಮಾಡಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಲು 38 ಸಾವಿರ ರೂಪಾಯಿ ಪಾವತಿಸಬೇಕಾಗಿತ್ತಂತೆ. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಇಲ್ಲಿಗೆ ಬಂದಿದ್ದೇವೆ ಎನ್ನುತ್ತಾರೆ.

10 ದಿನಕ್ಕೆ ಖಾಸಗಿ ಆಸ್ಪತ್ರೆಯಲ್ಲಿ 1 ಲಕ್ಷದ 78 ಸಾವಿರ ರೂಪಾಯಿ ಬಿಲ್ ಮಾಡಿದ್ದಾರೆ. ಇನ್ಷೂರೆನ್ಸ್ ಹಣ ಎಷ್ಟು ಬರುತ್ತದೆ ಎಂದು ಗೊತ್ತಿಲ್ಲ. ಚಿಕಿತ್ಸೆ ಮತ್ತು ರೋಗಿಯ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಆಸ್ಪತ್ರೆ ಬಿಲ್ ಬದಲಾಗುತ್ತಿರುತ್ತದೆ. ತಮ್ಮ ಆಸ್ಪತ್ರೆಗಳಲ್ಲಿ ಸರ್ಕಾರ, ರೋಗಿಗಳಿಗೆ ಬೆಡ್ ಸೌಕರ್ಯ ನೀಡದಿದ್ದರೆ ನಮಗೆ ಬಿಲ್ ಪಾವತಿಸಲು ಸಾಧ್ಯವಾಗದಿರುವುದರಿಂದ ಕೊರೋನಾ ಲಕ್ಷಣಗಳಿಲ್ಲದರನ್ನು ಮನೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿ ಇರಲು ಕಳುಹಿಸಿ ನಮ್ಮಂಥವರನ್ನು ದಾಖಲಿಸಿಕೊಳ್ಳಬೇಕು. ನನ್ನ ಪತ್ನಿಗೆ ಆಕೆಯ ಶಾಲೆಯ ಸಿಬ್ಬಂದಿಗೆ ಸಂಪೂರ್ಣ ವೇತನ ನೀಡಬೇಕು, ಹೋಂ ಲೋನ್ ಬೇರೆ ಇದೆ, ಇಷ್ಟು ಆರ್ಥಿಕ ಸಮಸ್ಯೆಗಳಿರುವಾಗ ಎಲ್ಲಿಂದ ಹಣ ತರುವುದು ಎಂದು ರಾಜಿಯವರ ಪತಿ ಕೇಳುತ್ತಾರೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಷ್ಮಾ(ಹೆಸರು ಬದಲಿಸಲಾಗಿದೆ)ಗೆ ಅವರು ಕೆಲಸ ಮಾಡುತ್ತಿರುವ ಕಂಪೆನಿಯಲ್ಲಿ ಆಸ್ಪತ್ರೆ ಬಿಲ್ ನ್ನು ಒಂದು ಹಂತದವರೆಗೆ ಭರಿಸಬಹುದು ಎಂದು ಭರವಸೆ ಕೊಟ್ಟಿದ್ದಾರಂತೆ. 10 ದಿನಕ್ಕೆ ಆಸ್ಪತ್ರೆ ಬಿಲ್ ಸುಮಾರು ಒಂದೂವರೆ ಲಕ್ಷದವರೆಗೆ ಬರುತ್ತದೆ. ನನಗೆ ಇನ್ಷೂರೆನ್ಸ್ ಸಿಗುತ್ತದೆ ಅಲ್ಲದೆ ಸಣ್ಣ ಮಟ್ಟಿನ ಕೊರೋನಾ ಲಕ್ಷಣ ಇರುವುದರಿಂದ ಇಬ್ಬರು ಇರುವ ಬೆಡ್ ನಲ್ಲಿ ಉಳಿದುಕೊಂಡಿದ್ದೇನೆ. ಅಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ಸೌಲಭ್ಯವಿಲ್ಲ, ದಿನಕ್ಕೆ 12 ಸಾವಿರದಿಂದ 14 ಸಾವಿರದವರೆಗೆ ಬಿಲ್ ಆಗುತ್ತದೆ. ತೀವ್ರ ಜ್ವರದಿಂದ ಬಳಲುತ್ತಿದ್ದು ಆಸ್ಪತ್ರೆಗಳಲ್ಲಿ ದಾಖಲಾದವರ ಕಥೆ ಏನು ಎಂದು ಕೇಳುತ್ತಾರೆ ಸುಷ್ಮಾ.

ಮರ್ಸಿ ಮಿಷನ್ ಎಂಬ ಎನ್ ಜಿಒದ ಸದಸ್ಯೆ ಡಾ ರೂಹಿ, ಕೋವಿಡ್-19 ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಯೊಂದು ಪ್ರತಿ ದಿನಕ್ಕೆ 50 ಸಾವಿರ ಸಾಮಾನ್ಯ ವಾರ್ಡ್ ಗೆ ಮತ್ತು ಐಸಿಯುಗೆ 90 ಸಾವಿರ ರೂಪಾಯಿ ಶುಲ್ಕ ಹಾಕುತ್ತಿದೆ ಎನ್ನುತ್ತಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸಾಮಾನ್ಯ ವಾರ್ಡ್ ಗೆ ದಿನಕ್ಕೆ 10 ಸಾವಿರ ರೂಪಾಯಿ ಮತ್ತು ಅಧಿಕ ಅವಲಂಬಿತ ಘಟಕಗಳಿಗೆ 12 ಸಾವಿರ ರೂಪಾಯಿ, ಪ್ರತ್ಯೇಕ ವೆಂಟಿಲೇಟರ್ ಇಲ್ಲದ ಐಸಿಯು ಘಟಕಕ್ಕೆ 15 ಸಾವಿರ ರೂಪಾಯಿ, ಐಸಿಯು ಇರುವ ವೆಂಟಿಲೇಟರ್ ಘಟಕಕ್ಕೆ 25 ಸಾವಿರ ರೂಪಾಯಿ ಎಂದು ರಾಜ್ಯ ಸರ್ಕಾರ ಕಳೆದ ವಾರ ದರ ನಿಗದಿಪಡಿಸಿತ್ತು. ಅದನ್ನು ಖಾಸಗಿ ಆಸ್ಪತ್ರೆಗಳು ಎಷ್ಟು ಪಾಲಿಸುತ್ತಿವೆ ಎಂಬುದು ಪ್ರಶ್ನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com